Advertisement

ಭೀಮಾ ತೀರದಲ್ಲಿ ತಗ್ಗದ ಸಂಕಷ್ಟ

06:44 PM Oct 20, 2020 | Suhan S |

ವಿಜಯಪುರ: ಮಳೆ ನಿಂತರೂ ಮಳೆ ಹನಿ ನಿಂತಿಲ್ಲ ಎಂಬ ಗಾದೆ ಜಿಲ್ಲೆಯ ಮಟ್ಟಿಗೆ ಅಕ್ಷರಶಃ ಅನ್ವಯ ಆಗುವಂತಿದೆ. ಜಿಲ್ಲೆಯಲ್ಲಿ ನಾಲ್ಕೈದು ದಿನ ಸುರಿದ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಜಿಲ್ಲೆಯಲ್ಲಿ ಮಳೆ ನಿಂತ ಮೇಲೂ ಮಹಾರಾಷ್ಟ್ರದಲ್ಲಿ ಸುರಿದ ಮಳೆಗೆ ನದಿಗಳು ಸೃಷ್ಟಿಸಿದ ಪ್ರವಾಹ ಜಿಲ್ಲೆಯ ತೀರಪ್ರದೇಶದ ಜನರ ಬದುಕನ್ನು ಸಂಕಷ್ಟಕ್ಕೆ ತಳ್ಳಿದೆ.

Advertisement

ಜಿಲ್ಲೆಯಲ್ಲಿ ಕಳೆದ ರವಿವಾರ ಅ. 11ರಿಂದ ನಾಲ್ಕೈದು ದಿನ ನಿರಂತರ ಸುರಿದ ಮಳೆಗೆ ವಿಜಯಪುರ ಜಿಲ್ಲೆ ತತ್ತರಿಸಿತ್ತು. ಅ. 12ರಂದು 17.85 ಮಿ.ಮೀ, ಅ. 13ರಂದು 19.20, ಅ. 14ರಂದು 20.06 , ಅ. 15ರಂದು 36.84 ಹಾಗೂ ಅ. 16ರಂದು 0.77 ಮಿ.ಮೀ ಮಳೆ ಸುರಿದ್ದು, ಕೇವಲ ನಾಲ್ಕೈದು ದಿನಗಳಲ್ಲೇ ಸುಮಾರು 100 ಮಿ.ಮೀ.ಗೂ ಹೆಚ್ಚಿನ ವರ್ಷಧಾರೆ ಆಗಿದೆ. ಇದಲ್ಲದೇ ಜಿಲ್ಲೆಯಲ್ಲಿ ಸುರಿದ ಮಳೆಗೆ ಡೋಣಿ ನದಿ ಪ್ರವಾಹ ಸೃಷ್ಟಿಸಿತೀರ ಪ್ರದೇಶದ ಹತ್ತಾರು ಹಳ್ಳಿಗಳ ರೈತರ ಜಮೀನುಗಳಲ್ಲಿ ಬೆಳೆದಿದ್ದ ಬೆಳೆ ಹಾನಿಯಾಗಿತ್ತು. ಜಿಲ್ಲೆಯಲ್ಲಿ ಮಳೆಯಿಂದಾಗಿ 1.60 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ವಿವಿಧ ಬೆಳೆ ಹಾನಿಯಾಗಿ 646 ಕೋಟಿ ರೂ. ನಷ್ಟ ಸಂಭವಿಸಿದೆ.

ಜಿಲ್ಲೆಯಲ್ಲಿ ಮಳೆ ನಿಂತು ಜನರು ಸುಧಾರಿಸಿಕೊಳ್ಳುವ ಹಂತದಲ್ಲೇ ಮಹಾರಾಷ್ಟ್ರ ರಾಜ್ಯದಲ್ಲಿ ಸುರಿದ ಮಳೆಗೆ ಭೀಮಾ ನದಿಯಲ್ಲಿಮಹಾಪುರ ಉಕ್ಕಿ ಹರಿಯತೊಡಗಿತು. ಮಳೆ ಇಲ್ಲದಿದ್ದರೂ ಸುಮಾರು 8 ಲಕ್ಷ ಕ್ಯೂಸೆಕ್‌ ನೀರು ಹರಿದ ಕಾರಣ ಭೀಮೆ ಮಡಿಲಲ್ಲಿ ಪ್ರವಾಹ ಸೃಷ್ಟಿಯಾಯ್ತು. ಪರಿಣಾಮ ಜಿಲ್ಲೆಯ ಚಡಚಣ, ಇಂಡಿ ಹಾಗೂಸಿಂದಗಿ ತಾಲೂಕಿನ ಸುಮಾರು 40 ಹಳ್ಳಿಗಳುಜಲಾವೃತವಾಗಿ ಸುಮಾರು 2 ಸಾವಿರಕ್ಕೂ ಹೆಚ್ಚು ಜನರು ಬೀದಿಗೆ ನಿಲ್ಲುವಂತಾಯಿತು.

ರವಿವಾರ ಮಧ್ಯಾಹ್ನದಿಂದ ಭೀಮಾ ನದಿಯಲ್ಲಿ ಪ್ರವಾಹ ತಗ್ಗಿದ್ದು, ಕಾಳಜಿ ಕೇಂದ್ರದಲ್ಲಿದ್ದ ಜನರು ಒಬ್ಬೊಬ್ಬರಾಗಿ ಮನೆಗೆ ಮರಳುತ್ತಿದ್ದಾರೆ. ಆದರೆ ಪ್ರವಾಹದ ನೀರಿನಲ್ಲಿ ನೆನೆದಿರುವ ಮನೆಗಳುಅಪಾಯದ ಆಗರವಾಗಿವೆ. ಮನೆಗಳಲ್ಲಿ ಹಾವು-ಚೇಳುಗಳಂಥ ವಿಷ ಜಂತುಗಳು, ಏಡಿ ಇತರೆ ಜೀವಿಗಳು ಮನೆಗಳತ್ತ ನುಗ್ಗಿದ್ದು ಸಂತ್ರಸ್ತರಿಗೆ ಸ್ವಾಗತ ನೀಡುತ್ತಿವೆ. ಇದರಿಂದ ಜನರು ಮನೆಗಳಲ್ಲಿ ವಾಸ ಮಾಡಲು ಭಯ ಪಡುವಂತೆ ಮಾಡಿದೆ. ಇನ್ನು ಇಡಿ ಗ್ರಾಮಗಳನ್ನೇ ಸುತ್ತುವರಿದು ಜಲ ದಿಗ್ಬಂಧನ ವಿಧಿಸಿದ್ದ ಭೀಮಾ ಪ್ರವಾಹ, ಜನವಸತಿ ಪ್ರದೇಶಗಳಲ್ಲಿ ಕೆಸರು ತುಂಬಿದೆ. ಇದರಿಂದಾಗಿ ಮನೆಗಳತ್ತ ಮುಖ ಮಾಡಿದವರಿಗೆ ಕೆಸರು ಹೊರ ಹಾಕಿ ಮನೆಗಳನ್ನು ಸ್ವತ್ಛಗೊಳಿಸುವುದು ಸವಾಲಾಗಿದೆ.

ಪ್ರವಾಹಕ್ಕೆ ಕೊಚ್ಚಿ ಹೋಗಿ ಮನೆಗಳಲ್ಲಿಅಳಿದುಳಿದ ಸಾಮಾನು ಸರಂಜಾಮುಗಳನ್ನು ತೊಳೆಯುತ್ತಿದ್ದಾರೆ. ಆಹಾರ ಧಾನ್ಯಗಳು ಕೊಳೆತು ದುರ್ವಾಸನೆ ಹರಡಿಕೊಂಡಿದೆ. ಮನೆಗಳನ್ನು ಆವರಿಸಿದ್ದ ಪ್ರವಾಹದ ನೀರಿ  ನಿಂದಾಗಿ ಮಣ್ಣಿನ ಮನೆಗಳು ಮೇಲ್ನೋಟಕ್ಕೆ ಸುರಕ್ಷಿತ ಎನ್ನುವಂತೆ ಕಂಡು ಬಂದರೂ ಅಪಾಯಮುನ್ಸೂಚನೆ ನೀಡುತ್ತಿವೆ. ಹೀಗಾಗಿ ಇಂಥ ಮನೆಗಳಲ್ಲಿ ಮಕ್ಕಳು, ವೃದ್ಧರು, ಮಹಿಳೆಯರೊಂದಿಗೆ ಜೀವನ ಕಳೆಯಲು ಪ್ರವಾಹ ಸಂತ್ರಸ್ತ ಗ್ರಾಮಗಳ ಜನರು ಹಿಂದೇಟು ಹಾಕುವಂತೆಮಾಡುತ್ತಿವೆ. ಇನ್ನು ಮನೆಗಳಲ್ಲಿ ಮಾತ್ರವಲ್ಲ ಪ್ರವಾಹ ಬಾಧಿ ತ ಗ್ರಾಮಗಳಲ್ಲಿ ಎಲ್ಲೆಡೆ ಕೆಸರು, ತ್ಯಾಜ್ಯದ ರಾಶಿ ಬಿದ್ದಿದ್ದು, ಗ್ರಾಮದಲ್ಲಿ ದುರ್ವಾಸನೆ ಹರಡಿಕೊಂಡಿದೆ. ಜೊತೆಗೆ ರೋಗಕಾರಕ ಸೊಳ್ಳೆಗಳು ಹೆಚ್ಚಿದ್ದು, ಸಾಂಕ್ರಾಮಿಕ ರೋಗ ಭೀತಿ ಎದುರಾಗಿದೆ.

Advertisement

ಪ್ರವಾಹದ ಪರಿಣಾಮ ಭೀಮಾ ನದಿ ಪಾತ್ರದ ಬಹುತೇಕ ಹಳ್ಳಿಗಳಲ್ಲಿ ವಿದ್ಯುತ್‌ ಸಂಪರ್ಕ ಸಮಸ್ಯೆಯಾಗಿದೆ. ಕುಡಿಯುವ ನೀರಿನ ಯೋಜನೆಗಳು ಗಂಭೀರ ಸ್ವರೂಪದ ದುರಸ್ತಿ ಹಂತ ತಲುಪಿರುವ ಕಾರಣ ಭೀಮೆಯಲ್ಲಿ ಇನ್ನೂಲಕ್ಷಾಂತರ ಕ್ಯೂಸೆಕ್‌ ನೀರು ಹರಿಯುತ್ತಿದ್ದರೂ, ತೀರ ಪ್ರದೇಶಗಳ ಜನರು ಕುಡಿವ ನೀರಿಗೆ ಪರದಾಡುವಂತೆ ಮಾಡಿದೆ. ಹೀಗಾಗಿ ಪ್ರವಾಹ ಬಾಧಿತ ಹಳ್ಳಿಗಳ ಜನರು ಇದೀಗ ಟ್ಯಾಂಕರ್‌ ನೀರಿಗೆ ಮೊರೆ ಹೋಗಿದ್ದಾರೆ. ಸಚಿವ-ಶಾಸಕರು ನೀಡುವ ಸಾಂತ್ವನದ ಮಾತುಗಳಿಗಿಂತ ಈ ಜನರ ತುರ್ತು ಜೀವನ ನಡೆಸಲು ಸಾಧ್ಯವಿಲ್ಲವಾಗಿದೆ. ಹೀಗಾಗಿ ಕಣ್ಣೀರು ಒರೆಸಿಕೊಳ್ಳುತ್ತಲೇ ಜನರು ಸಹಜ ಜೀವನ ನಡೆಸುವತ್ತ ಹೆಜ್ಜೆ ಹಾಕುತ್ತಿದ್ದಾರೆ.

ಭೀಮಾ ನದಿ ಪ್ರವಾಹ ತಗ್ಗಿದೆ ಎಂದು ಮನೆಗೆ ತೆರಳಿದ ಸಂತ್ರಸ್ತರು ಮನೆಗಳಲ್ಲಿ ಕೆಸರು ಹಾಗೂ ನೀರಿನಿಂದ ಕೊಳೆತ ವಸ್ತುಗಳನ್ನು ಕಂಡು ಕಂಗಾಲಾಗಿದ್ದಾರೆ. ಕುಡಿಯುವ ನೀರಿಗೂ ಇಲ್ಲೀಗ ಗಂಭೀರ ಸಮಸ್ಯೆ ಎದುರಾಗಿದೆ. ವಿಷ ಜಂತುಗಳ ಹಾವಳಿ ಮಿತಿ ಮೀರಿದೆ. ಗ್ರಾಪಂ ಮೂಲಕ ಅಗತ್ಯ ಸೌಲಭ್ಯ ಕಲ್ಪಿಸುತ್ತಿದ್ದೇವೆ. ಸಾಂಕ್ರಾಮಿಕ ರೋಗಹರಡದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದೇವೆ. -ಹುಚ್ಚಪ್ಪ ತಳವಾರ, ಗ್ರಾಮ ಪಂಚಾಯತ್‌ ಸದಸ್ಯ, ಭುಂಯ್ಯಾರ

ಜಿಲ್ಲೆಯಲ್ಲಿ ಪ್ರವಾಹ ಬಾಧಿತ ಎಲ್ಲ ಗ್ರಾಮಗಳಲ್ಲಿ ಹಾಗೂ ಕಾಳಜಿ ಕೇಂದ್ರಗಳಲ್ಲಿ ಸಾಂಕ್ರಾಮಿಕ ರೋಗ ಹರಡದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ರೋಗ ಕಾಣಿಸಿಕೊಂಡಲ್ಲಿ ತುರ್ತು ಸೇವೆ ನೀಡಲು ಇಲಾಖೆಯವೈದ್ಯ-ಸಿಬ್ಬಂದಿ ಸನ್ನದ್ಧ ಸ್ಥಿತಿಯಲ್ಲಿದೆ. -ಡಾ| ಮಹೇಂದ್ರ ಕಾಪ್ಸೆ ಡಿಎಚ್‌ಒ, ವಿಜಯಪುರ

 

-ಜಿ.ಎಸ್‌.ಕಮತರ

Advertisement

Udayavani is now on Telegram. Click here to join our channel and stay updated with the latest news.

Next