Advertisement

ಗುಳೆ ತಡೆದ ಉದ್ಯೋಗ ಖಾತ್ರಿ!

04:22 PM May 19, 2018 | Team Udayavani |

ಹಗರಿಬೊಮ್ಮನಹಳ್ಳಿ: ಬರದ ಬೇಗೆಗೆ ಬೆಂದಿರುವ ತಾಲೂಕಿನ ಕೂಲಿ ಕಾರ್ಮಿಕರು ಮತ್ತು ಬಡವರಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ನೀಡುವ ಕೆಲಸ ಹೊಟ್ಟೆ ತುಂಬಿಸುತ್ತಿದೆ.

Advertisement

ಬಿಸಿಲಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಅಂತರ್ಜಲ ಪ್ರಮಾಣ ಕುಸಿತವಾಗುತ್ತಿರುವುದರಿಂದ ಕೂಲಿ ಕಾರ್ಮಿಕರಿಗೆ ಹೊಲದಲ್ಲಿ ಕೆಲಸ ಇಲ್ಲದಂತಾಗಿದೆ. ಅಲ್ಪಸ್ವಲ್ಪ ಹೊಲಗಳನ್ನು ಹೊಂದಿರುವ ರೈತರು ಕೂಡ ಸೆಲಿಕೆ, ಗುದ್ದಲಿ ಹಿಡಿದು ಉದ್ಯೋಗ ಖಾತ್ರಿ ಕೆಲಸಕ್ಕೆ ಹೋಗುತ್ತಿದ್ದಾರೆ. ತಂಬ್ರಹಳ್ಳಿಯ ತೋಂಟದಾರ್ಯ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿರುವ ಹಿನ್ನೀರು ಪ್ರದೇಶದಲ್ಲಿನ ಹಳ್ಳದ ಹೂಳು ತೆಗೆಯಲು ತಾಲೂಕಿನ ಆರು ಗ್ರಾಪಂ ವ್ಯಾಪ್ತಿಯ ಕೂಲಿ ಕಾರ್ಮಿಕರಿಗೆ ಕೆಲಸ ನೀಡಿದ್ದು, ಕಾರ್ಮಿಕರ ಜೀವನಕ್ಕೆ ಆಸರೆಯಾದಂತಾಗಿದೆ. ಇದರ ಜೊತೆಗೆ ಟ್ರ್ಯಾಕ್ಟರ್‌ ಹೊಂದಿರುವ ರೈತರಿಗೂ ಕೂಡ ಯೋಜನೆ ವರದಾನವಾಗಿದೆ. ತಂಬ್ರಹಳ್ಳಿ ಭಾಗದ ರೈತರು ಹೂಳೆತ್ತಿರುವ ಫಲವತ್ತತೆಯ ಕಪ್ಪು ಮಣ್ಣನ್ನು ತಮ್ಮ ಹೊಲಗಳಿಗೆ ಒಯ್ಯುತ್ತಿರುವುದು ಭೂಮಿಯ ಫಲವತ್ತತೆಗೆ ಪೂರಕವಾಗಿದೆ. ಹಳ್ಳದಲ್ಲಿ ಪ್ರತಿದಿನ ಸಾವಿರಕ್ಕೂ ಹೆಚ್ಚು ಕೂಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಈ ಕೆಲಸದ ಎನ್‌ಎಂಆರ್‌ ತೆಗೆಯುವ ಕಂಪ್ಯೂಟರ್‌ ಆಪರೇಟರ್‌ಗಳಿಗೆ ಕೆಲಸದ ಒತ್ತಡವಿದ್ದರೂ ಬೇಸರ ಮಾಡಿಕೊಳ್ಳದೆ ಕಾರ್ಮಿಕರ ಕೆಲಸಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ.

ತಾಲೂಕಿನ ತಂಬ್ರಹಳ್ಳಿ, ಬಾಚಿಗೊಂಡನಹಳ್ಳಿ, ಗದ್ದಿಕೇರಿ, ಮೋರಿಗೇರಿ, ಮುತ್ರೂರು, ಬನ್ನಿಗೋಳ ಗ್ರಾಪಂ ಕೂಲಿ ಕಾರ್ಮಿಕರು ಕೆಲಸದಲ್ಲಿ ತೊಡಗಿದ್ದಾರೆ. ಕೆಲಸಕ್ಕೆ 7.5 ಕೋಟಿ ರೂ. ಮೊತ್ತ ವಿನಿಯೋಗಿಸಲಾಗುತ್ತದೆ. ಈ ಕೆಲಸದಿಂದ ಅಂತರ್ಜಲ ಪ್ರಮಾಣ ಜಾಸ್ತಿ ಆಗುವುದರ ಜೊತೆಗೆ ಕಾರ್ಮಿಕರಿಗೆ ಕೆಲಸ ನೀಡುವ ಉದ್ದೇಶ ಈಡೇರಿದಂತಾಗಿದೆ ಎಂದು ತಂಬ್ರಹಳ್ಳಿ ಗ್ರಾಪಂ ಪಿಡಿಒ ಶಾಂತನಗೌಡ ತಿಳಿಸಿದ್ದಾರೆ. 

ತಾಪಂ ಇಒ ಮಲ್ಲಾ ನಾಯ್ಕ ಅವರು ಬರದ ಪರಿಸ್ಥಿತಿ ಅರಿತು, ತಾಲೂಕಿನ ಪ್ರತಿಯೊಬ್ಬ ಪಿಡಿಒಗೆ ಕೆಲಸ ನೀಡಲು ಆದೇಶಿಸಿದ್ದಾರೆ. ಈ ಹಿಂದೆ ಉದ್ಯೋಗ ಖಾತ್ರಿ ಯೋಜನೆ ಕೇವಲ ಗ್ರಾಪಂ ಸದಸ್ಯರ ಪಾಲಾಗುತ್ತಿದ್ದನ್ನು ತಿಳಿದ ನಾಯ್ಕವರು, ಈಗ ಕೂಲಿ ಕಾರ್ಮಿಕರಿಗೆ ಕೆಲಸ ಸಿಗುವಂತೆ ಮಾಡಿದ್ದಾರೆ. 

ತಂಬ್ರಹಳ್ಳಿ ಹಳ್ಳದಲ್ಲಿರುವ ಚೆಕ್‌ಡ್ಯಾಂ ಏರಿ ಏರಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಲಾಗಿದೆ. ಇದರಿಂದ ಅಂತರ್ಜಲ ಪ್ರಮಾಣ ಹೆಚ್ಚಾಗಿ ಸುತ್ತಲಿನ ಬೋರ್‌ವೆಲ್‌ಗಳು ರಿಚಾರ್ಜ್‌ ಆಗುತ್ತವೆ. ಈ ಹಳ್ಳದಲ್ಲಿ ಕೂಲಿ ಕಾರ್ಮಿಕರಿಗೆ ಕನಿಷ್ಠ ಎರಡು ತಿಂಗಳು ಕೆಲಸ ಸಿಗುತ್ತದೆ. ಕೆಲಸದ ಅಗತ್ಯತೆ ಇದ್ದಲಿ ನಿರಂತರ ಕೆಲಸ ನೀಡಲಾಗುವುದು. ಹಳ್ಳದ
ಏರಿ ಏರಿಸಿ ಪಿಚ್ಚಿಂಗ್‌ ಮಾಡಲು ಕ್ರಿಯಾ ಯೋಜನೆ ರೂಪಿಸಲಾಗುವುದು. 
ಬಿ.ಮಲ್ಲಾನಾಯ್ಕ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ

Advertisement

ಇರೋ ಸ್ವಲ್ಪ ಹೊಲದಲ್ಲಿ ಏನಾದ್ರೂ ಮಾಡಿ ಜೀವನ ಮಾಡೋನಾ ಅಂದ್ರ ಏನ್‌ ಬೆಳೆದರೂ ಸರಕಾರದವರು ಒಳ್ಳೇ
ರೇಟ್‌ ಕೊಡಲಿ. ಅದಕ್ಕ ಬಂಡವಾಳ ಇಲ್ಲದ ಉದ್ಯೋಗ ಖಾತ್ರಿ ಯೋಜನೆಯ ಕೆಲಸಕ್ಕಾ ಹೋಗದು ಒಳ್ಳೇದು ಅಂದು ನಾವು ಕೆಲಸಕ್ಕಾ ಹೋಂಟಿವ್ರಿ. ಬರಗಾಲ ಹಿಂಗೇ ಮುಂದುವರಿದರೆ ಜೀವನ ಮಾಡೋದು ಕಷ್ಟ ಐತ್ರಿ.
ಡಣಾಪುರ ದೇವಪ್ಪ, ಕೂಲಿ ಕಾರ್ಮಿಕ 

„ಸುರೇಶ ಯಳಕಪ್ಪನವರ

Advertisement

Udayavani is now on Telegram. Click here to join our channel and stay updated with the latest news.

Next