ಬೆಂಗಳೂರು: ರಾಜ್ಯದಲ್ಲಿ ನೆರೆಗೆ ತುತ್ತಾಗಿ ಪುಸ್ತಕ, ಸಮವಸ್ತ್ರ ಕಳೆದುಕೊಂಡ ಸರ್ಕಾರಿ ಶಾಲಾ ಮಕ್ಕಳಿಗೆ 15 ದಿನಗಳಲ್ಲಿ ಹೊಸ ಸಮವಸ್ತ್ರ ಸಿಗಲಿದೆ. ಸಮವಸ್ತ್ರ ಕಳೆದುಕೊಂಡವರಿಗೆ ಮತ್ತೂಮ್ಮೆ ಸಮವಸ್ತ್ರ ನೀಡಲು ಉದ್ದೇಶಿಸಿದ್ದ ಸರ್ಕಾರ, ಶಾಲಾವಾರು ಹಾನಿಗೊಳಗಾದ ಮಕ್ಕಳ ಪಟ್ಟಿಯನ್ನು ಸಮೀಕ್ಷೆ ಮೂಲಕ ಸಿದ್ಧಪಡಿಸಿದೆ.
ರಾಜ್ಯಾದ್ಯಂತ 63,227 ಮಕ್ಕಳು ಸಮವಸ್ತ್ರ ಕಳೆದುಕೊಂಡಿದ್ದು, ಈ ಎಲ್ಲಾ ಮಕ್ಕಳಿಗೆ ಪುನ: ಸಮವಸ್ತ್ರ ನೀಡಲು ಉದ್ದೇಶಿಸಿರುವ ಸರ್ಕಾರ, ಸಮವಸ್ತ್ರ ಪೂರೈಸಲು ಕರ್ನಾಟಕ ಕೈಮಗ್ಗ ಅಭಿವೃದ್ದಿ ನಿಗಮಕ್ಕೆ ಟೆಂಡರ್ ಪ್ರಕ್ರಿಯೆ ಇಲ್ಲದೆ ತುರ್ತು ಪೂರೈಕೆಗೆ ಸೂಚನೆ ನೀಡಿದೆ.
ರಾಜ್ಯದ ನೆರೆಗೆ ತುತ್ತಾಗಿರುವ ಜಿಲ್ಲೆಗಳಲ್ಲಿ ಚಿಕ್ಕೋಡಿ ಒಂದೇ ಜಿಲ್ಲೆಯಲ್ಲಿ ಸುಮಾರು 38,786 ಮಕ್ಕಳು ಸಮವಸ್ತ್ರಗಳನ್ನು ಕಳೆದುಕೊಂಡಿದ್ದಾರೆ. ನಂತರ ಬೆಳಗಾವಿ 14,528 , ಬಾಗಲಕೋಟೆ 2835, ಧಾರವಾಡ 2172, ಗದಗ 1960, ಕೊಡಗು 1295, ರಾಯಚೂರು 794, ಶಿವಮೊಗ್ಗ 754 ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ 100 ಮಕ್ಕಳ ಸಮವಸ್ತ್ರ ನೀರಲ್ಲಿ ಕೊಚ್ಚಿ ಹೋಗಿದೆ.
ಪ್ರಾಥಮಿಕ ಶಿಕ್ಷಣ ಇಲಾಖೆ ಶಾಲಾವಾರು ಸಮೀಕ್ಷೆ ನಡೆಸಿ ತಯಾರಿಸಿರುವ ಈ ಪಟ್ಟಿಯಲ್ಲಿ ಒಂದರಿಂದ ಏಳನೇ ತರಗತಿ ಮಕ್ಕಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ. ಈ ಸಮವಸ್ತ್ರ ಮುಂದಿನ 15 ದಿನಗಳಲ್ಲಿ ಮಕ್ಕಳಿಗೆ ದೊರೆಯಲಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಕೆ.ಜಿ.ಜಗದೀಶ್ ತಿಳಿಸಿದರು. ನೆರೆಯಿಂದ ಹಾನಿಗೊಳಗಾದ ಮಕ್ಕಳಿಗೆ ಮರು ಸಮವಸ್ತ್ರ ಪೂರೈಕೆ ಬಗ್ಗೆ
“ಉದಯವಾಣಿ’ಯೊಂದಿಗೆ ಮಾತನಾಡಿದ ಜಗದೀಶ್, ಮರು ಸಮವಸ್ತ್ರ ಪೂರೈಕೆಗೆ ಸರ್ಕಾರ ಶೀಘ್ರವಾಗಿ ಸ್ಪಂದನೆ ನೀಡಿದೆ.
ಯಾವುದೇ ಟೆಂಡರ್ ಪ್ರಕ್ರಿಯೆ ಇಲ್ಲದೆ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಮೂಲಕ ಸಮವಸ್ತ್ರ ಪೂರೈಕೆ ಮಾಡುವಂತೆ ನಿರ್ದೇಶನ ನೀಡಲಾಗಿತ್ತು. ಈ ವೇಳೆ ಮೂರು ದಿನಗಳ ಗಡುವನ್ನು ಕೂಡ ನೀಡಿತ್ತು. ಆದರೆ, ಮೂರು ದಿನಗಳಲ್ಲಿ 67ಸಾವಿರಕ್ಕೂ ಅಧಿಕ ಸಮವಸ್ತ್ರ ಪೂರೈಕೆ ಕಷ್ಟವಾಗಿದ್ದು, 15ದಿನಗಳ ಗಡುವು ನೀಡಲಾಗಿದೆ. ಕರ್ನಾಟಕ ಕೈಮಗ್ಗ ಅಭಿವೃದ್ದಿ ನಿಗಮ ಕೂಡ 15ದಿನಗಳಲ್ಲಿ ಪೂರೈಕೆ ಮಾಡುವುದಾಗಿ ತಿಳಿಸಿದೆ ಎಂದರು.
ಜಿಲ್ಲಾವಾರು ವಿವರ
ಚಿಕ್ಕೋಡಿ -38,786
ಬೆಳಗಾವಿ -14,528
ಬಾಗಲಕೋಟೆ -2,835
ಧಾರವಾಡ -2,172
ಗದಗ – 1,960
ಕೊಡಗು – 1,295
ರಾಯಚೂರು -794
ಶಿವಮೊಗ್ಗ – 754
ಚಿಕ್ಕಮಗಳೂರು – 100
* ಲೋಕೇಶ್ ರಾಮ್