ಕಲಬುರಗಿ: ಮುಖ್ಯಮಂತ್ರಿಗಳು ಬುಧವಾರ ಅತಿವೃಷ್ಟಿಗೆ ಒಳಗಾದ ನಾಲ್ಕು ಜಿಲ್ಲೆಗಳ ವೈಮಾನಿಕ ಸಮೀಕ್ಷೆಯನ್ನು ನಡೆಸಿದ್ದು ಹವಾಮಾನ ವೈಪರೀತ್ಯದಿಂದ ವಿಜಯಪುರ ಜಿಲ್ಲೆಯ ಸಮೀಕ್ಷೆಯನ್ನು ರದ್ದುಪಡಿಸಲಾಗಿದೆ. ಕಲಬುರಗಿ, ಯಾದಗಿರಿ, ರಾಯಚೂರು ಜಿಲ್ಲೆಗಳ ಸಮೀಕ್ಷೆ ನಡೆಸಿದ ಮುಖ್ಯಮಂತ್ರಿಗಳ ತಂಡ ಅತಿವೃಷ್ಟಿ ಹಾಗೂ ಪ್ರವಾಹದಿಂದ ಕಲ್ಯಾಣ ಕರ್ನಾಟಕದಲ್ಲಿ ನಿರೀಕ್ಷೆ ಮೀರಿ ಹಾನಿಯಾಗಿದ್ದು ಜಂಟಿ ಸಮೀಕ್ಷೆ ಮೂಲಕ ಜಿಲ್ಲೆಯ ಹಾನಿಯ ಪ್ರಮಾಣ ಗೊತ್ತಗಲಿದೆ ಎಂದು ಹೇಳಿದ್ದಾರೆ.
ಅತಿವೃಷ್ಟಿ ಹಾನಿಯನ್ನು ವೈಮಾನಿಕ ಸಮೀಕ್ಷೆ ನಡೆಸಿ ಕಲಬುರಗಿ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು.
ಸತತ ಮಳೆ, ಪ್ರವಾಹದ ಮೇಲೆ ನಿಗಾ ಹಾಗೂ ಸಂತ್ರಸ್ತರಿಗೆ ಸೌಕರ್ಯ ಕಲ್ಪಿಸಲು ಈಗ ಆದ್ಯತೆ ವಹಿಸಲಾಗುತ್ತಿದೆ. ಹಾನಿಯನ್ನು ಜಂಟಿ ಸಮೀಕ್ಷೆ ನಡೆಸಲಾಗುವುದು. ಮನೆ ಬಿದ್ದವರಿಗೆ ಐದು ಲಕ್ಷ ರೂ ಹಾಗೂ ಅರ್ಧ ಮನೆ ಬಿದ್ದವರಿಗೆ ಮೂರು ಲಕ್ಷ ರೂ ಮತ್ತು ಬೆಳೆ ಹಾನಿಗೆ ಎನ್ ಡಿಆರ್ ಎಫ್ ನಿಯಮಾವಳಿ ಪರಿಹಾರ ಕೊಡಲಾಗುವುದು. ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಘೋಷಣೆಗಳನ್ನು ಮಾಡುವುದಿಲ್ಲ ಎಂದು ಸಿಎಂ ವಿವರಣೆ ನೀಡಿದರು.
ಇದನ್ನೂ ಓದಿ:ಗುಡ್ ನ್ಯೂಸ್: ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ ಕೆಜಿಎಫ್-2 ಅಧೀರ “ಸಂಜಯ್ ದತ್”
ಟ್ಯಾಂಕರ್ ಮೂಲಕ ನೀರು ಪೂರೈಕೆ: ಕಲಬುರಗಿ ಮಹಾನಗರಕ್ಕೆ ಪೂರೈಕೆಯಾಗುವ ನೀರಿನ ಪಂಪ್ ಹಾಗೂ ಟ್ರಾನ್ಸಫಾರ್ಮರ್ ನೀರಲ್ಲಿ ಮುಳುಗಿ ಹಾಳಾಗಿದ್ದರಿಂದ ಹಾಗೂ ಹಳ್ಳಿಗಳಲ್ಲಿ ಸಹ ನೀರು ಪೂರೈಕೆ ಕಾರ್ಯ ಗಳೆಲ್ಲ ನಾಶವಾಗಿದ್ದರಿಂದ ಟ್ಯಾಂಕರ್ ಮೂಲಕ ನೀರು ವಿತರಿಸುವಂತೆ ಹಾಗೂ ಸಾಂಕ್ರಾಮಿಕ ರೋಗ ಹರಡದಂತೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಕಲಬುರಗಿ, ಯಾದಗಿರಿ, ವಿಜಯಪುರ ಹಾಗೂ ರಾಯಚೂರು ಈ ನಾಲ್ಕು ಜಿಲ್ಲೆಗಳಲ್ಲಿ 247 ಗ್ರಾಮಗಳು ಪ್ರವಾಹಕ್ಕೆ ಒಳಗಾಗಿವೆ. 117 ಗ್ರಾಮಗಳು ಭಾಗಶ: ಮುಳುಗಿವೆ. ಒಟ್ಟಾರೆ 233 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. 38000 ಸಾವಿರ ಸಂತ್ರಸ್ತರಿಗೆ ಸುರಕ್ಷಿತ ವ್ಯವಸ್ಥೆ ಕಲ್ಪಿಸಲಾಗಿದೆ. 5000 ಸಾವಿರ ಜನರನ್ನು ಸೇನೆ ಹಾಗೂ ಎನ್ ಡಿಆರ್ ಎಫ್ ತಂಡಗಳು ರಕ್ಷಿಸಿವೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ವಿವರಣೆ ನೀಡಿದರು.
ಪ್ರವಾಹ ಹಾಗೂ ಅತಿ ವೃಷ್ಡಿ ಹಾನಿಯನ್ನು ಕಣ್ಣಾರೆ ಕಾಣಲಾಗಿದೆ. ಸಮಗ್ರ ಪರಿಸ್ಥಿತಿಯನ್ನು ಅಧಿಕಾರಿಗಳಿಂದ ಪಡೆಯಲಾಗಿದೆ.
ವಿಮಾನಕ್ಕಾಗಿ ಎರಡು ಗಂಟೆ ಕಾದ ಸಿಎಂ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬುಧವಾರ ಬೆಳಿಗ್ಗೆ ವಿಶೇಷ ವಿಮಾನ ಮೂಲಕ ಮೊದಲು ಬಳ್ಳಾರಿಗೆ ಆಗಮಿಸಿ ಅಲ್ಲಿಂದ ಹೆಲಿಕಾಪ್ಟರ್ ಮೂಲಕ ರಾಯಚೂರು, ಯಾದಗಿರಿ ಹಾಗೂ ಕಲಬುರಗಿ ಜಿಲ್ಲೆಯ ಅತಿವೃಷ್ಟಿ ಹಾಗೂ ಪ್ರವಾಹ ಹಾನಿಯನ್ನು ವೀಕ್ಷಿಸಿದರು.
ಹಾನಿ ವೀಕ್ಷಿಸಿದ ನಂತರ ಕಲಬುರಗಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಸಿಎಂ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪರಿಸ್ಥಿತಿ ಕುರಿತು ಮಾಹಿತಿ ಪಡೆದುಕೊಂಡರು. ತದನಂತರ ಊಟ ಮಾಡಿ ವಿಜಯಪುರ ಜಿಲ್ಲೆ ಹಾನಿ ವೀಕ್ಷಿಸಲು ಮುಂದಾದಾಗ ಹೆಲಿಕ್ಯಾಪ್ಟರ್ ಹವಾಮಾನ ವೈಪರೀತ್ಯದಿಂದ ಹೊರಡಲು ಅಸಾಧ್ಯ ಎಂದು ಅಧಿಕಾರಿಗಳು ಸಿಎಂ ಗಮನಕ್ಕೆ ತಂದರು. ಈ ನಡುವೆ ವಿಮಾನ ಬರಲು ಸಿಎಂ ಎರಡು ಗಂಟೆ ಅಧಿಕ ಕಾಲ ಕಾಯಬೇಕಾಯಿತು.
ಬೆಳಿಗ್ಗೆ ಬಳ್ಳಾರಿಗೆ ಬಂದು ಬಿಡಲಾಗಿದ್ದ ವಿಮಾನ ತರಿಸಬೇಕೆಂದರೆ ಅದು ಹುಬ್ಬಳ್ಳಿಗೆ ಹೋಗಿತ್ತು. ಹೀಗಾಗಿ ಹುಬ್ಬಳ್ಳಿಯಿಂದಲೇ ಬರುವ ವಿಮಾನಕ್ಕಾಗಿ ಎರಡು ಗಂಟೆ ಕಾಯಲಾಯಿತು. ತದನಂತರ ವಿಶೇಷ ವಿಮಾನ ಮೂಲಕವೇ ಸಿಎಂ ಬೆಂಗಳೂರಿಗೆ ವಾಪಸ್ಸಾದರು. ಆದರೆ ವಿಜಯಪುರ ಜಿಲ್ಲೆಯಲ್ಲಿನ ವೈಮಾನಿಕ ಸಮೀಕ್ಷೆ ರದ್ದಾಯಿತು.