Advertisement
ಬೆಳಗಾವಿಯ ರಾಮದುರ್ಗದಲ್ಲಿ ಮಲಪ್ರಭಾ ನದಿ ಹರಿಯುತ್ತದೆ. ನದಿಯ ಇಕ್ಕೆಲಗಳಲ್ಲಿ ಗುಡ್ಡದ ಸಾಲುಗಳಿವೆ. ಕಲ್ಲುಗುಡ್ಡಗಳಲ್ಲಿ ಸಣ್ಣ ಪುಟ್ಟ ಪೊದೆಗಳು ಮಾತ್ರ ಇವೆ. ನದಿಯ ಇಕ್ಕೆಲಗಳಲ್ಲಿ ಫಲವತ್ತಾದ ಕೃಷಿ ಭೂಮಿಗಳು ವಿಸ್ತರಣೆಯಾಗಿ ನದಿಯಂಚಿನ ಸಸ್ಯಗಳು ಸರ್ವನಾಶವಾಗಿವೆ. ಜೋರಾಗಿ ಮಳೆ ಸುರಿದು ಪ್ರವಾಹ ಬಂದರೆ ಹೊಲಕ್ಕೆ ನೀರು ನುಗ್ಗುತ್ತದೆ. ನದಿ ಪಾತ್ರವನ್ನು ನೋಡಿದರೆ ಎಲ್ಲೂ ಆಳದ ಗುಂಡಿಗಳಿಲ್ಲ, ಹೂಳು ತುಂಬಿ, ನದಿಯ ಸ್ವರೂಪ ಬದಲಾಗಿದೆ. ನದಿಯ ಹೂಳೆತ್ತಿದರೆ ನೀರು ಸಂಗ್ರಹಣೆ ಹೆಚ್ಚುತ್ತದೆಂದೂ, ಅಂತರ್ಜಲ ಮಟ್ಟ ಸುಧಾರಿಸುತ್ತದೆಂದು ರಾಮದುರ್ಗದಲ್ಲಿ ಕೆಲಸ ನಡೆಯುತ್ತಿದೆ.
Related Articles
Advertisement
ನೀರಿನ ಸೆಳವು ಇಲ್ಲದ ಜಾಗ ಗುರುತಿಸಿದ ಹಿರಿಯರು ಅಲ್ಲಿ ” ದಾಟ್‌ಸಾಲು’ ಕಂಡುಕೊಂಡಿದ್ದರು. ತಲೆಯಲ್ಲಿ ಚೀಲದ ಭಾರ ಹೊತ್ತು ಪ್ರವಾಹದ ಕೆಂಪು ನೀರಿಗೆ ಇಳಿದು ನಿಧಾನಕ್ಕೆ ಹೆಜ್ಜೆ ಇಡುತ್ತಿದ್ದರು. ಹಳ್ಳ ಉಳಿದೆಡೆಗಿಂತ ದಾಟ್‌ಸಾಲಿನ ಜಾಗದಲ್ಲಿ ಹೆಚ್ಚು ಅಗಲವಾಗಿ ಸೆಳೆತವಿಲ್ಲದೇ ಹರಿಯುತ್ತಿತ್ತು. ನದಿಗೆ ಇಳಿಯಲು ಇಲ್ಲಿ ಅಭ್ಯಾಸ, ಧೈರ್ಯ ಬೇಕು. ಹಿರಿಯರ ಜೊತೆ ನೀರಿಗಿಳಿದ ಅನುಭವದಲ್ಲಿ ಮಕ್ಕಳಿಗೂ ನದಿ ನಡಿಗೆ ಸಾಧ್ಯವಾಗುತ್ತಿತ್ತು. ಬಿದಿರಿನ ಸಾರ, ಮರದ ಸಂಕಗಳನ್ನು ಮಳೆಗಾಲದಲ್ಲಿ ನಿರ್ಮಿಸುತ್ತಿದ್ದರು.
ಕಾಂಕ್ರಿಟ್ ಸೇತುವೆಗಳು 70 ರ ದಶಕದ ನಂತರದಲ್ಲಿ ವ್ಯಾಪಕ ಪ್ರಮಾಣದಲ್ಲಿ ನಿರ್ಮಾಣವಾದವು. ಅಲ್ಲಿಂದ ನೇರ ನೀರಿಗಿಳಿದು ಪ್ರವಾಹದಲ್ಲಿ ಗೆಲ್ಲುವ ಜಲಜಾnನದಿಂದ ನಾವು ದೂರಾದೆವು. ಮಳೆಗಾಲ ಮುಗಿದು ಆಗಸ್ಟ್ ಹೊತ್ತಿಗೆ ತಿಳಿಯಾದ ಒರತೆ ಜಲ ಅಬ್ಬರದಲ್ಲಿ ಹರಿಯುವಾಗ ನೀರೊಳಗಿನ ಮೀನು, ಕಪ್ಪೆಗಳು ಕಾಣುತ್ತಿದ್ದವು. ಜಲ ಸಸ್ಯಗಳ ನಡುವೆ ಜೀವಲೋಕದ ಆಟ ನೋಡಬಹುದಿತ್ತು. ಮಳೆಗಾಲದ ಕೆಂಪು ಕೆಸರು ನೀರಿಗಿಂತ ಈ ತಿಳಿನೀರಿನ ಹರಿವಿನ ವೇಗ ಇನ್ನೂ ಜಾಸ್ತಿ, ಯೋಚಿಸದೆ ಹಳ್ಳಕ್ಕಿಳಿದರೆ ಕಾಲ್ತಪ್ಪಿಸಿ ಎಳೆದೊಯ್ಯುವ ಶಕ್ತಿ ಇದರದು.
ಮಳೆಗಾಲದಲ್ಲಿ ನದಿ ದಾಟಿದ ಜಾಗದಲ್ಲಿ ತಿಳಿ ನೀರು ದಾಟಲಾಗದ ಸ್ಥಿತಿ ಇರುತ್ತಿತ್ತು. ತೇಲಿ ಹೋಗುವ ಹೊತ್ತಿನಲ್ಲಿ ನದಿಯಂಚಿನ ಹೆಮ್ಮರಗಳ ಟೊಂಗೆ, ಬೇರು ಹಿಡಿದು ಬಚಾವಾದ ರೋಚಕ ಅನುಭವಗಳಿವೆ. ಬೇಸಿಗೆಯಲ್ಲಿ ನಮ್ಮ ಹಳ್ಳಗಳಿಗೆ ಸಾಬರ ತಂಡ ಬರುತ್ತಿತ್ತು. ಉದ್ದನೆಯ ಬಿದಿರು ಗಳು, ಬಲೆ ಹಿಡಿದು ಅವರು ಹಳ್ಳದ ದಂಡೆಯ ಚಾರಣಿಗರಾಗಿ ಸಾಗುತ್ತಿದ್ದರು. ಆಳದ ಗುಂಡಿಗಳಿಗೆ ಬಲೆ ಹಾಕಿ ನಡು ರಾತ್ರಿಯೂ ಮೀನ ಧ್ಯಾನದ ಠಿಕಾಣಿ ಅವರದು. ನೀರಿನಾಳದಲ್ಲಿ ತೆಪ್ಪಗೆ ಅವಿತಿದ್ದ ಮೀನುಗಳನ್ನು ಬಿದಿರು ಗಳುವಿನ ನೆರವಿನಿಂದ (ಎಬ್ಬಿಸಿ) ಬಲೆಗೆ ಬೀಳಿಸುವ ಸಾಹಸ ನಡೆಸುತ್ತಿದ್ದರು.
ನಮ್ಮ ಹಳ್ಳದ ಗುಂಡಿಯ ಆಳ ಎಷ್ಟಿದೆಯೆಂದು ತಿಳಿಯಲು ಇದು ತಕ್ಕ ಸಮಯವೆಂದು, ಅವರ ಜೊತೆ ಊರಿನ ಮಕ್ಕಳೆಲ್ಲ ಜಮಾಯಿಸುತ್ತಿದ್ದರು. 15-20 ಅಡಿ ಉದ್ದದ ಗಳುವಿಗೂ ಆಳ ಅಂದಾಜಾಗದ ನೆಲೆಗಳು ಪತ್ತೆಯಾಗುತ್ತಿದ್ದವು. ಇದರಿಂದ ಹಳ್ಳಕ್ಕೆ ಈಜಲು ಹೊರಟ ನಮ್ಮನ್ನು ಹೆದರಿಸಲು ಹಿರಿಯರಿಗೆ ಅರಿನ ಹೊಸ ಅಸ್ತ್ರ ಸಿಗುತ್ತಿತ್ತು. ಆಳದ ಗುಂಡಿ, ಮೀನು ಬೇಟೆ, ಈಜು ಸಂಭ್ರಮಗಳಿಂದ ಪ್ರತಿ ಹಳ್ಳಿಗೂ ಹಳ್ಳದ ಒಂದೆರಡು ಕಿ.ಲೋ ಮೀಟರ್ ಉದ್ದದ ನೀರಿನ ಸ್ಥಿತಿಗತಿಯ ಪಕ್ಕಾ ಪರಿಚಯವಿತ್ತು.
ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಮೂರೂರು ಹಳ್ಳಿಯಲ್ಲಿ ಮಕ್ಕಳು ಬೇಸಿಗೆಯಲ್ಲಿ ಮೊಸಳೆ ಗುಂಡಿಯತ್ತ ಹೋಗುತ್ತಿರಲಿಲ್ಲ. ಈಜುವ ಮಕ್ಕಳನ್ನು ಮೊಸಳೆ ನುಂಗುವ ಭಯವಿತ್ತು. ಈಗ ಮೊಸಳೆ ಗುಂಡಿಯಲ್ಲಿ ಬೇಸಿಗೆಯಲ್ಲಿ ವಾಲಿಬಾಲ್, ಲಗೋರಿ ಆಡಬಹುದು ! ಹೂಳು ತುಂಬಿ ಗುಂಡಿಗಳು ಸಂಪೂರ್ಣ ಮಾಯವಾಗಿವೆ. 80ರ ದಶಕದ ನಂತರದಲ್ಲಿ ನದಿ ಕಣಿವೆಗಳಲ್ಲಿ ಸಾರಿಗೆ ಸಂಪರ್ಕ ಬದಲಾಯಿತು. ಕಾಲು ದಾರಿಯ ಪಯಣ ಮರೆತು ಜನತೆ ಮಣ್ಣಿನ ರಸ್ತೆಯಲ್ಲಿ ಬೆಳೆದರು. ಚಕ್ಕಡಿ ಓಡಾಟ ನಿಂತು ಟಾರು ರಸ್ತೆಗಳಲ್ಲಿ ಮೋಟಾರು ಕಾಣಿಸಿದವು.
ಸಾರಿಗೆ ಸಂಪರ್ಕ ಬದಲಾದಂತೆ ಇದಕ್ಕೆ ಪೂರಕವಾಗಿ ಸೇತುವೆಗಳ ನಿರ್ಮಾಣವಾಯ್ತು. ರಸ್ತೆಯನ್ನು ಮಳೆ ನೀರಿನಿಂದ ರಕ್ಷಿಸಲು ಅಕ್ಕಪಕ್ಕ ಕಾಲುವೆಗಳು ನಿರ್ಮಾಣವಾದವು. ರಸ್ತೆ, ಕಾಲುವೆಗೆ ಮಣ್ಣು ಅಗೆದ ಜಾಗದಲ್ಲಿ ಮಳೆ ನೀರು ಗುಡ್ಡದಿಂದ ವೇಗವಾಗಿ ಹರಿಯಿತು. ಅಪಾರ ಪ್ರಮಾಣದಲ್ಲಿ ಹೂಳು ಹಳ್ಳ, ನದಿಗಳಿಗೆ ಸಾಗಿತು. ಅರಣ್ಯನಾಶದಿಂದ ಭೂಸವಕಳಿಗೆ ಇನ್ನಷ್ಟು ವೇಗ ದೊರೆಯಿತು. ನೆಡುತೋಪು ಬೆಳೆಸಲು ಬಂದ ರಿಪ್ಪಿಂಗ್ ಯಂತ್ರ, ಬುಲ್ಡೋಜರ್‌ಗಳು ಭೂಮಿಯ ಮೇಲ್ಪದರವನ್ನು ಅಗೆದು ಸಡಿಲಗೊಳಿಸಿದವು. ಕೃಷಿ ವಿಸ್ತಣೆಯೂ ನದಿ ಕಣಿವೆಯಲ್ಲಿ ಹೆಚ್ಚಿದವು.
ಅಬ್ಬರದ ಮಳೆಯಲ್ಲಿ ಹೊಳೆ ಹಳ್ಳಗಳು ಕೆಂಪಾದವು. ಕಾಡು ಗುಡ್ಡದ ಮರ, ಗಿಡ, ಪೊದೆ, ಹುಲ್ಲು, ಬಳ್ಳಿ, ತೆರಕು ಮಣ್ಣು ಸವಕಳಿಯಾಗದಂತೆ ನೈಸರ್ಗಿಕ ತಡೆಯಾಗಿದ್ದವು. ಈಗ ನೆಲದ ಪರಿಸರ ಬದಲಾಗಿ ಗುಡ್ಡದಿಂದ ಓಡಿ ಬಂದ ಮಣ್ಣು, ಮರಳು ಹಳ್ಳಗಳಲ್ಲಿ ಶೇಖರಣೆಯಾಗಿವೆ. ಕಲ್ಲಣೆ, ಅಣೆಕಟ್ಟೆ, ಬಾಂದಾರ, ಕೊರಕಲು ತಡೆ, ಕಿಂಡಿ ತಡೆ ಅಣೆಕಟ್ಟುಗಳನ್ನು ಕೃಷಿ ನೀರಾವರಿಗಾಗಿ ಹಳ್ಳಗಳಲ್ಲಿ ನಿರ್ಮಿಸಿದ್ದೇವೆ. ಓಡುವ ನೀರನ್ನು ಬೇಸಿಗೆಯಲ್ಲಿ ಹಿಡಿದಿಡುವ ಇವು ಮಳೆ ಪ್ರವಾಹದಲ್ಲಿ ಹೂಳು ಸಂಗ್ರಹಿಸುವ ಕಾರ್ಯವನ್ನು ಮಾಡುತ್ತಿವೆ. ಇದರಿಂದ ಅಣೆಕಟ್ಟೆಗಳ ನೀರು ಸಂಗ್ರಹಣಾ ಸಾಮರ್ಥ್ಯ ಕಡಿಮೆಯಾಗುತ್ತಿದೆ.
ಸಾಮಾನ್ಯವಾಗಿ ಅಕ್ಕಪಕ್ಕದ ದಂಡೆ ಎತ್ತರವಿರುವ ನೆಲೆಯಲ್ಲಿ ಹೆಚ್ಚು ನೀರು ನಿಲ್ಲಿಸಲು ಸಾಧ್ಯವಾಗುವುದರಿಂದ ಇಲ್ಲಿ ಒಡ್ಡು ನಿರ್ಮಾಣವಾಗುತ್ತದೆ. ನೀರು ವೇಗವಾಗಿ ಹರಿಯುವ ಪ್ರದೇಶಗಳು ಇದಾದ್ದರಿಂದ ಒಡ್ಡು ಹರಿಯುವ ನೀರಿನ ವೇಗಕ್ಕೆ ತಡೆ ನೀಡುತ್ತದೆ. ಬೇಸಿಗೆಯಲ್ಲಿ ಬಾಗಿಲು ಹಾಕಿ ಮಳೆಗಾಲದಲ್ಲಿ ಈ ಕಿಂಡಿತಡೆ ಅಣೆಕಟ್ಟಿನ ಬಾಗಿಲು ತೆಗೆಯುವರು. ಮಳೆ ಪ್ರವಾಹದ ನೀರಿಗೆ ಅಡ್ಡವಾಗುವ ಕಿಂಡಿ ತಡೆಯ ಕಾಂಕ್ರೀಟ್ ಕಂಬಗಳು ಹೊಳೆ, ಹಳ್ಳಗಳಲ್ಲಿ ಹೂಳಿನ ದಿಬ್ಬ ನಿರ್ಮಿಸುತ್ತವೆ. ವರ್ಷಗಳು ಕಳೆದಂತೆ ದಿಬ್ಬ ಬೆಳೆದು ಪ್ರವಾಹದ ಒತ್ತಡದಿಂದ ದಂಡೆ ಅಗಲವಾಗುತ್ತದೆ.
ಒಂದು ಹಳ್ಳ ಕಿರಿದಾದ ಜಾಗದಲ್ಲಿ ಆಳವಾಗಿ ಹರಿಯುವುದಕ್ಕೂ ದಂಡೆ ಹಿಗ್ಗಿಸಿಕೊಂಡು ಅಗಲಕ್ಕೆ ಹರಿಯುವುದಕ್ಕೂ ವ್ಯತ್ಯಾಸವಿದೆ. ನದಿ ದಂಡೆಯ ಸಸ್ಯಗಳ ನಾಶದಿಂದ ಅಂಕುಡೊಂಕಾಗಿ ಹರಿಯುವ ನದಿ, ಹಳ್ಳಗಳು ನೇರವಾಗಿ ಹರಿಯುತ್ತಿವೆ. ಹೀಗಾಗಿ ನೀರು ನಿಲ್ಲದೇ ಓಡುತ್ತಿದೆ. ಚೈನಾದ ಫೆಂಗ್‌ಶ್ವಯ್ ಪರಿಸರ ಲಕ್ಷಣ ಶಾಸ್ತ್ರ ಹೇಳುತ್ತದೆ. ಅಲ್ಲಿ ನದಿಗಳು ಅಂಕುಡೊಂಕಾಗಿ ಹರಿಯುವುದು ಭೂಮಿಯ ಉತ್ತಮ ಲಕ್ಷಣ ಎಂದು ಗುರುತಿಸಲಾಗುತ್ತಿದೆ. ಕಾಡಿನ ನೆಲೆಯಲ್ಲಿ ನೇರಕ್ಕೆ ಬೆಳೆಯುವ ನೆಡುತೋಪು ಬೆಳೆಸಿದಂತೆ ನಮ್ಮ ನದಿಗಳನ್ನೂ ಕಾಲುವೆಯಂತೆ ತಿದ್ದುತ್ತಿದ್ದೇವೆ, ಕಟ್ಟುತ್ತಿದ್ದೇವೆ.
ಮಹಾರಾಷ್ಟ್ರದಲ್ಲಿ ಮಾಂಜಾ ನದಿಗೆ ಕೃಷಿ ನೀರಾವರಿ ಅನುಕೂಲಕ್ಕೆ ಸರಣಿ ಬ್ಯಾರೇಜ್‌ಗಳನ್ನು ಎರಡು ಮೂರು ದಶಕಗಳ ಹಿಂದೆಯೇ ನಿರ್ಮಿಸಲಾಗಿದೆ. ನದಿಯ ಪಾತ್ರಗಳಲ್ಲಿ ಹೂಳು ತುಂಬಿದ್ದರಿಂದ ಮಳೆಯ ನೀರೆಲ್ಲ ಹರಿದು ಹೋಗುತ್ತಿತ್ತು, ಆಳದ ಗುಂಡಿಗಳೆಲ್ಲ ಆಟದ ಬಯಲಾಗಿದ್ದವು. 18 ಕಿಲೋ ಮೀಟರ್ ಉದ್ದ ಹಾಗೂ ಸುಮಾರು 180 ಮೀಟರ್ ಅಗಲದ ನದಿ ಪಾತ್ರದಲ್ಲಿ ಹೂಳು ತೆಗೆಯುವುದಕ್ಕೆ ಮಹಾರಾಷ್ಟ್ರ ಸರಕಾರ 138 ಕೋಟಿ ರೂಪಾಯಿಯ ಯೋಜನೆ ರೂಪಿಸಿತ್ತು. ಆದರೆ ಎರಡು ವರ್ಷಗಳ ಹಿಂದೆ ಬರದ ಸಂಕಷ್ಟ ಅನುಭಸಿದ ರೈತರು ಸ್ವತಃ ತಾವೇ ಹೂಳೆತ್ತಲು ನಿರ್ಧರಿಸಿದರು. ವಿವಿಧ ಕಂಪನಿಗಳು, ವ್ಯಾಪಾರಿಗಳು, ದೇಗುಲ ಆಡಳಿತ ಮಂಡಳಿ, ಸ್ವಯಂ ಸೇವಾ ಸಂಸ್ಥೆಗಳು ಮುಂದೆ ಬಂದವು.
ಜನತೆ ದಾನವಾಗಿ ನೀಡಿದ ನೂರು ಸಾವಿರ ರೂಪಾಯಿಗಳನ್ನು ಸೇರಿಸಿ ಸುಮಾರು ಎಂಟು ಕೋಟಿ ರೂಪಾಯಿ ವೆಚ್ಚದಲ್ಲಿ ಈಗ ನದಿ ಪಾತ್ರದ ಹೂಳು ತೆಗೆಯಲಾಗಿದೆ. ಈಗ ಮುಂಚಿಗಿಂತ ಹತ್ತುಪಟ್ಟು ಜಾಸ್ತಿ ಬ್ಯಾರೇಜುಗಳಲ್ಲಿ ನೀರು ನಿಲ್ಲುವ ಅವಕಾಶವಾಗಿದೆ. ಆದರೆ ಇದು ಅಷ್ಟು ಸರಳ ಕೆಲಸವಲ್ಲ. ಇಂದು ಮರಳಿಗೆ ಬೆಲೆ ಏರಿರುವುದರಿಂದ ಹೂಳೆತ್ತುವ ನೆಪದಲ್ಲಿ ಗಣಿಕಳ್ಳರು ಗುಡ್ಡಬಿಟ್ಟು ನದಿಗಿಳಿಯುವ ಅಪಾಯವಿದೆ. ಲಾರಿ ಮರಳಿಗೆ 35-40 ಸಾವಿರ ಬೆಲೆಯಿರುವಾಗ ನದಿಯ ಹೂಳೆತ್ತುವುದು ಇನ್ನೊಂದು ಬಳ್ಳಾರಿಯ ಮೈನಿಂಗ್ ಆಗಬಹುದು. ಜಗತ್ತು ಗೆಲ್ಲುವ ವಿದ್ಯೆ ಪಡೆದ ನಾವು ನಮ್ಮ ನದಿ, ನದಿಯಂಚಿನ ಅರಣ್ಯವನ್ನು ಅರ್ಥಮಾಡಿಕೊಳ್ಳದೇ ಜೀವ ನದಿಗಳ ಸಾವಿಗೆ ಕಾರಣರಾಗಿದ್ದೇವೆ.
ಮುಂದಿನ ಭಾಗ: ಹೊಳೆ ದಂಡೆಯ ಹಳೆ ನೆನಪುಗಳು
* ಶಿವಾನಂದ ಕಳವೆ