Advertisement
ಈ ಬಾರಿಯ ಭೀಕರ ನೆರೆ ಯಾವುದನ್ನೂ ಬಿಟ್ಟಿಲ್ಲ. ಇಡೀ ವ್ಯವಸ್ಥೆ ಬುಡಮೇಲಾಗಿದೆ. ಅಸಂಖ್ಯಾತ ಜನ ನಿರ್ಗತಿಕರಾಗಿದ್ದಾರೆ. ಕೃಷಿಕರು, ನೇಕಾರರು, ವ್ಯಾಪಾರಸ್ಥರು ಹೀಗೆ ಹಲವಾರು ಜನರು ನೆರೆ ಹಾವಳಿಯ ಸುಳಿವಿಗೆ ಸಿಲುಕಿದ್ದಾರೆ. ಮನೆ ಮಠ ಕಳೆದುಕೊಂಡಿದ್ದಾರೆ. ದೇವಸ್ಥಾನದಲ್ಲಿರುವ ದೇವರಿಗೂ ಇದರ ಬಿಸಿ ತಟ್ಟಿದೆ.
Related Articles
Advertisement
ಕಳೆದ ಎಂಟು ತಿಂಗಳಿಂದ ಗಣಪತಿಗಳ ತಯಾರಿಕೆಯಲ್ಲಿ ತೊಡಗಿದ್ದೆವು. ಇಲ್ಲಿಂದ ಸವದತ್ತಿ ಹಾಗೂ ಸುತ್ತಲಿನ ಗ್ರಾಮಗಳಿಗೆ ಗಣಪತಿಗಳನ್ನು ಕಳಿಸಲು ಎಲ್ಲ ಸಿದ್ಧತೆ ಮಾಡಿಕೊಂಡಿದ್ದೆವು. ದೊಡ್ಡ ಗಾತ್ರದ 200 ಹಾಗೂ ಸಣ್ಣ ಗಾತ್ರದ ಐದು ಸಾವಿರ ಗಣಪತಿಗಳು ಮಂಟಪ ಅಲಂಕರಿಸಲು ಸಜ್ಜಾಗಿದ್ದವು. ಆದರೆ ಈಗ ಹಾಳಾಗಿರುವ ಗಣಪತಿಗಳನ್ನು ನೋಡಿ ದಿಕ್ಕು ತಪ್ಪಿದೆ. ಏನು ಮಾಡಬೇಕು ಗೊತ್ತಿಲ್ಲ ಎಂದು ಮುನವಳ್ಳಿಯ ಕರೆಪ್ಪ ಕಮ್ಮಾರ ನೋವಿನಿಂದ ಹೇಳಿದರು.
ಎರಡು ರಾತ್ರಿಗಳಲ್ಲಿ ಬಂದ ನೀರು ಸುಮಾರು ಎಂಟು ಲಕ್ಷ ರೂ. ದಷ್ಟು ಹಾನಿ ಮಾಡಿದೆ. ಗಣಪತಿಗಳನ್ನು ಇಡಲೆಂದೇ ಮಠದ ಸಭಾಭವನವನ್ನು ತಿಂಗಳಿಗೆ 12 ಸಾವಿರ ರೂ ದಂತೆ ಎರಡು ತಿಂಗಳು ಬಾಡಿಗೆ ಪಡೆಯಲಾಗಿತ್ತು. ಅದೂ ಸಹ ಮೈಮೇಲೆ ಬಂದಿದೆ. ಯಾವತ್ತೂ ಈ ರೀತಿಯ ಅನಾಹುತ ಆಗಿರಲಿಲ್ಲ. ಜಲಾಶಯದ ನೀರು ದಿಕ್ಕುತಪ್ಪಿಸಿದೆ. ಸರಕಾರ ಇದಕ್ಕೆ ಎಷ್ಟರಮಟ್ಟಿಗೆ ಪರಿಹಾರ ಕೊಡುತ್ತದೆ ಎಂದು ಕಮ್ಮಾರ ಆತಂಕದಿಂದಲೇ ಹೇಳಿದರು.
ಪ್ರತಿ ವರ್ಷ ಗಣಪತಿ ಮೂರ್ತಿಗಳಿಗಾಗಿ ಬೇಡಿಕೆ ಹೆಚ್ಚುತ್ತಿದೆ. ಸವದತ್ತಿ ತಾಲೂಕಿನ ಅನೇಕ ಹಳ್ಳಿಗಳ ಜನರು ನಮ್ಮಲ್ಲಿಗೆ ಬಂದು ಗಣಪತಿಗಳನ್ನು ಒಯ್ಯುತ್ತಾರೆ. ಅಂತೆಯೇ ಈ ಬಾರಿ 200 ಸಾರ್ವಜನಿಕ ಗಣಪತಿ ಸೇರಿದಂತೆ ಸುಮಾರು 2500 ಗಣಪತಿಗಳನ್ನು ತಯಾರು ಮಾಡಿದ್ದೆ. ಹಲವರು ಮೊದಲೇ ಹಣ ನೀಡಿ ಕಾಯ್ದಿರಿಸಿ ಹೋಗಿದ್ದರು. ನಮಗೂ ಚಿಂತೆ ಇರಲಿಲ್ಲ, ಈಗಾಗಲೇ ಹಬ್ಬ ಹತ್ತಿರ ಬಂದಿದ್ದರಿಂದ ಮತ್ತೆ ಅಷ್ಟು ಗಣಪತಿಗಳನ್ನು ಮಾಡಲು ಸಾಧ್ಯವಿಲ್ಲ. ಈ ರೀತಿಯ ಅನಾಹುತ ನಿರೀಕ್ಷೆ ಮಾಡಿರಲಿಲ್ಲ ಎಂದು ಮಂಜುನಾಥ ಕಮ್ಮಾರ ಹೇಳುತ್ತಾರೆ.
ಗೋಕಾಕ ತಾಲೂಕಿನ ಕೊಣ್ಣೂರು ಸೇರಿದಂತೆ ಪ್ರವಾಹ ಪೀಡಿತ ನದಿ ತೀರದ ಹಳ್ಳಿಗಳಲ್ಲಿ ಇದೇ ಶೋಚನೀಯ ಕಥೆ. ಕೊಣ್ಣೂರಿನಲ್ಲಿ ಆದ ಅನಾಹುತ ಊಹಿಸಲೂ ಅಸಾಧ್ಯ. ಘಟಪ್ರಭಾ ನದಿಯ ಭೀಕರ ಪ್ರವಾಹದಿಂದ ಇಲ್ಲಿನ ಗಣಪತಿಗಳು ಪ್ರತಿಷ್ಠಾಪನಗೆ ಮೊದಲೇ ವಿಸರ್ಜನೆಗೊಂಡಿವೆ. ಕೋಟ್ಯಂತರ ರೂಪಾಯಿ ನಷ್ಟ ಉಂಟಾಗಿದೆ. ಮನೆಗಳಿಂದ ಹಾಗು ಸಾರ್ವಜನಿಕ ಗಣೇಶ ಮಂಡಳಿಗಳಿಂದ ಮುಂಗಡ ಹಣ ಪಡೆದು ಗಣಪತಿ ತಯಾರು ಮಾಡಿದ್ದ ಮೂರ್ತಿ ತಯಾರಕರು ಈಗ ಹಣವನ್ನು ಹೇಗೆ ಮರಳಿಸಬೇಕು ಎಂಬ ಚಿಂತೆಯಲ್ಲಿದ್ದಾರೆ.
• ಕೇಶವ ಆದಿ