ಗುವಾಹಾಟಿ: ಅಸ್ಸಾಂನಲ್ಲಿ ಮಳೆ, ಪ್ರವಾಹ ಪರಿಸ್ಥಿತಿ ಮುಂದುವರಿದಿದ್ದು, ಮಂಗಳವಾರ 11 ಮಂದಿ ಮೃತಪಟ್ಟು, 7 ಮಂದಿ ನಾಪತ್ತೆ ಯಾಗಿದ್ದಾರೆ. ಹೀಗಾಗಿ ಒಟ್ಟಾರೆ ಸಾವಿನ ಸಂಖ್ಯೆ 82ಕ್ಕೇರಿಕೆಯಾಗಿದೆ.
ಬ್ರಹ್ಮಪುತ್ರ, ಬರಾಕ್ ನದಿಗಳು ಹಾಗೂ ಇವುಗಳ ಉಪನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, 48 ಲಕ್ಷಕ್ಕೂ ಅಧಿಕ ಮಂದಿ ಸಂಕಷ್ಟಕ್ಕೀಡಾಗಿದ್ದಾರೆ. ರಕ್ಷಣ ಕಾರ್ಯಾಚರಣೆಗಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣ ಪಡೆ(ಎನ್‌ಡಿಆರ್‌ಎಫ್)ಯ ತಂಡವು ಭುವನೇಶ್ವರದಿಂದ ಮಂಗಳವಾರ ಕಛಾರ್‌ಗೆ ಧಾವಿಸಿದೆ.
ಕರೀಂಗಂಜ್ ಮತ್ತು ಕಛಾರ್ ಜಿಲ್ಲೆಗಳಲ್ಲಿ ಪರಿಸ್ಥಿತಿ ಗಂಭೀರವಾಗಿದೆ. ಈ ಹಿನ್ನೆಲೆಯಲ್ಲಿ ಅಸ್ಸಾಂ ಮುಖ್ಯಮಂತ್ರಿ ಹಿಮಾಂತ ಬಿಸ್ವಾ ಅವರೊಂದಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ಇದಾದ ಬಳಿಕ 105 ಸಿಬಂದಿಯುಳ್ಳ ಎನ್‌ಡಿಆರ್‌ಎಫ್ ತಂಡ ಸ್ಥಳಕ್ಕೆ ಧಾವಿಸಿದೆ. ಈ ಕುರಿತು ಮಾಹಿತಿ ನೀಡಿರುವ ಸಿಎಂ ಹಿಮಾಂತ, “ಸಚಿವ ಅಮಿತ್ ಶಾ ಅವರು ಸೂಕ್ತ ಸಮಯದಲ್ಲಿ ನೆರವಾಗಿದ್ದಾರೆ’ ಎಂದು ಹೇಳಿದ್ದಾರೆ.
ರಾಷ್ಟ್ರೀಯ ಉದ್ಯಾನವೂ ಜಲಾವೃತ: ಕಾಜಿರಂಗಾ ರಾಷ್ಟ್ರೀಯ ಉದ್ಯಾನದಲ್ಲಿರುವ 233 ಕ್ಯಾಂಪ್‌ಗ್ಳ ಪೈಕಿ 42 ಸಂಪೂರ್ಣವಾಗಿ ಜಲಾವೃತಗೊಂಡಿವೆ. 8 ಪ್ರಾಣಿಗಳು ಪ್ರವಾಹದಲ್ಲಿ ಮುಳುಗಿ ಮೃತಪಟ್ಟಿದ್ದರೆ, 12 ಪ್ರಾಣಿಗಳನ್ನು ರಕ್ಷಿಸಲಾಗಿದೆ. ಪೋಬಿತೋರಾ ರಾಷ್ಟ್ರೀಯ ಉದ್ಯಾನದಲ್ಲಿ 25ರ ಪೈಕಿ 14 ಕ್ಯಾಂಪ್‌ಗ್ಳು ಮುಳುಗಡೆಯಾಗಿವೆ. ಪ್ರಾಣಿಗಳ ಸಾವು-ನೋವು ಕುರಿತು ಮಾಹಿತಿ ಬಂದಿಲ್ಲ.
ಹೈ ಅಲರ್ಟ್: ಇನ್ನೂ ಕೆಲವು ದಿನಗಳ ಕಾಲ ಅಸ್ಸಾಂನಲ್ಲಿ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಗುವಾಹಾ ಟಿಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.