ಹೊಸದಿಲ್ಲಿ: ಬಿಹಾರ, ಪಶ್ಚಿಮ ಬಂಗಾಲ, ಉತ್ತರಪ್ರದೇಶ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಮಳೆ, ಪ್ರವಾಹ ಸ್ಥಿತಿ ಮುಂದುವರಿದಿದೆ.
ಆಗಸ್ಟ್ 1ರವರೆಗೆ ಈ ರಾಜ್ಯಗಳಲ್ಲಿ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಅಸ್ಸಾಂ ಬಳಿಕ ಬಿಹಾರವೂ ಭೀಕರ ಪ್ರವಾಹಕ್ಕೆ ತುತ್ತಾಗಿದೆ. 24.42 ಲಕ್ಷ ಮಂದಿ ನಿರ್ವಸಿತರಾಗಿದ್ದು, ಪ್ರವಾಹ ಸಂಬಂಧಿ ಘಟನೆಗಳಿಗೆ ಈವರೆಗೆ 10 ಮಂದಿ ಬಲಿಯಾಗಿದ್ದಾರೆ.
11 ಜಿಲ್ಲೆಗಳು ಜಲಾವೃತವಾಗಿದ್ದು, ದರ್ಭಾಂಗಾದಲ್ಲಿ ಅತ್ಯಧಿಕ ಹಾನಿ ಉಂಟಾಗಿದೆ. ಇಲ್ಲಿ ಪೊಲೀಸ್ ಠಾಣೆಗಳು ಹಾಗೂ ಪರಿಹಾರ ಶಿಬಿರಗಳು ಕೂಡ ಮುಳುಗಡೆಯಾಗಿವೆ.
ಸಾವು- ನೋವು: ಧಾರಾಕಾರ ಮಳೆಯು ಉತ್ತರ ಬಂಗಾಲ ಮತ್ತು ಸಿಲಿಗುರಿ ನಡುವಿನ ಸಂಪರ್ಕವನ್ನೇ ಕಡಿತಗೊಳಿಸಿದೆ. ಹೆದ್ದಾರಿಯಲ್ಲಿನ ಸೇತುವೆಯೊಂದು ಹಾನಿಗೀಡಾದ ಕಾರಣ ಮಂಗಳವಾರ ಇಲ್ಲಿ ಅಪಘಾತ ಸಂಭವಿಸಿ ಇಬ್ಬರು ಮೃತಪಟ್ಟಿದ್ದಾರೆ. ಸೇತುವೆ ಮೇಲೆ ಸಂಚರಿಸುತ್ತಿದ್ದ ಪಿಕಪ್ ವಾಹನ ಕೆಳಗುರುಳಿ ಬಿದ್ದ ಪರಿಣಾಮ ಚಾಲಕ ಮತ್ತು ಸಹಾಯಕ ಅಸುನೀಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಛತ್ತೀಸ್‌ಗಢದ ಜಶ್ಪುರ ಜಿಲ್ಲೆಯಲ್ಲಿ ಸಿಡಿಲು ಬಡಿದು ಸಹೋದರರಿಬ್ಬರು ಸ್ಥಳದಲ್ಲೇ ಸಾವಿಗೀಡಾದ ಘಟನೆ ಮಂಗಳವಾರ ಸಂಭವಿಸಿದೆ.
ಮೂವರ ಸಾವು?
ಉತ್ತರಾಖಂಡದ ಪಿತ್ತೋರ್‌ಗಢ ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ಉಕ್ಕಿ ಹರಿಯುತ್ತಿರುವ ಗೋರಿ ನದಿಯಲ್ಲಿ ಇಬ್ಬರು ಮಹಿಳೆಯರು ಕೊಚ್ಚಿ ಹೋಗಿದ್ದಾರೆ. ಈ ಪೈಕಿ ಒಬ್ಬರ ಮೃತದೇಹ ಪತ್ತೆಯಾಗಿದ್ದು, ಮತ್ತೂಬ್ಬರು ನಾಪತ್ತೆಯಾಗಿದ್ದಾರೆ. ಇನ್ನು, ಇಲ್ಲಿನ ಚಮೋಲಿ ಜಿಲ್ಲೆಯಲ್ಲಿ ಮನೆಯೊಂದು ಕುಸಿದುಬಿದ್ದು, ಒಬ್ಬ ಮಹಿಳೆ ಸಾವಿಗೀಡಾಗಿದ್ದಾರೆ. ಬಾಲಕಿಯೊಬ್ಬಳು ಗಾಯಗೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.