ಅಫ್ಘಾನಿಸ್ತಾನ:ಧಾರಾಕಾರ ಮಳೆ ಹಾಗೂ ಪ್ರವಾಹಕ್ಕೆ ತತ್ತರಿಸಿ ಹೋಗಿರುವ ಅಫ್ಘಾನಿಸ್ತಾನ, ಘಟನೆಯಲ್ಲಿ ಸುಮಾರು 200ಕ್ಕೂ ಅಧಿಕ ಜನರು ಸಾವನ್ನಪ್ಪಿರುವುದಾಗಿ ವಿಶ್ವಸಂಸ್ಥೆ ಶನಿವಾರ (ಮೇ 11) ತಿಳಿಸಿದೆ.
ಇದನ್ನೂ ಓದಿ:PAK ಅಣುಬಾಂಬ್ ಹೆಸರು ಹೇಳಿ ಯಾಕೆ ಭಯ ಪಡಿಸುತ್ತೀರಿ: ಕಾಂಗ್ರೆಸ್ ಗೆ ಪ್ರಧಾನಿ ತಿರುಗೇಟು
ಶುಕ್ರವಾರ ರಾತ್ರಿ ಆರಂಭವಾದ ಮಳೆಗೆ ಪ್ರವಾಹ ನುಗ್ಗಿದ ಪರಿಣಾಮ ಮಹಿಳೆಯರು, ಮಕ್ಕಳು ಸೇರಿದಂತೆ ನೂರಾರು ಮಂದಿ ಕೊನೆಯುಸಿರೆಳೆದಿದ್ದಾರೆ. ಹವಾಮಾನ ವೈಪರೀತ್ಯದಿಂದಾಗಿ ಅಫ್ಘಾನಿಸ್ತಾನದಲ್ಲಿ ಭಾರೀ ಮಳೆಯಾಗಿರುವುದಾಗಿ ವರದಿ ವಿವರಿಸಿದೆ.
ಪ್ರವಾಹದಿಂದ ಸಾವನ್ನಪ್ಪಿರುವವರ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇದ್ದಿರುವುದಾಗಿ ವಿಪತ್ತು ನಿರ್ವಹಣಾ ಮಂಡಳಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಅವಶೇಷಗಳಡಿ ಸಿಲುಕಿರುವವರನ್ನು ರಕ್ಷಿಸಲು ಶೋಧ ಕಾರ್ಯ ನಡೆಯುತ್ತಿರುವುದಾಗಿ ವರದಿ ತಿಳಿಸಿದೆ.
ಮಳೆ, ಪ್ರವಾಹದಿಂದ ನೂರಾರು ಜನರು ಮನೆ ಕಳೆದುಕೊಂಡಿದ್ದು, ಅವರಿಗಾಗಿ ತಾತ್ಕಾಲಿಕ ಟೆಂಟ್ಸ್, ಬ್ಲ್ಯಾಂಕೆಟ್, ಆಹಾರ ಒದಗಿಸಲಾಗಿದೆ. ಧಾರಾಕಾರ ಮಳೆ, ಪ್ರವಾಹದಿಂದ ಜನಜೀವನ ಅಸ್ತವ್ಯಸ್ತವಾಗಿದ್ದು, ಪ್ರವಾಹದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪ್ರವಾಹದಿಂದಾಗಿ ಹಲವಾರು ಪ್ರದೇಶಗಳಲ್ಲಿ ಭಾರೀ ಆರ್ಥಿಕ ನಷ್ಟಕ್ಕೆ ಕಾರಣವಾಗಿದೆ ಎಂದು ವಿಪತ್ತು ನಿರ್ವಹಣಾ ಮಂಡಳಿಯ ಪ್ರಾಂತೀಯ ನಿರ್ದೇಶಕ ಮೊಹಮ್ಮದ್ ಅಕ್ರಮ್ ಅಕ್ಬರಿ ತಿಳಿಸಿರುವುದಾಗಿ ವರದಿಯಾಗಿದೆ.