Advertisement

ಚಿತ್ರ ವಿಮರ್ಶೆ: ಫ್ಲಾಟ್‌ ನಂ 9 ನಲ್ಲಿ ಮರ್ಡರ್‌ ಮಿಸ್ಟರಿ…

04:15 PM Dec 04, 2022 | Team Udayavani |

ಅದೊಂದು ಬೃಹದಾಕಾರದಲ್ಲಿರುವ ಅಪಾರ್ಟ್‌ಮೆಂಟ್‌. ಆ ಅಪಾರ್ಟ್‌ ಮೆಂಟ್‌ನ “ಫ್ಲಾಟ್‌ ನಂ 9’ಕ್ಕೆ ತಡರಾತ್ರಿ ತನ್ನ ಫ್ರೆಂಡ್‌ ಭೇಟಿ ಮಾಡಲು ಖುಷಿಯಿಂದ ಹೋಗುವ ಹುಡುಗನೊಬ್ಬ, ಕೆಲ ಹೊತ್ತಿನ ಬಳಿಕ ಗಾಬರಿಯಾಗಿ ಅಲ್ಲಿಂದ ಹೊರಕ್ಕೆ ಓಡುತ್ತಾನೆ. ಹೀಗಿ ಭಯದಿಂದಲೇ ಹೋಗಿ ಮನೆ ಸೇರಿಕೊಳ್ಳುವ ಹುಡುಗ, ಬೆಳಿಗ್ಗೆ ಆಗುವುದರೊಳಗೆ ತನ್ನ ಮನೆಯೊಳಗೇ ಹೆಣವಾಗಿ ಮಲಗಿರುತ್ತಾನೆ!  ಈ ಕೊಲೆಯ ಹಿಂದಿನ ರಹಸ್ಯವನ್ನು ಭೇದಿಸಲು ಬರುವ ದಿಟ್ಟ ಪೊಲೀಸ್‌ ಅಧಿಕಾರಿಗೆ, ಕೊಲೆಯ ಹಿಂದಿನ ಒಂದೊಂದೆ ಆಯಾಮಗಳು ತೆರೆದುಕೊಳ್ಳುತ್ತಾ ಹೋಗುತ್ತದೆ. ಒಂದು ಕೊಲೆಯ ಹಿಂದೆ ಮತ್ತೂಂದು ಕೊಲೆ. ಅದರ ಹಿಂದೆ ಮಗದೊಂದು ಕೊಲೆ. ಹೀಗೆ ಪ್ರತಿಯೊಂದು ಕೊಲೆಗೂ ಒಂದೇ ನಂಟಿರುವುದು ಗೊತ್ತಾಗುವ ವೇಳೆಗೆ ಸಿನಿಮಾ ಮಧ್ಯಂತರಕ್ಕೆ ಬಂದಿರುತ್ತದೆ. ಇದು ಈ ವಾರ ತೆರೆಗೆ ಬಂದಿರುವ “ಪ್ಲಾಟ್‌ ನಂ. 9′ ಸಿನಿಮಾದ ಕಥೆಯ ಎಳೆ. ಆ ಕೊಲೆಗಳ ನಂಟು ಏನು? ಅದರ ಹಿಂದಿನ ಕಾರಣಗಳೇನು ಎಂಬುದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ, “ಫ್ಲಾಟ್‌ ನಂ 9′ ಒಮ್ಮೆ ನೋಡಿ ಬರಬಹುದು.

Advertisement

“ಫ್ಲಾಟ್‌ ನಂ 9′ ಒಂದು ಸಸ್ಪೆನ್ಸ್‌ ಕಂ ಕ್ರೈಂ-ಥ್ರಿಲ್ಲರ್‌ ಶೈಲಿಯ ಸಿನಿಮಾ. ಮೂರು ನಿಗೂಢ ಕೊಲೆ ಅದರ ಹಿಂದಿನ ಕಾರಣ ಮತ್ತು ಆ ಕೊಲೆಗಳ ರಹಸ್ಯವನ್ನು ಭೇದಿಸುವುದರ ಸುತ್ತ ಇಡೀ ಸಿನಿಮಾ ಸಾಗುತ್ತದೆ. ಸಾಮಾನ್ಯವಾಗಿ ಸಸ್ಪೆನ್ಸ್‌ ಕಂ ಕ್ರೈಂ-ಥ್ರಿಲ್ಲರ್‌ ಶೈಲಿಯ ಸಿನಿಮಾಗಳಲ್ಲಿ ಇರುವಂತೆ ಒಂದಷ್ಟು ಕೌತುಕ, ಹುಡುಕಾಟ ಈ ಸಿನಿಮಾದಲ್ಲಿಯೂ ಇದೆ.

ಅಲ್ಲಲ್ಲಿ ಸಿಗುವ ಟ್ವಿಸ್ಟ್‌ಗಳು ನೋಡುಗರಿಗೆ ಥ್ರಿಲ್ಲಿಂಗ್‌ ಅನುಭವ ನೀಡುವಂತಿದೆ. ಸಿನಿಮಾದ ಕಥೆಯ ಜೊತೆಗೆ ಚಿತ್ರಕಥೆಯ ಓಟ ಇನ್ನಷ್ಟು ಹೆಚ್ಚಾಗಿದ್ದರೆ, ನೋಡುಗರಿಗೆ ಈ ಥ್ರಿಲ್ಲಿಂಗ್‌ ಅನುಭವ ಕೂಡ ಇನ್ನಷ್ಟು ಹೆಚ್ಚಾಗಿರುವ ಸಾಧ್ಯತೆಗಳಿದ್ದವು.

ಇನ್ನು ಸ್ಕಂದ ಅಶೋಕ್‌, ಚಂದು ಗೌಡ, ತೇಜಸ್ವಿನಿ ಶರ್ಮಾ, ಗಣೇಶ್‌ ರಾವ್‌ ಕೇಸರ್ಕರ್‌ ಮತ್ತಿತರರು ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಸಿನಿಮಾದ ಹಿನ್ನೆಲೆ ಸಂಗೀತ ಮತ್ತು ಛಾಯಾಗ್ರಹಣ ಸಿನಿಮಾದ ದೃಶ್ಯಗಳನ್ನು ಪರಿಣಾಮಕಾರಿಯಾಗಿಸಿದೆ. ಸಸ್ಪೆನ್ಸ್‌ ಕಂ ಕ್ರೈಂ-ಥ್ರಿಲ್ಲರ್‌ ಶೈಲಿಯ ಸಿನಿಮಾಗಳನ್ನು ಇಷ್ಟಪಡುವವರು “ಫ್ಲಾಟ್‌ ನಂ 9’ರಲ್ಲಿ ಒಂದಷ್ಟು ಮನರಂಜನೆ ನಿರೀಕ್ಷಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next