ಬೆಳಗಾವಿ: ಕಳೆದ ತಿಂಗಳಷ್ಟೇ ಭೀಕರ ಪ್ರವಾಹದಿಂದ ತತ್ತರಿಸಿ ಹೋಗಿರುವ ಬೆಳಗಾವಿ ಜಿಲ್ಲೆಯ ನದಿ ತೀರದ ಗ್ರಾಮಗಳಿಗೆ ಮಹಾರಾಷ್ಟ್ರದಲ್ಲಿ ಸರಿಯುತ್ತಿರುವ ಧಾರಾಕಾರ ಮಳೆ ಮತ್ತೆ ಹೊಸ ಆತಂಕ ತಂದೊಡ್ಡಿದೆ.
ಮಹಾರಾಷ್ಟ್ರದ ಕೊಯ್ನಾ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿರುವುದರಿಂದ ಆಲ್ಲಿನ ಜಲಾಶಯಗಳಿಂದ ಕೃಷ್ಣಾ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡಲಾಗುತ್ತಿದೆ. ಇದರಿಂದ ಚಿಕ್ಕೋಡಿ ತಾಲೂಕಿನ ಯಡೂರು-ಕಲ್ಲೋಳ ಸೇತುವೆ ನೀರಿನಲ್ಲಿ ಮುಳುಗಿ ಸಂಪರ್ಕ ಕಡಿತಗೊಂಡಿದೆ.
ಕೊಯ್ನಾ ಜಲಾನಯನ ಪ್ರದೇಶಗಳಾದ ಮಹಾಬಳೇಶ್ವರ, ನಾವಜಾ, ವಾರಣಾ ಮೊದಲಾದ ಕಡೆಗಳಲ್ಲಿ ಕಳೆದ ಎರಡು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದ್ದು ಕೃಷ್ಣಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರಲಾರಂಭಿಸಿದೆ. ಇದರಿಂದ ರಾಜಾಪುರ ಬ್ಯಾರೇಜ್ ಮೂಲಕ ಕರ್ನಾಟಕದ ಕೃಷ್ಣಾ ನದಿಗೆ 42 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಮುಖ್ಯವಾಗಿ ಕೊಯ್ನಾ ಜಲಾಶಯ ಈಗಾಗಲೇ ಭರ್ತಿಯಾಗಿರುವುದರಿಂದ ಈ ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಹೊರಬಿಡಲಾಗುತ್ತಿದೆ.
ತಿಂಗಳ ಹಿಂದಷ್ಟೇ ಕೃಷ್ಣಾ, ವೇದಗಂಗಾ, ದೂಧಗಂಗಾ, ಘಟಪ್ರಭಾ, ಹಿರಣ್ಯಕೇಶಿ ಹಾಗೂ ಮಲಪ್ರಭಾ ನದಿಗಳ ಪ್ರವಾಹದಿಂದ ಜಿಲ್ಲೆಯಲ್ಲಿ 300ಕ್ಕೂ ಹೆಚ್ಚು ನದಿ ತೀರದ ಹಳ್ಳಿಗಳು ಪ್ರವಾಹಕ್ಕೆ ತುತ್ತಾಗಿದ್ದವು. ಕೃಷ್ಣಾ ನದಿಯ ಪ್ರವಾಹದಿಂದ ಚಿಕ್ಕೋಡಿ, ರಾಯಬಾಗ ಹಾಗೂ ಅಥಣಿ ತಾಲೂಕಿನಲ್ಲಿ 15ಕ್ಕೂ ಹೆಚ್ಚು ಹಳ್ಳಿಗಳು ಮುಳುಗಡೆಯಾಗಿದ್ದರೆ ಇನ್ನೊಂದು ಕಡೆ ಘಟಪ್ರಭಾ ಹಾಗೂ ಮಲಪ್ರಭಾ ನದಿಗಳ ಪ್ರವಾಹ ಅಪಾರ ನಷ್ಟ ಉಂಟುಮಾಡಿತ್ತು. ನದಿ ತೀರದ 300 ಕ್ಕೂ ಹೆಚ್ಚು ಹಳ್ಳಿಗಳ ಜನರು ತಮ್ಮ ಮನೆ, ಕೃಷಿ ಜಮೀನು ಸೇರಿದಂತೆ ಆಪಾರ ಪ್ರಮಾಣದ ಆಸ್ತಿ ಕಳೆದುಕೊಂಡಿದ್ದರು.
ದಾನಿಗಳ ಸಹಾಯದಿಂದ ಸಿಕ್ಕ ಪರಿಹಾರದಿಂದ ಮತ್ತೆ ಜೀವನ ಕಟ್ಟಿಕೊಂಡು ಗ್ರಾಮಕ್ಕೆ ಮರಳಿದ್ದ ಜನರಿಗೆ ಈಗ ಮತ್ತೆ ನದಿ ನೀರಿನ ಮಟ್ಟದಲ್ಲಿ ಹೆಚ್ಚಳ ಆಗಿರುವುದು ಆತಂಕದ ಸ್ಥಿತಿ ತಂದಿಟ್ಟಿದೆ. ಪ್ರವಾಹದ ಮಧ್ಯೆಯೂ ಸರಳವಾಗಿ ಗಣಪತಿ ಹಬ್ಬ ಆಚರಿಸಲು ಮುಂದಾಗಿದ್ದ ಗ್ರಾಮಸ್ಥರಿಗೆ ನದಿ ನೀರು ನಿದ್ದೆಗೆಡಿಸಿದೆ.
ಭೀಕರ ಪ್ರವಾಹದಿಂದಾಗಿ ಚಿಕ್ಕೋಡಿ ತಾಲೂಕಿನ ಕಲ್ಲೋಳ-ಯಡೂರ ಸೇತುವೆ 25 ದಿನಗಳ ಕಾಲ ಮುಳುಗಡೆಯಾಗಿ ಬಹಳ ತೊಂದರೆಯಾಗಿತ್ತು. ಈಗ ಅದೇ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ಚಿಕ್ಕೋಡಿ, ರಾಯಬಾಗ ಹಾಗೂ ಅಥಣಿ ತಾಲೂಕಿನ 35 ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಪ್ರವಾಹದ ಭೀತಿ ಎದುರಾಗಿದೆ.
ಕೃಷ್ಣಾ ನದಿಯ ಪ್ರವಾಹ ಭೀತಿ ಒಂದು ಕಡೆಯಾದರೆ ಮಹಾರಾಷ್ಟ್ರದ ಅಂಬೋಲಿ ಘಟ್ಟ ಪ್ರದೇಶದಲ್ಲಿ ಸಹ ವ್ಯಾಪಕ ಮಳೆಯಾಗುತ್ತಿರುವುದರಿಂದ ಘಟಪ್ರಭಾ ನದಿಗೆ ಅಧಿಕ ಪ್ರಮಾಣದಲ್ಲಿ ನೀರು ಬರಲಾರಂಭಿಸಿದೆ. ಹಿಡಕಲ್ ಜಲಾಶಯ ಸಂಪೂರ್ಣ ಭರ್ತಿಯಾಗಿರುವುದರಿಂದ ಜಲಾಶಯದ ಕೆಳಭಾಗದ ಜನರಲ್ಲಿ ಭೀತಿ ಆರಂಭವಾಗಿದೆ.
ಕಳೆದ ತಿಂಗಳು ಹಿಡಕಲ್ ಜಲಾಶಯದಿಂದ ಒಂದು ಲಕ್ಷ ಕ್ಯೂಸೆಕ್ ನೀರು ಬಿಟ್ಟಿದ್ದರಿಂದ ಗೋಕಾಕ ಪಟ್ಟಣದ ಅರ್ಧಭಾಗ ಬಹುತೇಕ ಮುಳುಗಡೆಯಾಗಿತ್ತು. ಅಡಬಟ್ಟಿ ಗ್ರಾಮ ಸಹ ನೀರಿನಲ್ಲಿತ್ತು. ಈಗ ಜಲಾಶಯಕ್ಕೆ 12 ಸಾವಿರ ಕ್ಯೂಸೆಕ್ ನೀರು ಬರುತ್ತಿದ್ದು 11 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ.