Advertisement

ಫ್ಲೆಕ್ಸ್‌ -ಬ್ಯಾನರ್‌ನಿಂದ ಆದಾಯಕ್ಕೆ ಕೊಕ್ಕೆ! ಸಿಂಧನೂರು ನಗರದಲ್ಲಿ ಬೇಕಾ ಬಿಟ್ಟಿ ಪ್ರಚಾರ?

02:47 PM Jan 09, 2021 | Team Udayavani |

ಸಿಂಧನೂರು: ನಗರದ ಪ್ರಮುಖ ರಸ್ತೆ, ಸಾರ್ವಜನಿಕ ರಸ್ತೆಗಳಲ್ಲಿ ಯಾವುದೇ ಬ್ಯಾನರ್‌, ಫಲಕ ಅಳವಡಿಸಬೇಕಾದರೆ ನಗರಸಭೆ ಅನುಮತಿ ಕಡ್ಡಾಯ. ಆದರೆ, ನಿಯಮಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲವಾಗಿದ್ದು, ನಗರದಲ್ಲಿ ಬ್ಯಾನರ್‌, ಬಂಟಿಂಗ್ಸ್‌ ಹಾವಳಿಗೆ ಕಡಿವಾಣ ಇಲ್ಲದಾಗಿದೆ.

Advertisement

ಬ್ಯಾನರ್‌, ಫಲಕ ಅಳವಡಿಸುವಾಗ ಅದರ ಅಳತೆ ಮೇಲೆ ನಗರಸಭೆ ಶುಲ್ಕ ಪಾವತಿಸಬೇಕಿದ್ದರೂ ನಿಯಮ ಪಾಲನೆಯಾಗಿಲ್ಲ. ಕಳೆದ ಆರು ತಿಂಗಳಲ್ಲಿ ಆರು ಜನರಷ್ಟೇ ನಗರಸಭೆಗೆ ಶುಲ್ಕ ಪಾವತಿಸಿ ಅನುಮತಿ ಪಡೆದಿದ್ದಾರೆ. 15ಕ್ಕೂ ಹೆಚ್ಚು ಶುಲ್ಕ
ಪಾವತಿಸಿದೇ ಬರೀ ಅರ್ಜಿ ಸಲ್ಲಿಸಿ, ಸ್ವೀಕೃತಿ ಪತ್ರ ಹಿಡಿದೇ ಪಾಸಾಗಿದ್ದಾರೆ. ಅರ್ಜಿ ಕೊಟ್ಟು ಬ್ಯಾನರ್‌ ಹಾಕಿದ ಮೇಲೂ ನಗರಸಭೆಯವರು ಕನಿಷ್ಟ ಶುಲ್ಕ ಕೇಳುವ ಧೈರ್ಯ ತೋರಿಲ್ಲ. ಎಲ್ಲ ಪಕ್ಷಗಳ ರಾಜಕೀಯ ಲಾಬಿಗಳಿಗೆ ಸೊಪ್ಪು ಹಾಕುತ್ತಿರುವ
ಪರಿಣಾಮ ನಗರಸಭೆಗೆ ಬರಬೇಕಾದ ಆದಾಯಕ್ಕೆ ಕೊಕ್ಕೆ ಬಿದ್ದಿದೆ.

ಸ್ಥಿತಿಗತಿ ಏನು?: ಗಂಗಾವತಿ, ಕುಷ್ಟಗಿ, ರಾಯಚೂರು ರಸ್ತೆಯುದ್ದಕ್ಕೂ ಇತ್ತೀಚೆಗೆ ಕೆಲವು ಬೃಹತ್‌ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಬ್ಯಾನರ್‌ ಹಾಕಲಾಗಿತ್ತು. ಇದರಲ್ಲಿ ಯಾವುದೇ ಪಕ್ಷದವರು ಮುಖಂಡರು ಹಿಂದೆ ಬಿದ್ದಿಲ್ಲ. ಒಂದೇ ಒಂದು
ರಾಜಕೀಯ ನಾಯಕರ ಫೋಟೋ ಬಳಸಿ ಹಾಕಿದ ಬ್ಯಾನರ್‌ನಿಂದಾಗಿ ನಯಾಪೈಸೆ ಶುಲ್ಕವೂ ಪಾವತಿಸಿಲ್ಲ. ಖಾಸಗಿ ಆಸ್ಪತ್ರೆ ಉದ್ಘಾಟನೆಗೆ ಬಳಸಿದ ಬ್ಯಾನರ್‌ಗೆ 950 ರೂ., ಸೋಮಶೇಖರ ಎನ್ನುವವರ ಬ್ಯಾನರ್‌ ಗೆ 360 ರೂ, ಸಿಟಿ ಬ್ರಾಡ್‌ ಬ್ಯಾಂಡ್‌ನಿಂದ 497 ರೂ, ಕಿಶೋನ ಪ್ಯಾಶನ್‌ ವರ್ಡ್ಸ್‌ನಿಂದ 493 ರೂ. ಶುಲ್ಕ ಪಾವತಿಯಾಗಿದ್ದು, ಇವರು ಮಾತ್ರ ನಿಯಮ ಪಾಲಿಸಿದ್ದಾರೆ. ಉಳಿದಂತೆ ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದರೂ ಯಾವುದೇ ಹಣ ಸಂದಾಯವಾಗಿಲ್ಲ.

ಅರ್ಜಿ ಸಲ್ಲಿಸಿದ ಮೇಲೆ ಅವರ ಪರವಾಗಿ ಬ್ಯಾಟಿಂಗ್‌ ಬೀಸುವ ನಾಯಕರಿಂದಾಗಿ ನಗರಸಭೆ ಬೊಕ್ಕಸಕ್ಕೆ ಕನ್ನಾ ಬಿದ್ದಿದೆ. ಕಳೆದೊಂದು ವರ್ಷದಲ್ಲಿ 15 ಸಾವಿರ ರೂ. ತೆರಿಗೆ ಸಂಗ್ರಹವಾಗಿಲ್ಲ. ದಿನವೊಂದಕ್ಕೆ ನೂರಾರು ಬ್ಯಾನರ್‌ಗಳು ತಲೆ ಎತ್ತಿದ ನಿದರ್ಶನಕ್ಕೆ ಮಾತ್ರ ನಗರಸಭೆ ಆಡಳಿತ ಸಾಕ್ಷಿಯಾಗಿದೆ.

ವಿವಾದ ಎದ್ದಾಗ ನೋಟಿಸ್‌: ಎಲ್ಲ ಕಾರ್ಯಕ್ರಮಗಳು ಮುಗಿದ ನಂತರ ನಗರಸಭೆ ಕಾರ್ಯಾಲಯ ಜ.2ರಂದು ನೋಟಿಸ್‌ ಸಿದ್ಧಪಡಿಸಿದೆ. ಯಾರ ಮೇಲೂ ಜಾರಿಗೊಳಿಸಿಲ್ಲ. ಅರಣ್ಯ ಪರಿಸರ ಮತ್ತು ಜೀವಶಾಸ್ತ್ರ ಇಲಾಖೆ, ರಾಜ್ಯ ಸರ್ಕಾರದ ಅಧಿಸೂಚನೆ
ಪ್ರಕಾರ ನಿಷಿದ್ಧವಾದ ಪ್ಲಾಸ್ಟಿಕ್‌ ಮಿಶ್ರಿತ ಬ್ಯಾನರ್‌, ಫ್ಲೆಕ್ಸ್‌ ತೆರವುಗೊಳಿಸುವಂತೆ ತಿಳಿಸಲಾಗಿದೆ. ಯಾರಿಗೆ ಜಾರಿಗೊಳಿಸಲಾಗಿದೆ ಎನ್ನುವುದು ಮಾತ್ರ ಆದೇಶದಲ್ಲಿ ಸ್ಪಷ್ಟವಿಲ್ಲ.

Advertisement

ಜ.8ರಂದು ಕೂಡ ನಗರದ ಮಹಾತ್ಮ ಗಾಂಧಿ ವೃತ್ತ, ಬಸವೇಶ್ವರ ಸರ್ಕಲ್‌, ಕಿತ್ತೂರು ಚನ್ನಮ್ಮ ಸರ್ಕಲ್‌ ಸೇರಿ ಪ್ರಮುಖ ಹೆದ್ದಾರಿಗಳಲ್ಲಿ ಬ್ಯಾನರ್‌ ಗಳಿದ್ದವು. ಅವುಗಳಲ್ಲಿ ಎಲ್ಲರ ಹೆಸರುಗಳಿದ್ದವು. ಆದರೆ, ನಿಖರವಾಗಿ ಗುರುತಿಸಿ ಆದೇಶ ಹೊರಡಿಸುವ
ಕೆಲಸ ನಗರಸಭೆ ಮಾಡಿಲ್ಲ. ವಾರ್ಷಿಕವಾಗಿ ಲಕ್ಷಾಂತರ ರೂ. ಆದಾಯ ಜಾಹೀರಾತು ಫಲಕಗಳ ಟೆಂಡರ್‌ನ ಮೂಲಕ ಗಳಿಸುವ ಅವಕಾಶವಿದ್ದರೂ ಕಣ್ಮುಚ್ಚಿ ಕುಳಿತಿರುವ ಆಡಳಿತ ಮಂಡಳಿ, ಬಿಟ್ಟಿ ಪ್ರಚಾರಕ್ಕೆ ನಗರದಲ್ಲಿ ಮುಕ್ತ ಅವಕಾಶ ಕಲ್ಪಿಸಿದೆ.

– ಯಮನಪ್ಪ ಪವಾರ

Advertisement

Udayavani is now on Telegram. Click here to join our channel and stay updated with the latest news.

Next