Advertisement

ಭಾರತಕ್ಕೆ ಎಚ್ಚರಿಕೆ ಗಂಟೆ; ಕರಗುತ್ತಿರುವ ನೀರ್ಗಲ್ಲುಗಳಿಂದ ಅಪಾಯ ಖಚಿತ

08:56 PM Aug 30, 2022 | Team Udayavani |

ನವದೆಹಲಿ/ಇಸ್ಲಾಮಾಬಾದ್‌: ಪಾಕಿಸ್ತಾನದಲ್ಲಿ ಹಿಂದೆಂದೂ ಕಂಡರಿಯದಂಥ ಪ್ರವಾಹವು ಸಾವಿರಕ್ಕೂ ಹೆಚ್ಚು ಮಂದಿಯನ್ನು ಬಲಿಪಡೆದಿರುವಂತೆಯೇ ಭಾರತಕ್ಕೂ ಇದು ಎಚ್ಚರಿಕೆಯ ಕರೆಗಂಟೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ!

Advertisement

ಪ್ರಸಕ್ತ ವರ್ಷದ ಮೇ ತಿಂಗಳ ಅವಧಿಯಲ್ಲಿ ಭಾರತ ಮತ್ತು ಪಾಕ್‌ ಎರಡೂ ದೇಶಗಳಲ್ಲೂ ಬಿಸಿಳಿನ ಝಳ ತೀವ್ರವಾಗಿತ್ತು. ಬಿಸಿಗಾಳಿಯ ಪರಿಣಾಮವೆಂಬಂತೆ, ನೀರ್ಗಲ್ಲುಗಳು ಹಿಂದೆಂದಿಗಿಂತಲೂ ವೇಗವಾಗಿ ಕರಗತೊಡಗಿವೆ. ಪಾಕಿಸ್ತಾನದಲ್ಲಿ “ಶತಮಾನದ ರಾಕ್ಷಸ ಮಳೆ’ ಹಾಗೂ ದಿಢೀರ್‌ ಪ್ರವಾಹ ಉಂಟಾಗಲು ಇದೇ ಕಾರಣ ಎನ್ನುತ್ತಾರೆ ತಜ್ಞರು.

ಪಾಕ್‌ನಲ್ಲಿ 7,253 ನೀರ್ಗಲ್ಲುಗಳಿದ್ದರೆ, ಭಾರತದಲ್ಲಿ ಅಂದಾಜು 9,575 ನೀರ್ಗಲ್ಲುಗಳಿವೆ. ಹೀಗಾಗಿ, ಹವಾಮಾನ ವೈಪರೀತ್ಯದ ಎಫೆಕ್ಟ್ ಎಂಬಂತೆ, ಭಾರತದಲ್ಲೂ ಮುಂಬರುವ ದಿನಗಳು, ವರ್ಷಗಳಲ್ಲಿ ವಿಪರೀತ ಮಳೆ, ದಿಢೀರ್‌ ಪ್ರವಾಹ, ಸಾವು-ನೋವುಗಳು ಹೆಚ್ಚಾಗುವ ಅಪಾಯ ಇದ್ದೇ ಇದೆ ಎಂದು ಎಚ್ಚರಿಸಿದ್ದಾರೆ ತಜ್ಞರು. ಅನಿರೀಕ್ಷಿತ ಪ್ರವಾಹವು ಈಗಾಗಲೇ ಪಾಕಿಸ್ತಾನವನ್ನು ನಲುಗಿಸಿದೆ. ಉತ್ತರದಿಂದ ದಕ್ಷಿಣದವರೆಗೂ ಜನ ಅತಂತ್ರರಾಗಿದ್ದು, ಎಲ್ಲ ನದಿಗಳೂ ಅಪಾಯದ ಮಟ್ಟ ಮೀರಿ ಹರಿಯಲಾರಂಭಿಸಿವೆ.

ಕಳೆದ ವರ್ಷ ಉತ್ತರಾಖಂಡದ ಚಮೋಲಿಯಲ್ಲಿ ಉಂಟಾದ ದಿಢೀರ್‌ ಪ್ರವಾಹವು 200ಕ್ಕೂ ಹೆಚ್ಚು ಮಂದಿಯನ್ನು ಬಲಿಪಡೆದುಕೊಂಡಿತ್ತು. ಇದು ಕೂಡ ಉಂಟಾಗಿದ್ದು ನೀರ್ಗಲ್ಲುಗಳು ಕರಗಿದ್ದರಿಂದ. ಹೀಗಾಗಿ, ಇಂತಹ ದುರಂತಗಳು ಮುಂದೆ ಹೆಚ್ಚಿನ ಸಂಖ್ಯೆಯಲ್ಲಿ ಮರುಕಳಿಸಬಹುದು ಎಂಬ ಎಚ್ಚರಿಕೆಯನ್ನೂ ತಜ್ಞರು ನೀಡಿದ್ದಾರೆ.
ಇದೇ ವೇಳೆ, ನೀರ್ಗಲ್ಲುಗಳ ಕರಗುವಿಕೆಯು ಪಾಕಿಸ್ತಾನದಷ್ಟು ಅಪಾಯವನ್ನು ಭಾರತಕ್ಕೆ ತಂದೊಡ್ಡಲಿಕ್ಕಿಲ್ಲ ಎಂದು ದೈವೇಚ ಸೆಂಟರ್‌ ಫಾರ್‌ ಕ್ಲೈಮೇಟ್‌ ಚೇಂಜ್‌ನ ನೀರ್ಗಲ್ಲು ತಜ್ಞ ಅನಿಲ್‌ ಕುಲಕರ್ಣಿ. ಸಿಂಧೂ ಜಲಾನಯನ ಪ್ರದೇಶದಲ್ಲಿ ನೀರ್ಗಲ್ಲುಗಳು ತುಂಬಿರುವ ನೀರು 2103 ಕ್ಯೂಬಿಕ್‌ ಕಿಲೋಮೀಟರ್‌ನಷ್ಟಿದೆ. ಈ ಪೈಕಿ ಶೇ.95ರಷ್ಟು ಸಂಗ್ರಹವಾಗಿರುವುದು ಪಶ್ಚಿಮ ಜಲಾನಯನ ಪ್ರದೇಶದಲ್ಲಿ. ಇದು ಪಾಕ್‌ ವ್ಯಾಪ್ತಿಗೆ ಬರುವ ಕಾರಣ ಪ್ರವಾಹ ಭೀತಿ ಭಾರತಕ್ಕಿಂತಲೂ ಪಾಕಿಸ್ತಾನಕ್ಕೇ ಹೆಚ್ಚು ಎನ್ನುವುದು ಕುಲಕರ್ಣಿ ಅವರ ವಾದ.

ಗ್ರೀನ್‌ಲ್ಯಾಂಡ್ ಆತಂಕ:
ಇದೇ ವೇಳೆ, ಗ್ರೀನ್‌ಲ್ಯಾಂಡ್ ಐಸ್‌ಶೀಟ್‌ ಎಂದು ಕರೆಸಿಕೊಳ್ಳುವ ಝೋಂಬಿ ಐಸ್‌ ಕೂಡ ನಿಧಾನವಾಗಿ ಕರಗಲಾರಂಭಿಸಿದೆ. ಇದು ಜಾಗತಿಕ ಸಮುದ್ರ ಮಟ್ಟವನ್ನು ಕನಿಷ್ಠ 27 ಸೆಂಟಿ ಮೀಟರ್‌ನಷ್ಟು ಅಥವಾ 10.6 ಇಂಚುಗಳಷ್ಟು ಹೆಚ್ಚಿಸಲಿದೆ ಎಂದು ಜಿಯಾಲಾಜಿಕಲ್‌ ಸರ್ವೇ ಆಫ್ ಡೆನ್ಮಾರ್ಕ್‌ನ ಸಂಶೋಧಕರು ಕಂಡುಕೊಂಡಿದ್ದಾರೆ. ಒಂದು ವೇಳೆ ತತ್‌ಕ್ಷಣವೇ ಇಡೀ ಜಗತ್ತು ಪಳೆಯುಳಿಕೆ ಇಂಧನದ ಸುಡುವಿಕೆಯನ್ನು ಸ್ಥಗಿತಗೊಳಿಸಿದರೂ ಗ್ರೀನ್‌ಲ್ಯಾಂಡ್ ಐಸ್‌ ಶೀಟ್‌ 110 ಕ್ವಾಡ್ರಿಲಿಯನ್‌ ಟನ್‌ಗಳಷ್ಟು ಮಂಜುಗಡ್ಡೆ ಕಳೆದುಕೊಳ್ಳಲಿದ್ದು, ಸಮುದ್ರ ಮಟ್ಟವು 27 ಸೆ.ಮೀ.ನಷ್ಟು ಏರಿಕೆಯಾಗಲಿದೆ ಎಂದೂ ಅವರು ಹೇಳಿದ್ದಾರೆ.

Advertisement

ಪಾಕ್‌ಗೆ ಮತ್ತಷ್ಟು ಸಂಕಷ್ಟ
ಪಾಕಿಸ್ತಾನದಲ್ಲಿ ಬುಧವಾರ ಪ್ರವಾಹ ಪರಿಸ್ಥಿತಿ ಮತ್ತಷ್ಟು ಹೆಚ್ಚಲಿದೆ ಎಂದು ಅಲ್ಲಿನ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಈಗಾಗಲೇ 1,200ರಷ್ಟು ಮಂದಿ ಮೃತಪಟ್ಟಿದ್ದು, 33 ದಶಲಕ್ಷಕ್ಕೂ ಹೆಚ್ಚು ಜನರು ನಿರ್ವಸಿತರಾಗಿದ್ದಾರೆ. ಆಹಾರ ವಸ್ತುಗಳ ದರಗಳು ಗಗನಕ್ಕೇರಿವೆ. ಈಗ ಮತ್ತೆ ಪ್ರವಾಹ ಎಚ್ಚರಿಕೆ ನೀಡಿರುವುದು ಜನರನ್ನು ಆತಂಕಕ್ಕೆ ನೂಕಿದೆ. ಈ ನಡುವೆ, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೂ ಪಾಕ್‌ ಪ್ರವಾಹದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಆದಷ್ಟು ಬೇಗ ಅಲ್ಲಿನ ಪರಿಸ್ಥಿತಿ ಸಹಜತೆಗೆ ಮರಳಲಿ ಎಂದು ಆಶಿಸಿದ್ದಾರೆ.

ಕೇರಳದಲ್ಲಿ ಧಾರಾಕಾರ ಮಳೆ
ಮಂಗಳವಾರವೂ ಕೇರಳದಲ್ಲಿ ಧಾರಾಕಾರ ಮಳೆ ಮುಂದುವರಿದಿದೆ. ಇನ್ನೂ 2 ದಿನಗಳ ಕಾಲ ಇದೇ ಪರಿಸ್ಥಿತಿ ಮುಂದುವರಿಯಲಿದ್ದು, ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಕೊಚ್ಚಿ, ಅಳಪ್ಪುಳ, ಪಟ್ಟಣಂತಿಟ್ಟ, ಎರ್ನಾಕುಳಂ, ಕೊಟ್ಟಾಯಂಗಳಲ್ಲಿ ಹಲವು ಗ್ರಾಮಗಳು ಜಲಾವೃತಗೊಂಡಿವೆ. ಭಾರೀ ಮಳೆಯಿಂದಾಗಿ ಓಣಂ ಹಬ್ಬದ ಸಂಭ್ರಮವೂ ಗೌಣವಾಗಿದೆ.

ಪಾಕಿಸ್ತಾನದಲ್ಲಿರುವ ನೀರ್ಗಲ್ಲುಗಳು- 7,253
ಭಾರತದಲ್ಲಿರುವ ಅಂದಾಜು ನೀರ್ಗಲ್ಲುಗಳು- 9,575

Advertisement

Udayavani is now on Telegram. Click here to join our channel and stay updated with the latest news.

Next