Advertisement
ನಿರಂತರ ಮಳೆಗೆ ಡೋಣಿನದಿಯಲ್ಲಿ ಪ್ರವಾಹ ಸೃಷ್ಟಿಯಾಗಿದೆ. ವಿಜಯಪುರ ಜಿಲ್ಲೆಯ ರಾಜ್ಯ ಹೆದ್ದಾರಿ 34 ರ ಮೇಲೆ ಡೋಣಿ ನದಿ ನೀರು ಹರಿಯುತ್ತಿದ್ದು, ಬಬಲೇಶ್ವರ ತಾಲೂಕಿನ ಸಾರವಾಡ ಗ್ರಾಮ ಮುಳುಗಡೆ ಭೀತಿ ಎದುರಿಸುತ್ತಿದೆ. ಸಾರವಾಡ ಮಾರ್ಗದ ವಿಜಯಪುರ- ಬಾಗಲಕೋಟ ಧಾರವಾಡ, ಬೆಳಗಾವಿ ಜಿಲ್ಲೆ ಸಂಪರ್ಕಿಸುವ ರಾಜ್ಯ ಹೆದ್ದಾರಿ ಮೇಲೆ ಡೋಣಿ ನದಿ ನೀರು ಪ್ರವಾಹವಾಗಿ ಹರಿಯುತ್ತಿದೆ. ಸೇತುವೆ ಮೇಲೆ ಹರಿಯುವ ನೀರಲ್ಲೇ ವಾಹನ ಸಂಚಾರ ಮುಂದುವರೆದಿದೆ. ಮಳೆ ನೀರು ಹೆಚ್ಚಾದರೆ ಈ ಮಾರ್ಗದ ಸಂಚಾರ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.
Related Articles
Advertisement
ಇದನ್ನೂ ಓದಿ:ಭೀಮಾತೀರದ ಕೊಂಕಣಗಾಂವದಲ್ಲಿ ವಿಮಲಾಬಾಯಿ ವಿಚಾರಣೆ; ಭಾರಿ ಭದ್ರತೆ
ಸಿಂದಗಿ ತಾಲೂಕಿನ ಬೊಮ್ಮನಜೋಗಿ ಕೆರೆ ಸಂಪೂರ್ಣ ಭರ್ತಿಯಾಗಿದ್ದು, ಕೋಡಿ ಬೀಳುವ ಅಪಾಯದ ಮಟ್ಟ ಮೀರಿದ್ದು, ಕೆರೆ ಒಡೆಯುವ ಮಟ್ಟಕ್ಕೆ ಬಂದಿದೆ. ಒಂದೊಮ್ಮೆ ಕೆರೆ ಒಡೆದಲ್ಲಿ ಕೆಳಭಾಗದಲ್ಲಿರುವ ಬೂದಿಹಾಳ ಗ್ರಾಮಕ್ಕೆ ನೀರು ನುಗ್ಗುವ ಸಾಧ್ಯತೆ ಇದ್ದು, ಜನರಿಗೆ ಅಗತ್ಯ ಮುನ್ನೆಚ್ಚರಿಕೆ ನೀಡಲಾಗಿದೆ. ಸಿಂದಗಿ ತಾಲೂಕ ಆಡಳಿತ ಈ ಬಗ್ಗೆ ನಿಗಾ ಇರಿಸಿದೆ.
ತಿಕೋಟಾ ತಾಲೂಕಿನ ಕಳ್ಳಕವಟಗಿ ಗ್ರಾಮದ ಹಳ್ಳ ತುಂಬಿ ಹರಿಯುತ್ತಿದ್ದು, ಗ್ರಾಮದೇವತೆ ಸಂಗಮನಾಥ ದೇವಾಲಯ ಜಲಾವೃತವಾಗಿದೆ. ಇದೇ ಹಳ್ಳಕ್ಕೆ ನಿರ್ಮಿಸಿರುವ ಚೆಕಡ್ಯಾಂ ತುಂಬಿ ಜಲಪಾತದ ಮಾದರಿಯಲ್ಲಿ ವಿಹಂಗಮ ನೋಟ ಸೃಷ್ಟಿಸಿದೆ. ಈ ಮಾರ್ಗದಲ್ಲಿ ಸಂಚರಿಸುವವರು ಜಲಪಾತದ ಮುಂದೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ.