Advertisement
ಪ್ರಯಾಣಿಕರ ಬೇಡಿಕೆ ಅನುಸಾರ ಈ ಹೊಸ ಪ್ರಸ್ತಾವನೆಯನ್ನು ವಿಮಾನ ನಿಲ್ದಾಣದ ಅಧಿಕಾರಿಗಳೇ ಮುಂದಿಟ್ಟಿದ್ದಾರೆ. ವಿಮಾನ ಹಾರಾಟ ಆರಂಭವಾದ ದಿನದಿಂದಲೂ ಪ್ರಯಾಣಿಕರಿಂದ ಉತ್ತಮ ಸ್ಪಂದನೆ ದೊರೆತಿದೆ. ದೇಶದ ಕ್ರಿಯಾಶೀಲ ವಿಮಾನ ನಿಲ್ದಾಣಗಳಲ್ಲಿ ಇದು ಕೂಡ ಒಂದಾಗಿದ್ದು, ದಿನದಿಂದ ದಿನಕ್ಕೆ ವಿಮಾನಯಾನಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಜತೆಗೆ ಬೇರೆ ಮಾರ್ಗಗಳಲ್ಲಿ ವಿಮಾನ ಹಾರಾಟ ಪ್ರಾರಂಭ ಮಾಡಬೇಕೆಂದು ಪ್ರಯಾಣಿಕರಿಂದಲೇ ಒತ್ತಾಸೆ ಕೇಳಿ ಬರುತ್ತಿದೆ.
Related Articles
Advertisement
ವಿಮಾನ ನಿಲ್ದಾಣ ಆರಂಭವಾಗಿ ನ.23ಕ್ಕೆ ಭರ್ತಿಯಾಗಿ ಎರಡು ವರ್ಷಗಳು ತುಂಬಲಿದೆ. ಅಂದಿನಿಂದಲೂ ಸಕ್ರಿಯವಾಗಿಯೇ ಕಾರ್ಯ ನಿರ್ವಹಿಸುತ್ತಿದೆ. ಅದರಲ್ಲೂ ವಿಮಾನ ನಿಲ್ದಾಣ ಆರಂಭವಾದ ಐದೇ ತಿಂಗಳಲ್ಲಿ ಕೊರೊನಾ ಕಾಟ ಶುರುವಾಗಿತ್ತು. ಆದರೆ, ಇದರ ನಡುವೆಯೂ ವಿಮಾನಯಾನ ಸೇವೆಯಲ್ಲಿ ಗಮನಾರ್ಹ ಸಾಧನೆ ಮಾಡಿದೆ.
ಇದನ್ನೂ ಓದಿ:ಸಕ್ರೆಬೈಲು : ಮರಿಯಾನೆಗೆ ‘ಪುನೀತ್’ ಎಂದು ನಾಮಕರಣ ಮಾಡುವ ಮೂಲಕ ಗೌರವ ಸಲ್ಲಿಸಿದ ಅರಣ್ಯ ಇಲಾಖೆ
ಕಳೆದ ಎರಡು ತಿಂಗಳಿಂದ ಕೊರೊನಾ ಸೋಂಕು ನಿಯಂತ್ರಣಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ಎಲ್ಲ ಚಟುವಟಿಕೆಗಳು ಪುನರಾಂಭಗೊಂಡಿವೆ. ವಿಮಾನಯಾನ ಬಳಕೆದಾರರ ಸಂಖ್ಯೆಯೂ ಹೆಚ್ಚಳವಾಗಿದೆ. 2020ರ ಏಪ್ರಿಲ್ ನಿಂದ ಸೆಪ್ಟೆಂಬರ್ ಆರು ತಿಂಗಳ ಅವಧಿಯಲ್ಲಿ 17,944 ಜನ ಪ್ರಯಾಣಿಸಿದ್ದರು. ಈಗ 2021ರ ಏಪ್ರಿಲ್‌ನಿಂದ ಸೆಪ್ಟೆಂಬರ್ ಆರು ತಿಂಗಳಲ್ಲಿ ಬರೋಬ್ಬರಿ 40,443 ಮಂದಿ ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಪ್ರಥಮ ಅರ್ಧ ವಾರ್ಷಿಕದಲ್ಲಿ ಶೇ.125ರಷ್ಟು ಪ್ರಯಾಣಿಕರ ಸಂಖ್ಯೆ ಏರಿಕೆಯಾಗಿರುವುದೇ ಲೋಹದ ಹಕ್ಕಿಗಳ ಹಾರಾಟಕ್ಕೆ ಬೇಡಿಕೆಗೆ ಹೆಚ್ಚಾಗಿರುವುದಕ್ಕೆ ನಿದರ್ಶನವಾಗಿದೆ.
ಶೇ.85ರಷ್ಟು ಸೀಟು ಭರ್ತಿ
ಕಲಬುರಗಿ ವಿಮಾನ ನಿಲ್ದಾಣಕ್ಕೆ ಆಗಮಿಸುವ ಮತ್ತು ಅಲ್ಲಿಂದ ನಿರ್ಗಮಿಸುವ ಎಲ್ಲ ವಿಮಾನಗಳು ಬಹುತೇಕ ಭರ್ತಿಯಾಗಿ ಹಾರಾಟ ನಡೆಸುತ್ತಿವೆ. ಕಲಬುರಗಿಯಿಂದ ಬೆಂಗಳೂರು, ದೆಹಲಿ ಹಾಗೂ ತಿರುಪತಿ ನಡುವೆ ಹಾರಾಟ ಮಾಡುತ್ತಿರುವ ವಿಮಾನಗಳಲ್ಲಿ ಶೇ.85ರಷ್ಟು ಸೀಟುಗಳು ತುಂಬಿರುತ್ತವೆ. 50 ಸೀಟುಗಳ ಸಾಮರ್ಥ್ಯದ ಎರಡು ವಿಮಾನಗಳು 72 ಸೀಟುಗಳು ಸಾಮರ್ಥ್ಯದ ಒಂದು ವಿಮಾನ ನಿತ್ಯವೂ ಸಂಚರಿಸುತ್ತಿವೆ. ಮೂರು ವಿಮಾನ ನಿಲ್ದಾಣಗಳ ಒಟ್ಟು ಸಾಮರ್ಥ್ಯ 172 ಸೀಟುಗಳು ಆಗಿದ್ದು, ಕೆಲವೊಮ್ಮೆ 166ಕ್ಕೂ ಸೀಟುಗಳು ಭರ್ತಿಯಾಗಿರುತ್ತದೆ. ಅಕ್ಟೋಬರ್ ತಿಂಗಳಲ್ಲಿ ಒಟ್ಟಾರೆ 7,998 ಜನ ಪ್ರಯಾಣಿಕರು ಲೋಹದ ಹಕ್ಕಿಗಳಲ್ಲಿ ಪ್ರಯಾಣಿಸಿದ್ದರು.
ಕಲಬುರಗಿ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಗಣನೀಯ ಹೆಚ್ಚಳವಾಗಿದೆ. ಅಲ್ಲದೇ, ಹೊಸ ಮಾರ್ಗಗಳಿಗೆ ವಿಮಾನ ಹಾರಾಟ ಆರಂಭಿಸಬೇಕೆಂದು ಪ್ರಯಾಣಿಕರಿಂದ ಬೇಡಿಕೆ ಅಧಿಕವಾಗಿ ಕೇಳಿ ಬರುತ್ತಿದೆ. ಆದ್ದರಿಂದ ಮುಂಬೈ, ಅಹ್ಮದಾಬಾದ್, ಗೋವಾಕ್ಕೆ ವಿಮಾನ ಹಾರಾಟ ಪ್ರಾರಂಭಿಸುವಂತೆ ಸ್ಟಾರ್ ಏರ್ ಮತ್ತು ಅಲಯನ್ಸ್ ಏರ್ ಸಂಸ್ಥೆಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಜತೆಗೆ ಇಂಡಿಗೋ ವಿಮಾನಯಾನ ಸಂಸ್ಥೆಗೂ ಪ್ರಸ್ತಾವ ಸಲ್ಲಿಸಲು ನಿರ್ಧರಿಸಲಾಗಿದೆ. -ಜ್ಞಾನೇಶ್ವರರಾವ್, ನಿರ್ದೇಶಕ, ಕಲಬುರಗಿ ವಿಮಾನ ನಿಲ್ದಾಣ
-ರಂಗಪ್ಪ ಗಧಾರ