ಅವಲಕ್ಕಿ ಪವಲಕ್ಕೀ… ಹೌದರಿ. ನಾವೆಲ್ಲಾ ಸಣ್ಣವರಿದ್ದಾಗಿಂದ ಈ ಅವಲಕ್ಕಿ ತಿಂದನ ದೊಡ್ಡವ್ರಾಗೇವಿ. ಮಡೀ ಮಡೀ ಅಂತ ಅಜ್ಜಿ, ಅವ್ವಾ, ಅಪ್ಪಾ ಎಲ್ಲಾರೂ ಹಾರಾಡವ್ರು. ದಿನಾ ಒಂದೊಂದು ದೇವರ ಸ್ಪೆಶಲ್ ದಿನಾ… ಅಡಿಗಿ ಮಡೀಲೇ ಆಗಬೇಕಂದ್ರ ಒಲೀ ಮುಸರಿ ಮಾಡಂಗಿಲ್ಲಾ. ಅಂದಮ್ಯಾಲ ಈ ಅವಲಕ್ಕಿಗಿಂತಾ ಪರಮೋಚ್ಚ ಖಾದ್ಯ ಯಾವದದ ಹೇಳರಿ?
ಮುಂಜಾನೆ ಎದ್ದಕೂಡ್ಲೆ ಛಾ, ಕಷಾಯಾ ಅಂತೇನ ಇರತಿದ್ದಿಲ್ಲಾ.. ಕೋಲ್ಗೇಟ್ ಟೂತ್‌ಪೇಸ್ಟ್‌ನಿಂದ ! ಹ್ಹಾ ಹ್ಹಾ! ಎಲ್ಲೀದರೀ? ಮಂಕೀ ಛಾಪ್ ಕಪ್ಪು ಹಲ್ಲು ಪುಡಿಂದತೋರಬೆರಳ ಹಾಕಿ ಗಸಾಗಸಾ ಹಲ್ಲ ತಿಕ್ಕೊಂಡು ಕೈಕಾಲು ಮಾರೀ ತೊಳಕೊಂಡು, ಬಾಗಲಾ ಕಸಾ, ರಂಗೋಲಿ ಹಾಕಿ ಬರೂದರಾಗ ಅವ್ವಾ ಒಂದ ದೊಡ್ಡ ಬೋಗೋಣೀ ತುಂಬ ಅವಲಕ್ಕಿ ತೊಗೊಂಡು ಅದಕ್ಕ ಇಂಗಿನ ಒಗ್ಗರಣೀ ಹಾಕಿ, ಮೆಂತೇದ ಹಿಟ್ಟು, ಚಟ್ನಿ ಪುಡೀ, ಉಪ್ಪು, ಹಾಕಿ ಕಲಸಾಕಿ. ಮ್ಯಾಲ ಈಡಾಗಿ ಹಸೀ ಖೊಬ್ರಿ ಹಾಕಿ, ಸಣ್ಣ ಸಣ್ಣ ತಟ್ಟಿಯೊಳಗ ಹಾಕಿ ಕೊಡಾಕಿ…
ಇವು ದಿನದ ಅವಲಕ್ಕಿ! ಸಂಜೀಕೆ ಅಜ್ಜೀ ಫರಾಳಾ… ಅದನ ಕಾಯಕೋತ ಕೂಡಾವ್ರು ಅಕೀ ಸೂತ್ಲೂ ನಾವೆಲ್ಲಾ ಮಮ್ಮಕ್ಳೂ. ಅವ್ವಾ ಬೈಯಾಕಿ… ಇದೇ ಈಗಿನ್ನೂ ಹೊಟ್ಟೀ ತುಂಬ ಊಟಾ ಮಾಡೀರಲಾ… ಸಾಕಾಗಿಲ್ಲೇನ? ಖೋಡಿಗೋಳು… ಪಾಪಾ, ಅವರ ಒಂದ ಮುಕ್ಕ ಅವಲಕ್ಕೀಗೂ ಗಂಟಲಗಾಣ ಆಗತಾವ! ಅಂತ. ಅಜ್ಜಿ ಮಾತ್ರ ನಾವೇನರೆ ಹೊರಗ ಆಟಕ್ಕ ಬಿದ್ದಿದ್ರೂ ಕರಿಯಾಕಿ… ಆ ಅವಲಕ್ಕಿ ರುಚೀನ ಬ್ಯಾರೆ. ಒಂದ ಮುಷ್ಟಿ ಅಜ್ಜಿಗೆ… ಇನ್ನೆರಡ ಮುಷ್ಟಿ ನಮಗ.
ರಗಡಷ್ಟು ಸೇಂಗಾದ ಹಸೀ ಎಣ್ಣೀ, ಮೆಂತ್ಯದ ಹಿಟ್ಟು, ಚಟ್ನಿ ಪುಡಿ ಹಾಕಿ ಮಿದ್ದಿ ಮಿದ್ದಿ ಕಲಸಾಕಿ. ಮ್ಯಾಲ ಹಸೀ ಖೊಬ್ರಿ… ಸವತೀಕಾಯ ಕೊಚ್ಚಿದ್ದೂ… ಒಂದಿಷ್ಟು ಯಾವದರೆ ಹಸಿ ಚಟ್ನಿ… ಯಾವದೂ ಇಲ್ಲಾಂದ್ರ ಮಾವಿನಕಾಯಿ ಚಟ್ನಿ… ಆಹಾಹಾ… ಏನ ರುಚೀ! ಇನ್ನ ನಾಳೆ ಹಬ್ಬಂತಿರಲಿಕ್ಕೇ ಹಚ್ಚೋ ಅವಲಕ್ಕಿ ಗಮ್ಮತ್ತ ಬ್ಯಾರೆ.
ಮಧ್ಯಾಹ್ನ ಬಿಸಲಿಗೆ ಅಪ್ಪನ ಒಗದ್ದ ಬಿಳೆ ಧೋತರಾ ಹಾಸಿ, ಅದರ ಮ್ಯಾಲ ಅವಲಕ್ಕಿ ಹರವಿರತಿದ್ರು. ಮಧ್ಯಾಹ್ನ ನಾಲ್ಕ ಗಂಟೇಕ್ಕ ಒಳಗ ತೊಗೊಂಡ ಬಂದು, ದೊಡ್ಡ ಖಬ್ಬಣ ಬುಟ್ಟ್ಯಾಗ ಘಾಣದ ಎಣ್ಣೀ ಹಾಕಿ ದಣದಣ ಉರೀ ಮ್ಯಾಲ ಒಗ್ಗರಣೀ… ಸಾಸಿವಿ ಜೀರಿಗಿ ಚಟಪಟಾ ಅಂದಮ್ಯಾಲ ಒಂದ ಬಟ್ಟಲಾ ಬಿಳೆ ಎಳ್ಳು ಹಾಕಿ ಚಟಪಟಾ ಅನಸಿ ಹುರದು ಸಿಪ್ಪೀ ತಗದ ಸೇಂಗಾ ಹಾಕಿ ಆಮ್ಯಾಲ ಪುಠಾಣಿ ಹಾಕೀ, ಮೆಂತ್ಯೆ ಮೆಣಸಿನಕಾಯಿ ಕರದು, ಒಂದ ಬಟ್ಟಲದಷ್ಟು ಒಣಾಖೊಬ್ರಿವು ತೆಳ್ಳಗ ಹೆಚ್ಚಿದ ಚೂರು ಘಮ್ಮನಸಿ, ಬುಟ್ಟಿ ಕೆಳಗ ಇಳಿಸಿಟ್ಟು, ಮೆಂತ್ಯ ಹಿಟ್ಟು, ಕೆಂಪ ಖಾರದ ಪುಡೀ, ಉಪ್ಪು, ಸ್ವಲ್ಪ ಸಕ್ರೀ ಹಾಕಿ ಕೈಯಾಡೀಸಿ ಅವಲಕ್ಕಿ
ಹಾಕಿ ಹಚ್ಚಿಡವ್ರು… ಆಹಾಹಾ! ಸಾಲಿಂದ ಮನಿ ಒಳಗ ಕಾಲಿಡತಿದ್ಹಂಗನ ಅವ್ವಾ, ಅವಲಕ್ಕಿ ನಂಗ.. ಅಂತನ ಬರವ್ರು… ಹಾಂ.. ಮರತ್ತಿದ್ದೆ, ಅಜ್ಜಿ ಉಪ್ಪಿಲ್ದ ಉಪಾಸಾ ಮಾಡೂಮುಂದ ಅವಲಕ್ಕೀಗೆ ಬೆಲ್ಲದ ಹೆರಕಲಾ, ಹೆತ್ತುಪ್ಪಾ, ಹಸೀ ಖೊಬ್ರಿ ಹೆರಕಲಾ ಹಾಕಿದ ಅವಲಕ್ಕಿ ರೆಡಿ ಆಗತಿದ್ವು ಅವೂ ಭಾರೀ ರುಚೀ… ಒಟ್ಟಿನ ಮ್ಯಾಲ, ನಾ ನೆನಪಿಸಿಕೊಳ್ಳೋದು, ಪಂಪನ್ಹಂಗ…. ಆರಂಕುಸಮಿಟ್ಟೊಡಂ ನೆನೆವುದೆನ್ನ ಮನಂ ಈ ತರಾತರದ ಅವಲಕ್ಕಿಯಂ!
– ಮಾಲತಿ ಮುದಕವಿ