ಹನೂರು (ಚಾಮರಾಜನಗರ): ಶಾಸಕರು, ಸಂಸದರು ಸೇರಿದಂತೆ ಜನಪ್ರತಿನಿಧಿಗಳ ವಿರುದ್ಧ ಅವಹೇಳನಕಾರಿ ಫ್ಲೆಕ್ಸ್ ಹಾಕಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಪ,ಪಂ ಸದಸ್ಯ ಗಿರೀಶ್ ಹನೂರು ಪೊಲೀಸರಿಗೆ ದೂರು ನೀಡಿದ್ದಾರೆ.
ಏನಿದು ಪ್ರಕರಣ?: ಹನೂರು ಪಟ್ಟಣದ ವಿದ್ಯುತ್ ಸರಬರಾಜು ಕಂಪನಿ ಕಚೇರಿ ಮುಂಭಾಗದ ಬೇವಿನ ಮರವೊಂದರಲ್ಲಿ ಈ ರಸ್ತೆಯಲ್ಲಿ ಎಂ.ಪಿ, ಎಂಎಲ್‍ಎ, ಜಿ.ಪಂ ಮತ್ತು ತಾ.ಪಂ ಸದಸ್ಯರನ್ನು ಹೂಳಲು ಗುಂಡಿಗಳನ್ನು ತೋಡಲಾಗಿದೆ, ಪ್ರಯಾಣಿಕರು ದಯವಿಟ್ಟು ಜಾಗ್ರತೆಯಿಂದ ವಾಹನ ಚಲಾಯಿಸಿರಿ, ನೊಂದ ಹನೂರು ಕ್ಷೇತ್ರದ ಮತದಾರರು ಎಂದು ಫ್ಲೆಕ್ಸ್ ಅಳವಡಿಸಲಾಗಿತ್ತು. ಬುಧವಾರ ಬೆಳಿಗ್ಗೆ ವಾಯುವಿಹಾರಕ್ಕೆ ತೆರಳುತ್ತಿದ್ದ ಪ.ಪಂ ಸದಸ್ಯರಾದ ಗಿರೀಶ್, ಹರೀಶ್‍ಕುಮಾರ್ ಮತ್ತು ಸಂಪತ್‍ಕುಮಾರ್ ಇದನ್ನು ಗಮನಿಸಿದ್ದಾರೆ.
ಈ ಸಂಬಂಧ ಹನೂರು ಪೊಲೀಸರಿಗೆ ದೂರು ನೀಡಿರುವ ಪ.ಪಂ ಸದಸ್ಯ ಗಿರೀಶ್ ಕಿಡಿಗೇಡಿಗಳು ಎಸಗಿರುವ ಈ ಕೃತ್ಯದಿಂದ ಕ್ಷೇತ್ರದ ಸಂಸದರು, ಶಾಸಕರು, ಜಿ.ಪಂ ಸದಸ್ಯರು, ತಾ.ಪಂ ಸದಸ್ಯರಿಗೆ ಅಪಮಾನ ಮಾಡಿದಂತಾಗಿದೆ. ಆದುದರಿಂದ ಕೂಡಲೇ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ಸಲ್ಲಿಸಲಾಗಿದೆ.
ಇದನ್ನೂ ಓದಿ:4 ಜಿಲ್ಲೆಗಳ ಸಿಎಂ ವೈಮಾನಿಕ ಸಮೀಕ್ಷೆ : ಹವಾಮಾನ ವೈಪರೀತ್ಯದಿಂದ ವಿಜಯಪುರ ಸಮೀಕ್ಷೆ ರದ್ದು
ಕಿಡಿಗೇಡಿಗಳ ಈ ಕೃತ್ಯವನ್ನು ಖಂಡಿಸಿ ಹನೂರು ಪಟ್ಟಣದಲ್ಲಿ ಗುರುವಾರ ಬೆಳಿಗ್ಗೆ 10 ಗಂಟೆಗೆ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಪಟ್ಟಣದ ಕಾಂಗ್ರೆಸ್ ಭವನದಿಂದ ಪೊಲೀಸ್ ಠಾಣೆಯವರೆಗೆ ಹನೂರು ಮತ್ತು ರಾಮಾಪುರ ಬ್ಲಾಕ್ ಕಾಂಗ್ರೆಸ್ ಸಮಿತಿವತಿಯಿಂದ ಪ್ರತಿಭಟನೆ ಹೊರಟು ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಮನವಿ ಸಲ್ಲಿಸಲು ತೀರ್ಮಾನಿಸಲಾಗಿದೆ.