ಬೆಳಗಾವಿ: ಜಿಲ್ಲೆಯಲ್ಲಿ ಮಳೆಯ ಅಬ್ಬರ ಸಾಕಷ್ಟು ಕಡಿಮೆಯಾಗಿದೆ. ಆದರೆ ನೆರೆಯ ಮಹಾರಾಷ್ಟ್ರದಲ್ಲಿ ಇನ್ನೂ ಧಾರಾಕಾರ ಮಳೆ ಮುಂದುವರಿದಿದ್ದು, ಕೃಷ್ಣಾ ಹಾಗೂ ವೇದಗಂಗಾ ನದಿಗಳ ಪ್ರವಾಹ ಹಾಗೆಯೇ ಮುಂದುವರಿದಿದೆ. ಈ ಎರಡೂ ನದಿಗಳ ನೀರಿನಮಟ್ಟ ಏರಿಕೆಯಾಗುತ್ತಲೇ ಇದ್ದು, ನದಿ ತೀರದ ಗ್ರಾಮಗಳಲ್ಲಿ ಪ್ರವಾಹದ ಆತಂಕ ಮತ್ತಷ್ಟು ಹೆಚ್ಚಿದೆ.
ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್‌ದಿಂದ 1,65,250 ಕ್ಯೂಸೆಕ್ ಹಾಗೂ ವೇದಗಂಗಾ ನದಿಯಿಂದ 33792 ಕ್ಯೂಸೆಕ್ ಸೇರಿದಂತೆ ಚಿಕ್ಕೋಡಿ ಬಳಿ ಕೃಷ್ಣಾ ನದಿಗೆ 1,99,200 ಕ್ಯೂಸೆಕ್ ನೀರು ಹರಿದು ಬರುತ್ತಿದೆ.
ಕಳೆದ 24 ಗಂಟೆಗಳ ಅವಧಿಯಲ್ಲಿ ಕೃಷ್ಣಾ ನದಿ ಹರಿವು 10 ಸಾವಿರ ಕ್ಯೂಸೆಕ್‌ನಷ್ಟು ಏರಿಕೆಯಾಗಿದೆ. ಇದರಿಂದ ಚಿಕ್ಕೋಡಿ, ರಾಯಬಾಗ ಹಾಗೂ ಅಥಣಿ ತಾಲೂಕಿನ ನದಿ ತೀರದ ಗ್ರಾಮಗಳಲ್ಲಿ ಪ್ರವಾಹದ ಭೀತಿ ಹೆಚ್ಚಿದೆ.
ಮಹಾರಾಷ್ಟ್ರದ ಅಂಬೋಲಿ ಘಟ್ಟ ಪ್ರದೇಶ ಹಾಗೂ ಖಾನಾಪುರ ತಾಲೂಕಿನಲ್ಲಿ ಮಳೆ ಪ್ರಮಾಣ ತಗ್ಗಿದೆ. ಇದರಿಂದ ಒಂದು ವಾರದಿಂದ ಸಾಕಷ್ಟು ಹೆದರಿಕೆ ಹುಟ್ಟಿಸಿದ್ದ ಘಟಪ್ರಭಾ ಹಾಗೂ ಮಲಪ್ರಭಾ ನದಿಗಳ ಅಬ್ಬರ ಮಂಗಳವಾರ ಮತ್ತಷ್ಟು ಕಡಿಮೆಯಾಗಿದೆ.
ಘಟಪ್ರಭಾ ನದಿಗೆ ನಿರ್ಮಿಸಲಾಗಿರುವ ಹಿಡಕಲ್ ಜಲಾಶಯಕ್ಕೆ ಈಗ 21064 ಕ್ಯೂಸೆಕ್ ನೀರು ಬರುತ್ತಿದೆ. ಖಾನಾಪುರ ತಾಲೂಕಿನಲ್ಲಿ ಮಳೆಯ ಅಬ್ಬರ ತಗ್ಗಿರುವದರಿಂದ ಮಲಪ್ರಭಾ ನದಿ ನೀರಿನ ಮಟ್ಟದಲ್ಲಿ ಗಣನೀಯ ಇಳಿಕೆ ಕಂಡುಬಂದಿದ.
ಮಂಗಳವಾರ ಬೆಳಗ್ಗೆ ದಾಖಲಾದ ಅಂಕಿ ಅಂಶಗಳ ಪ್ರಕಾರ ಮಲಪ್ರಭಾ ಜಲಾಶಯಕ್ಕೆ 7,314 ಕ್ಯೂಸೆಕ್ ನೀರು ಬರುತ್ತಿದೆ. ಜಲಾಶಯ ಸಂಪೂರ್ಣ ಭರ್ತಿಯಾಗಿರುವುದರಿಂದ ಇಷ್ಟೇ ಪ್ರಮಾಣದ ನೀರನ್ನು ಹೊರಗಡೆ ಬಿಡಲಾಗುತ್ತಿದೆ. ನೀರಿನ ಪ್ರಮಾಣ ಕಡಿಮೆಯಾಗಿರುವದರಿಂದ ರಾಮದುರ್ಗ ತಾಲೂಕಿನ ನದಿ ತೀರದ ಗ್ರಾಮಗಳಾದ ಸುನ್ನಾಳ, ಹಂಪಿಹೊಳಿ, ಬೆನ್ನೂರ, ಕಿಲಬನೂರ ಸುರೇಬಾನ ಮೊದಲಾದ ಗ್ರಾಮಗಳ ಜನರಲ್ಲಿ ಆತಂಕ ಕಡಿಮೆಯಾಗಿದೆ.