Advertisement

ಊರುಗೋಲಿನ ರಹಸ್ಯ

12:30 AM Jan 03, 2019 | |

“ನಾನು ಹಿಂದಿರುಗುವವರೆಗೆ ಜೋಪಾನವಾಗಿಟ್ಟಿರು ಎಂದು ಹೇಳಿ ಗೆಳೆಯನಿಗೆ ಇಪ್ಪತ್ತು ಚಿನ್ನದ ವರಹಗಳನ್ನು ಕೊಟ್ಟಿದ್ದೆ. ಈಗ ಕೇಳಿದರೆ, ನಾನು ಏನನ್ನೂ ಕೊಟ್ಟಿರಲಿಲ್ಲವೆಂದು ವಾದಿಸುತ್ತಿದ್ದಾನೆ, ದಯಮಾಡಿ ನನಗೆ ನ್ಯಾಯ ದೊರಕಿಸಿಕೊಡಿ’ ಎಂದು ಚೂಪು ಗಡ್ಡದವ ವಾದಿಸಿದ. 

Advertisement

 ಬಹಳ ಕಾಲದ ಹಿಂದೆ ಜಪಾನ್‌ ದೇಶದ ಹಳ್ಳಿಯೊಂದರಲ್ಲಿ ಸ್ಯಾಂಚೋ ಪಾಂಜ ಎಂಬ ನ್ಯಾಯವಾದಿ ಇದ್ದ. ಅವನು ಬಹಳ ಬುದ್ಧಿವಂತನೂ, ವಿವೇಕಿಯೂ ಆಗಿದ್ದ. ಹಳ್ಳಿಯ ಜನರ ಸಮಸ್ಯೆಗಳನ್ನು ಜಾಣತನದಿಂದ ಪರಿಹರಿಸುತ್ತಿದ್ದ. ಅವನಿಗೆ ಹಣದಾಸೆ ಇರಲಿಲ್ಲ. ಆದ್ದರಿಂದ ತನ್ನ ಬಳಿಗೆ ಬರುವವರು ಶ್ರೀಮಂತರೋ, ಬಡವರೋ ಎಂದು ನೋಡದೆ, ಪ್ರಾಮಾಣಿಕವಾಗಿ ನ್ಯಾಯ ತೀರ್ಮಾನ ಮಾಡುತ್ತಿದ್ದ. ಆದ್ದರಿಂದ ಹಳ್ಳಿಯ ಜನರಿಗೆ ಅವನ ಬಗ್ಗೆ ಅಪಾರವಾದ ಗೌರವವಿತ್ತು. 

ಒಮ್ಮೆ ಸ್ಯಾಂಚೋ ಪಾಂಜ ತನ್ನ ಮನೆಯ ಜಗುಲಿಯಲ್ಲಿ ಕುಳಿತು ಹಳ್ಳಿಯವರ ಕಷ್ಟ ಸುಖ ವಿಚಾರಿಸುತ್ತಿದ್ದ. ಆ ಸಮಯದಲ್ಲಿ ಇಬ್ಬರು ಮುದುಕರು ನ್ಯಾಯ ತೀರ್ಮಾನಕ್ಕಾಗಿ ಬಂದರು. ಅವರಲ್ಲೊಬ್ಬ ಎತ್ತರವಾಗಿದ್ದು ಸಣ್ಣಕ್ಕಿದ್ದ. ಅವನಿಗೆ ಚೂಪಾದ ಗಡ್ಡವಿತ್ತು. ಮತ್ತೂಬ್ಬ ಕುಳ್ಳಕ್ಕಿದ್ದು, ತನಗಿಂತ ಉದ್ದನೆಯ ಊರುಗೋಲನ್ನು ಹಿಡಿದಿದ್ದ. ಸ್ಯಾಂಚೋ ಪಾಂಜ ಅವರ ಸಮಸ್ಯೆ ಏನೆಂದು ಕೇಳಿದ. ಆಗ ಚೂಪು ಗಡ್ಡದವನು “ಮಹಾಸ್ವಾು, ಈತ ನನ್ನ ಗೆಳೆಯ, ಮೂರು ತಿಂಗಳ ಹಿಂದೆ ನಾನು ಪರಸ್ಥಳಕ್ಕೆ ಹೋಗಬೇಕಾಯಿತು. ಆಗ ಈ ನನ್ನ ಗೆಳೆಯನಿಗೆ ನಾನು ಹಿಂದಿರುಗುವವರೆಗೆ ಜೋಪಾನವಾಗಿಟ್ಟಿರು ಎಂದು ಹೇಳಿ ಇಪ್ಪತ್ತು ಚಿನ್ನದ ವರಹಗಳನ್ನು ಕೊಟ್ಟಿದ್ದೆ. ಈಗ ಕೇಳಿದರೆ, ನಾನು ಏನನ್ನೂ ಕೊಟ್ಟಿರಲಿಲ್ಲವೆಂದು ವಾದಿಸುತ್ತಿದ್ದಾನೆ, ದಯಮಾಡಿ ನನಗೆ ನ್ಯಾಯ ದೊರಕಿಸಿಕೊಡಿ’ ಎಂದು ಬೇಡಿದ. ಅವನ ಮಾತು ಮುಗಿಯುತ್ತಿದ್ದಂತೆ ಊರುಗೋಲಿನವನು ಮುಂದೆ ಬಂದ. “ಮಹಾಸ್ವಾಮಿ, ಈ ನನ್ನ ಗೆಳೆಯ ನನಗೆ ಚಿನ್ನದ ವರಹಗಳನ್ನು ತೋರಿಸಿದ್ದು ನಿಜ. ಆದರೆ ಅವುಗಳನ್ನು ನನಗೆ ಕೊಡದೆ, ದಾರಿಯ ಖರ್ಚಿಗಾಗುತ್ತದೆ ಎಂದು ತಾನೇ ಇಟ್ಟುಕೊಂಡ’ ಎಂದು ಹೇಳಿದ. 

ಸ್ಯಾಂಚೋ ಪಾಂಜ ಅವನನ್ನೇ ಕೊಂಚ ಹೊತ್ತು ದಿಟ್ಟಿಸಿ ನೋಡಿ, “ಚಿನ್ನದ ವರಹಗಳು, ಅವುಗಳ ಯಜಮಾನನ ಬಳಿಯೇ ಇವೆ’ ಎಂದು ಪ್ರಮಾಣ ಮಾಡಲು ಹೇಳಿದ. ಅದಕ್ಕೆ ಒಪ್ಪಿದ ಆ ಮುದುಕ ತನ್ನ ಬಳಿ ಇದ್ದ ಊರುಗೋಲನ್ನು ಗೆಳೆಯನ ಕೈಗೆ ವರ್ಗಾಯಿಸಿ, “ಚಿನ್ನದ ವರಹಗಳು ಗೆಳೆಯನ ಬಳಿಯೇ ಇವೆ’ ಎಂದು ಪ್ರಮಾಣ ಮಾಡಿದ. ಅವನ ವರ್ತನೆಯನ್ನೇ ಸೂಕ್ಷ್ಮವಾಗಿ ಗಮನಿಸುತ್ತಿದ್ದ ಸ್ಯಾಂಚೋ ಪಾಂಜಾನ ತುಟಿಗಳಲ್ಲಿ ಮುಗುಳ್ನಗೆ ಸುಳಿಯಿತು. ತನ್ನ ಸುತ್ತಲೂ ನೆರೆದಿದ್ದ ಜನರಲ್ಲಿ ಒಬ್ಬನನ್ನು ಕರೆದು ಊರುಗೋಲನ್ನು ಮುರಿಯಲು ಹೇಳಿದ. ಅದು ಎರಡು ತುಂಡಾಗುತ್ತಿದ್ದಂತೆ, ಅದರ ಒಳಗೆ ಅಡಗಿಸಿಟ್ಟಿದ್ದ ಚಿನ್ನದ ವರಹಗಳು ಝಣ ಝಣ ಸದ್ದಿನೊಡನೆ ಕೆಳಕ್ಕೆ ಬಿದ್ದವು. ಈ ವಿದ್ಯಮಾನವನ್ನು ನೋಡಿ ಅಲ್ಲಿದ್ದವರೆಲ್ಲ ಮೂಕವಿಸ್ಮಿತರಾದರು. ಊರುಗೋಲನ್ನು ಹಿಡಿದಿದ್ದ ಮುದುಕ ನಾಚಿಕೆ, ಅವಮಾನಗಳಿಂದ ತಲೆ ತಗ್ಗಿಸಿದ. ಅವನು ತನ್ನ ಗೆಳೆಯನ ಮೇಲೆ ಸುಳ್ಳು ಆರೋಪ ಮಾಡಿದ್ದಕ್ಕೆ ದಂಡವಾಗಿ ಸ್ಯಾಂಚೋ ಪಾಂಜ ಅವನಿಗೆ ಇಪ್ಪತ್ತು ಪೆಟ್ಟುಗಳನ್ನು ಕೊಡುವಂತೆ ಆಜ್ಞಾಪಿಸಿದ. ಅಷ್ಟರಲ್ಲಿ ಅವನ ಗೆಳೆಯ ಅಡ್ಡ ಬಂದ. “ಮಹಾಸ್ವಾಮಿ, ನನ್ನ ಹಣ ನನಗೆ ದೊರಕಿದೆ, ದಯವಿಟ್ಟು ನನ್ನ ಗೆಳೆಯನನ್ನು ಕ್ಷಮಿಸಿಬಿಡಿ, ಅವನನ್ನು ದಂಡಿಸಬೇಡಿ’ ಎಂದು ಕೇಳಿಕೊಂಡ. ಸ್ಯಾಂಚೋ ಇಬ್ಬರನ್ನೂ ಬೀಳ್ಕೊಟ್ಟ. ಜನರು ಸ್ಯಾಂಚೋ ಪಾಂಜಾನ ಬುದ್ಧಿವಂತಿಕೆಯನ್ನು ಹೊಗಳುತ್ತ ಅಲ್ಲಿಂದ ಚದುರಿದರು.       

ಪದ್ಮಜಾ ಸುಂದರೇಶ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next