Advertisement

ಹಳೇ ಬೆಂಗಳೂರಿನ ಕೊಳೆಗೇರಿಗಳೀಗ ಪ್ರವಾಹ ಮುಕ್ತ

12:55 PM Apr 01, 2018 | |

ಬೆಂಗಳೂರು: ಚಿಕ್ಕಪೇಟೆ ಎಂಬ ವಾರ್ಡ್‌ ಇಲ್ಲದಿದ್ದರೂ, ಚಿಕ್ಕಪೇಟೆಯ ಬಹುಭಾಗವನ್ನು ಒಳಗೊಳ್ಳದೇ ಇದ್ದರೂ “ಚಿಕ್ಕಪೇಟೆ ವಿಧಾನಸಭೆ’ ಕ್ಷೇತ್ರವಾಗಿ ಪರಿಷ್ಕರಣೆಗೊಂಡ ಈ ಕ್ಷೇತ್ರದ ಭೌಗೋಳಿಕ ಸ್ಥಿತಿಗತಿ ಇತರೆ ಕ್ಷೇತ್ರಗಳಿಗಿಂತ ಭಿನ್ನ. ಹಾಗೇ ಇಲ್ಲಿನ ಸಮಸ್ಯೆಗಳೂ ವಿಭಿನ್ನ.

Advertisement

ವಿಶ್ವ ವಿಖ್ಯಾತ ಲಾಲ್‌ಬಾಗ್‌, ಬೆಂಗಳೂರಿನ ಸಾಂಸ್ಕೃತಿಕ ಪರಂಪರೆಗೆ ಅತಿ ದೊಡ್ಡ ಕೊಡುಗೆ ನೀಡಿದ ಕರಗದ ಶ್ರೀ ಧರ್ಮರಾಯಸ್ವಾಮಿ ದೇವಸ್ಥಾನ, ಸದಾ ಗದ್ದಲದಲ್ಲಿರುವ ಕಲಾಸಿಪಾಳ್ಯ ಮಾರುಕಟ್ಟೆ ಪ್ರದೇಶ, ಪಕ್ಕದಲ್ಲೇ ಸದ್ದಿಲ್ಲದೆ ಶಾಂತವಾಗಿರುವ ವಿಶ್ವೇಶ್ವರಪುರ… ಹೀಗೆ ವಿಭಿನ್ನ ಸ್ಥಳಗಳನ್ನು ಒಳಗೊಂಡಿರುವ ಈ ಚಿಕ್ಕಪೇಟೆ ಕ್ಷೇತ್ರದಲ್ಲಿ ಕಳೆದ ಐದು ವರ್ಷಗಳಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ನಡೆದಿವೆ.

ಸುಧಾಮನಗರ, ಸುಂಕೇನಹಳ್ಳಿಯ ಕೆಲವು ಪ್ರದೇಶಗಳನ್ನು ಹೊರತುಪಡಿಸಿ ಬಹುತೇಕ ಕಡೆ ನೀರಿನ ಸಮಸ್ಯೆ ಇಲ್ಲ. ಮುಖ್ಯ ರಸ್ತೆಗಳನ್ನು ಹೊರತುಪಡಿಸಿ ಕಿರಿದಾದ ರಸ್ತೆಗಳು, ಎಲ್ಲೆಂದರಲ್ಲಿ ನಿಲ್ಲುವ ವಾಹನಗಳಿಂದಾಗಿ ಬಡಾವಣೆಗಳಲ್ಲಿ ಓಡಾಡುವುದೇ ಹರಸಾಹಸ. ಸುಧಾಮನಗರ ಮತ್ತು ಸಿದ್ದಾಪುರ ಪ್ರದೇಶಗಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿರುವ ಗ್ಯಾರೇಜ್‌ಗಳೂ ವಾಹನ ಸಂಚಾರಕ್ಕೆ ಅಡ್ಡಿ ಉಂಟುಮಾಡುತ್ತಿವೆ.

ಜೋರು ಮಳೆ ಬಂದಾಗ ಸುಧಾಮನಗರದಲ್ಲಿ ಹಾದು ಹೋಗುವ ರಾಜಾ ಕಾಲುವೆ ಉಕ್ಕಿ ಹರಿದು ಪಕ್ಕದಲ್ಲಿರುವ ನಾಲಾ ರಸ್ತೆ ಸುತ್ತಮುತ್ತ ನೀರು ನುಗ್ಗಿ ಜನ ಪರದಾಡುತ್ತಾರೆ. ಪ್ರಸ್ತುತ ಈ ಕಾಲುವೆ ಸ್ವತ್ಛಗೊಳಿಸಿ ನೀರು ರಸ್ತೆಗಳಿಗೆ ನುಗ್ಗದಂತೆ ಕಾಮಗಾರಿ ನಡೆಸಲಾಗುತ್ತಿದೆ.

ಆದರೂ ಕಾಮಗಾರಿ ನಡೆದ ಪ್ರದೇಶಗಳಲ್ಲಿ ಮತ್ತೆ ಕಸ, ಹಳೆಯ ಬಟ್ಟೆಗಳು ತುಂಬಿ ನೀರು ಸರಾಗವಾಗಿ ಹರಿಯುತ್ತಿಲ್ಲ. ಇದರಿಂದಾಗಿ ರಾಜ ಕಾಲುವೆ ನೀರು ನೇರವಾಗಿ ನುಗ್ಗದೇ ಇದ್ದರೂ ಆ ಕಾಲುವೆಗಳಿಗೆ ಸೇರುವ ಚರಂಡಿಗಳಿಂದ ಮಳೆ ನೀರು ಹಿಮ್ಮುಖವಾಗಿ ಹರಿದು ಮನೆಗಳಿಗೆ ನುಗ್ಗುವ ಆತಂಕ ದೂರವಾಗಿಲ್ಲ.

Advertisement

60 ಕೊಳೆಗೇರಿಗಳು: ವಿಶೇಷವೆಂದರೆ, 60 ಕೊಳೆಗೇರಿಗಳನ್ನು ಹೊಂದಿರುವ ಕ್ಷೇತ್ರದಲ್ಲಿ ಮಳೆ ಬಂದರೆ ಎಲ್ಲೆಡೆ ನೀರು ನುಗ್ಗುತ್ತಿತ್ತು. ಆದರೆ, ಕಳೆದ ಮಳೆಗಾಲದಲ್ಲಿ ಸುಧಾಮನಗರ ಹೊರತುಪಡಿಸಿ ಬೇರೆ ಯಾವುದೇ ಕಡೆ ಮಳೆ ನೀರು ನುಗ್ಗಿಲ್ಲ. ಇದಕ್ಕೆ ಕಾರಣ ಮಳೆ ಬಂದಾಗ ನೀರು ನೇರವಾಗಿ ಕಾಲುವೆಗಳಿಗೆ ಹರಿದುಹೋಗುವ ವ್ಯವಸ್ಥೆ ಮಾಡಲಾಗಿದೆ.

ಕೊಳೆಗೇರಿಗಳ ಬಹುತೇಕ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆಯಾಗಿದೆ. ಅಷ್ಟೇ ಅಲ್ಲ, ಕೆಳಭಾಗದ ಒಂದೆರಡು ರಸ್ತೆಗಳನ್ನು ಹೊರತುಪಡಿಸಿ ಬಹುತೇಕ ಕಡೆ ಎರಡು ದಿನಕ್ಕೊಮ್ಮೆ ಕುಡಿಯುವ ನೀರು ಲಭ್ಯ. ಕ್ಷೇತ್ರದ ವಾರ್ಡ್‌ಗಳ ಪೈಕಿ ಹೊಂಬೇಗೌಡ ನಗರ ಮತ್ತು ಜಯನಗರ ವಾರ್ಡ್‌ಗಳಲ್ಲಿ ಸಮಸ್ಯೆಗಳು ಕಡಿಮೆ. ಮೂಲ ಸೌಕರ್ಯ ಪರವಾಗಿಲ್ಲ. ಕುಡಿಯುವ ನೀರಿನ ಗಂಭೀರ ಸಮಸ್ಯೆ ಕಾಣಿಸುತ್ತಿಲ್ಲ.

ಆದರೆ, ವಾಹನ ದಟ್ಟಣೆ ಮಾತ್ರ ಇಲ್ಲಿ ಪ್ರತಿನಿತ್ಯದ ಕಿರಿಕಿರಿ. ಇನ್ನು ಖ್ಯಾತ ಬೆಂಗಳೂರು ಕರಗ ಸ್ಥಳ ಹೊಂದಿರುವ ಧರ್ಮರಾಯಸ್ವಾಮಿ ದೇವಸ್ಥಾನ ವಾರ್ಡ್‌ ರಾಜಧಾನಿ ಬೆಂಗಳೂರಿನ ವಾಣಿಜ್ಯ ಕೇಂದ್ರವೂ ಹೌದು. ಕೆ.ಆರ್‌.ಮಾರುಕಟ್ಟೆ ಹೊರತುಪಡಿಸಿ ಕಲಾಸಿಪಾಳ್ಯದ ಬಹುತೇಕ ಭಾಗವನ್ನು ಈ ವಾರ್ಡ್‌ ಹೊಂದಿದೆ. ಇಲ್ಲೂ ವಾಹನ ದಟ್ಟಣೆ ಸಮಸ್ಯೆ ವಿಪರೀತ. ಉಳಿದಂತೆ ಜಯನಗರ ಕ್ಷೇತ್ರದ ಬೈರಸಂದ್ರ ಕೆರೆ ಅತ್ಯುತ್ತಮವಾಗಿ ಅಭಿವೃದ್ಧಿಯಾಗಿದೆ.

ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರವು ಧರ್ಮರಾಯಸ್ವಾಮಿ ದೇವಸ್ಥಾನ, ಸುಧಾಮನಗರ, ಸುಂಕೇನಹಳ್ಳಿ, ವಿಶ್ವೇಶ್ವರಪುರ, ಸಿದ್ದಾಪುರ, ಹೊಂಬೇಗೌಡನಗರ, ಜಯನಗರ ಎಂಬ ಏಳು ವಾರ್ಡ್‌ಗಳನ್ನು ಹೊಂದಿದ್ದು, ತಲಾ ಮೂರು ಕಡೆ ಕಾಂಗ್ರೆಸ್‌ ಮತ್ತು ಒಂದು ಕಡೆ ಪಕ್ಷೇತರ ಸದಸ್ಯರಿದ್ದಾರೆ.

ಕ್ಷೇತ್ರದ ಬೆಸ್ಟ್‌ ಏನು?: ಇತರೆ ಕ್ಷೇತ್ರಗಳಿಗೆ ಹೋಲಿಸಿದರೆ ಕುಡಿಯುವ ನೀರಿನ ಸಮಸ್ಯೆ ಕಡಿಮೆ. ಕೊಔಛಿಗೇರಿಗಳಲ್ಲೂ ಬಹುತೇಕ ಕಡೆ ಉತ್ತಮ ಸೌಲಭ್ಯವಿದ್ದು, ಎಲ್ಲೆಡೆ ಕಾಂಕ್ರೀಟ್‌ ರಸ್ತೆ ನಿರ್ಮಾಣವಾಗಿದೆ. ಮೂರು ಬಾರಿ ಅಭಿವೃದ್ಧಿಯಾಗಿ ಉದ್ಘಾಟನೆ ಕಂಡಿರುವ ಬೈರಸಂದ್ರ ಕೆರೆ ಸೌಂದರ್ಯ ಹೆಚ್ಚಿದ್ದು, 13 ಉದ್ಯಾನಗಳನ್ನು ಹೊಂದಿರುವ ಜಯನಗರ ವಾರ್ಡ್‌, ವಸತಿಗೆ ಅತ್ಯುತ್ತಮ ಎನಿಸಿದೆ.

ಕ್ಷೇತ್ರದ ದೊಡ್ಡ ಸಮಸ್ಯೆ: ಸುಧಾಮನಗರದಲ್ಲಿ ಹಾದುಹೋಗಿರುವ ರಾಜಾಕಾಲುವೆಯಿಂದ ಹೊರಹೊಮ್ಮುವ ದುರ್ನಾತದ ಮಧ್ಯೆ ವಾಸಿಸುವುದೇ ದೊಡ್ಡ ಸಮಸ್ಯೆ. ಲಾಲ್‌ಬಾಗ್‌ ರೀತಿಯ ವಿಶ್ವವಿಖ್ಯಾತ ಉದ್ಯಾನ ಕ್ಷೇತ್ರದಲ್ಲಿದ್ದರೂ ಸುಧಾಮನಗರದಲ್ಲಿ ಉದ್ಯಾನವೇ ಇಲ್ಲ. ಆಟದ ಮೈದಾನವೂ ಇಲ್ಲ. ಅದಕ್ಕೆ ಜಾಗವೂ ಲಭ್ಯವಿಲ್ಲ. ಬಗೆಹರಿಯದ ಅತಿಯಾದ ಸಂಚಾರ ದಟ್ಟಣೆ ಜತೆಗೆ ಮಾಲಿನ್ಯ ಸಮಸ್ಯೆಯೂ ತೀವ್ರವಾಗಿದೆ.

ತ್ರಿಕೋನ ಸ್ಪರ್ಧೆ: ಕ್ಷೇತ್ರದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ಸಮಬಲದ ಹೋರಾಟ ನಡೆಯಲಿದ್ದು, ಜೆಡಿಎಸ್‌ ಕೂಡ ಸ್ಪರ್ಧೆಯೊಡ್ಡಲಿದೆ. ಹಾಲಿ ಶಾಸಕ ಆರ್‌.ವಿ.ದೇವರಾಜ್‌ ಕಾಂಗ್ರೆಸ್‌ನಿಂದ ಕಣಕ್ಕಿಳಿಯಲಿದ್ದರೆ ಬಿಜೆಪಿಯಲ್ಲಿ ಮೂವರ ಮಧ್ಯೆ ಪೈಪೋಟಿ ಇದೆ. ಈ ಬಾರಿ ಪಿ.ಜಿ.ಆರ್‌.ಸಿಂಧ್ಯಾ ಜೆಡಿಎಸ್‌ನಿಂದ ಕಣಕ್ಕಿಳಿದರೆ ತ್ರಿಕೋನ ಸ್ಪರ್ಧೆ ಖಚಿತ. ಆದರೂ 

ಹಿಂದಿನ ಫ‌ಲಿತಾಂಶ
-ಆರ್‌.ವಿ.ದೇವರಾಜ್‌ (ಕಾಂಗ್ರೆಸ್‌)- 44714
-ಉದಯ್‌ ಗರುಡಾಚಾರ್‌ (ಬಿಜೆಪಿ)- 31655
-ಎಂ.ಸಿ.ನಾರಾಯಣಗೌಡ (ಜೆಡಿಎಸ್‌)- 24382

ಶಾಸಕರು ಏನಂತಾರೆ?
ನಾನು ಶಾಸಕನಾಗಿ ಈ ಹಿಂದೆ ಮಾಡದಷ್ಟು ಕೆಲಸಗಳನ್ನು ಕಳೆದ ಐದು ವರ್ಷದಲ್ಲಿ ಮಾಡಿದ್ದೇನೆ. ಮುಖ್ಯಮಂತ್ರಿಗಳು ತಮ್ಮ ಕ್ಷೇತ್ರಕ್ಕೆ 900 ಕೋಟಿ ರೂ. ಒದಗಿಸಿದ್ದರಿಂದ ಇದು ಸಾಧ್ಯವಾಯಿತು. ಕೆರೆ, ದೇವಸ್ಥಾನಗಳು, ಕೊಳಗೇರಿಗಳ ಅಭಿವೃದ್ಧಿ ಮತ್ತು ಅರ್ಹ ಫ‌ಲಾನುಭವಿಗಳಿಗೆ ಸಿಗಬೇಕಾದ ಸೌಲಭ್ಯಗಳನ್ನು ಒದಗಿಸಿ ಅವರು ನೆಮ್ಮದಿಯಿಂದ ಬಾಳುವಂತೆ ನೋಡಿಕೊಂಡಿದ್ದೇನೆ.
-ಆರ್‌.ವಿ.ದೇವರಾಜ್‌

ಟಿಕೆಟ್‌ ಆಕಾಂಕ್ಷಿಗಳು
-ಕಾಂಗ್ರೆಸ್‌- ಆರ್‌.ವಿ.ದೇವರಾಜ್‌
-ಬಿಜೆಪಿ- ಎನ್‌.ಆರ್‌.ರಮೇಶ್‌, ಉದಯ್‌ ಗರುಡಾಚಾರ್‌, ಶಿವಕುಮಾರ್‌
-ಜೆಡಿಎಸ್‌- ಪಿ.ಜಿ.ಆರ್‌. ಸಿಂಧ್ಯಾ, ಶಿವಪ್ಪ

ಜನ ದನಿ
ನೀರಿನ ಸಮಸ್ಯೆ ಬಹುತೇಕ ಬಗೆಹರಿದಿದೆ. ಕೊಳೆಗೇರಿ ನಿವಾಸಿಗಳಲ್ಲಿ ಬಹುಮಂದಿಗೆ ಹಕ್ಕುಪತ್ರ ಸಿಕ್ಕಿದೆ. ಆದರೆ, ಸಿದ್ದಾಪುರ ಸುತ್ತಮುತ್ತ ಇಂದಿರಾ ಕ್ಯಾಂಟೀನ್‌ ಇಲ್ಲ. ಈ ಭಾಗದಲ್ಲಿ ಕ್ಯಾಂಟೀನ್‌ ಅವಶ್ಯಕತೆ ಹೆಚ್ಚಾಗಿದೆ.
-ಪುಟ್ಟೇಗೌಡ

ಕ್ಷೇತ್ರದ ಒಂದು ಭಾಗದಲ್ಲಿ ನೀರು ಪೂರೈಕೆ ಉತ್ತಮವಾಗಿದೆ. ಆದರೆ ಕ್ಷೇತ್ರದ ಮತ್ತೂಂಧು ಭಾಗದ ಕೆಲ ಪ್ರದೇಶಗಳಲ್ಲಿ ನೀರೇ ಸರಿಯಾಗಿ ಬರುತ್ತಿಲ್ಲ. ಅದು ಹೊರತುಪಡಿಸಿ ಹೇಳಿಕೊಳ್ಳುವಂತಹ ಸಮಸ್ಯೆ ಏನೂ ಇಲ್ಲ. 
-ಜಾನಕಿ

ರಾಜಕಾಲುವೆಯಿಂದ ದುರ್ವಾಸನೆ ಹೊಮ್ಮುವ ಕಾರಣ ದಿನ ಕಳೆಯುವುದೇ ಕಷ್ಟ. ಈಗ ಕಾಲುವೆ ಸುತ್ತ ಕಾಂಪೌಂಡ್‌ ನಿರ್ಮಾಣವಾಗುತ್ತಿದೆ. ಆದರೂ ಕಾಮಗಾರಿ ನಿಧಾನವಾಗಿ ನಡೆಯುತ್ತಿದೆ. ನೀರಿನ ಸಮಸ್ಯೆಯೂ ಇದೆ.
-ಭಾಷಾ

ನಮ್ಮ ವಾರ್ಡ್‌ನಲ್ಲಿ ಉದ್ಯಾನವವೇ ಇಲ್ಲ, ಆಟವಾಡಲು ಒಂದು ಮೈದಾನವೂ ಇಲ್ಲ. ಹೀಗಾಗಿ ಮಕ್ಕಳು ಅಟವಾಡಲು, ಹಿರಿಯರು ವಾಯು ವಿಹಾರಕ್ಕಾಗಿ ಲಾಲ್‌ಬಾಗ್‌ ಅಥವಾ ಹೊಂಬೇಗೌಡನಗರಕ್ಕೆ ಹೋಗಬೇಕಿದೆ.
-ಪ್ರವೀಣ್‌

* ಪ್ರದೀಪ್‌ಕುಮಾರ್‌ ಎಂ.

Advertisement

Udayavani is now on Telegram. Click here to join our channel and stay updated with the latest news.

Next