Advertisement

195.28 ಕೋ.ರೂ. ವೆಚ್ಚದಲ್ಲಿ ಅಣೆಕಟ್ಟು : ಉಡುಪಿಯಲ್ಲಿ ಧ್ವಜಾರೋಹಣಗೈದ ಎಸ್‌. ಅಂಗಾರ

02:26 AM Jan 27, 2021 | Team Udayavani |

ಉಡುಪಿ: ಪಶ್ಚಿಮ ವಾಹಿನಿ ಯೋಜನೆಯಡಿ ಜಿಲ್ಲೆಯಾದ್ಯಂತ 195.28 ಕೋ.ರೂ. ಮೊತ್ತದಲ್ಲಿ 116 ಕಿಂಡಿ ಹಾಗೂ ಉಪ್ಪು ನೀರು ತಡೆ ಅಣೆಕಟ್ಟು ನಿರ್ಮಿಸಲಾಗುತ್ತಿದ್ದು, ಇದರಿಂದ ಸುಮಾರು 3,137.80 ಹೆಕ್ಟೇರ್‌ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಒದಗಿಸಬಹುದಾಗಿದೆ ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್‌. ಅಂಗಾರ ತಿಳಿಸಿದರು.

Advertisement

ಅವರು ಅಜ್ಜರಕಾಡು ಕ್ರೀಡಾಂಗಣದಲ್ಲಿ ಮಂಗಳವಾರ ಜಿಲ್ಲಾ ಮಟ್ಟದ ಗಣ ರಾಜ್ಯೋತ್ಸವ ಪ್ರಯುಕ್ತ ಧ್ವಜಾ ರೋಹಣ ಗೈದು, ಸಂದೇಶ ನೀಡಿದರು.

2020-21ನೇ ಸಾಲಿನಲ್ಲಿ ಜಿಲ್ಲೆಯಲ್ಲಿ 303 ಹೆಕ್ಟೇರ್‌ ಪ್ರದೇಶದಲ್ಲಿ ತುಂತುರು ನೀರಾವರಿ ಸೌಲಭ್ಯ ಆಳವಡಿಕೆಗೆ 52.70 ಲ.ರೂ ಸಹಾಯಧನವನ್ನು 303 ಮಂದಿ ರೈತರು ಪಡೆದುಕೊಂಡಿದ್ದಾರೆ. ಪಿಎಂ

ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯಡಿ 1,54,592 ರೈತರು ನೋಂದಾಯಿಸಿಕೊಂಡಿದ್ದು, 1,47,216 ರೈತರಿಗೆ 175.73 ಕೋ.ರೂ. ಹಾಗೂ ಕೃಷಿ ಯಂತ್ರೋಪಕರಣ ಖರೀದಿಗೆ 1.22 ಕೋ.ರೂ. ಸಹಾಯಧನ ನೀಡಲಾಗಿದೆ. 1.93 ಲಕ್ಷ ಕುಟುಂಬಗಳಿಗೆ ಬಿಪಿಎಲ್‌ ಹಾಗೂ ಅಂತ್ಯೋದಯ ಪಡಿತರ ಚೀಟಿಗಳನ್ನು ನೀಡಿದೆ ಎಂದರು.

ಅಭಿವೃದ್ಧಿ ಕಾಮಗಾರಿ :

Advertisement

ಜಿಲ್ಲೆಯಲ್ಲಿ 81 ಕೋ.ರೂ ವೆಚ್ಚದಲ್ಲಿ 122.40 ಕಿ.ಮೀ. ಉದ್ದದ 144 ರಸ್ತೆಗಳ ಅಭಿವೃದ್ಧಿ, 1,100 ಮೀಟರ್‌ ನದಿದಂಡೆ ಸಂರಕ್ಷಣೆ ಕಾಮಗಾರಿ ಯೋಜನೆ ಕೈಗೊಳ್ಳಲಾಗಿದೆ. 2020ನೇ ಸಾಲಿನಲ್ಲಿ ಮಳೆಹಾನಿ ಕಾರ್ಯಕ್ರಮದಡಿ 18.44 ಕೋ.ರೂ. ವೆಚ್ಚದಲ್ಲಿ 31 ಕಾಮಗಾರಿ ನಡೆಸಲಾಗಿದೆ ಎಂದರು.

ಸರಕಾರಿ ಶಾಲೆಗಳಲ್ಲಿ ಮೂಲಸೌಕರ್ಯಕ್ಕಾಗಿ 2.54 ಕೋ.ರೂ. ಮಂಜೂರಾಗಿದ್ದು, ಮೊದಲ ಕಂತಿನಲ್ಲಿ 63.60 ಲ.ರೂ. ಬಿಡುಗಡೆಯಾಗಿದೆ. ಗೋಶಾಲೆ ಬೆಂಬಲ ಯೋಜನೆಯಡಿ 3 ಗೋಶಾಲೆಗಳಿಗೆ 6.25 ಲಕ್ಷ ರೂ. ವಿತರಿಸಲಾಗಿದೆ ಎಂದು ಹೇಳಿದರು. ಮಹಾತ್ಮಾ ಗಾಂಧೀಜಿ, ಡಾ| ಅಂಬೇಡ್ಕರ್‌ ಅವರ ಭಾವಚಿತ್ರಕ್ಕೆ ಸಚಿವ ಎಸ್‌. ಅಂಗಾರ ಅವರು ಈ ಸಂದರ್ಭ ಗೌರವ ಸಲ್ಲಿಸಿದರು.

ಘನ ತ್ಯಾಜ್ಯ ನಿರ್ವಹಣೆ :

ಅಲೆವೂರು ಘನ ತ್ಯಾಜ್ಯ ನಿರ್ವಹಣ ಘಟಕದಲ್ಲಿ 1.75 ಕೋ.ರೂ. ವೆಚ್ಚದಲ್ಲಿ 10 ಟಿಪಿಡಿ ಸಾಮರ್ಥ್ಯದ ಎಂಆರ್‌ಎಫ್ ಘಟಕ ನಿರ್ಮಾಣ ಹಾಗೂ ಸಮಗ್ರ ಘನತ್ಯಾಜ್ಯ ವಿಲೇವಾರಿಗೆ ಸ್ವತ್ಛ ಭಾರತ್‌ ಅಭಿಯಾನದಡಿ 14.4 ಕೋ.ರೂ. ವೆಚ್ಚದ ಡಿಪಿಆರ್‌ಗೆ ಅನುಮೋದನೆ ಸಿಕ್ಕಿದ್ದು, ಅದರಲ್ಲಿ 7.31 ಕೋ.ರೂ. ಸಿವಿಲ್‌ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.

ಮೀನುಗಾರಿಕೆಗೆ ಪ್ರೋತ್ಸಾಹ :

ಕೇಂದ್ರ ಸರಕಾರದ ವಿಶೇಷ ಸಹಾಯಧನ ಯೋಜನೆಯಡಿ ಜಿಲ್ಲೆಯ ನಾಡದೋಣಿಗಳಿಗೆ ಪ್ರಸಕ್ತ ಸಾಲಿನಲ್ಲಿ 4,31,100 ಲೀ. ಸೀಮೆ ಎಣ್ಣೆ ಸಬ್ಸಿಡಿ ದರದಲ್ಲಿ ವಿತರಿಸಲಾಗಿದೆ. ಯಾಂತ್ರೀಕೃತ ದೋಣಿಗಳು ಬಳಸಿದ ಡೀಸೆಲ್‌ ಮೇಲಿನ ಮಾರಾಟ ತೆರಿಗೆ ಮರು ಪಾವತಿ ಯೋಜನೆಯಡಿ ಬಿಡುಗಡೆಯಾದ 42.23 ಕೋ.ರೂ. ಅನುದಾನದಲ್ಲಿ 42.04 ಕೋ.ರೂ. ಸಹಾಯಧನ ಪಾವತಿಯಾಗಿದೆ ಎಂದರು.

ಶಾಸಕ ಕೆ. ರಘುಪತಿ ಭಟ್‌, ಡಿಸಿ ಜಿ. ಜಗದೀಶ್‌, ಎಡಿಸಿ ಸದಾಶಿವ ಪ್ರಭು, ಜಿ.ಪಂ. ಸಿಇಒ ಡಾ| ನವೀನ್‌ ಭಟ್‌, ಎಸ್‌ಪಿ ವಿಷ್ಣುವರ್ಧನ್‌, ಕರಾವಳಿ ಕಾವಲು ಪಡೆ ಎಸ್‌ಪಿ ಚೇತನ್‌ ಉಪಸ್ಥಿತರಿದ್ದರು.

ಸಾಧಕ ವೈದ್ಯರು, ವಿದ್ಯಾರ್ಥಿಗಳಿಗೆ ಗೌರವ :

ಕೋವಿಡ್‌ ಸಂದರ್ಭ ಆಯುಷ್ಮಾನ್‌ ಯೋಜನೆಯಡಿ ಅತ್ಯಧಿಕ ಚಿಕಿತ್ಸೆ ನೀಡಿರುವ ಸಾಧನೆಗಾಗಿ ಜಿಲ್ಲಾಸ್ಪತ್ರೆಯ ಸರ್ಜನ್‌ ಡಾ| ಮಧುಸೂದನ ನಾಯಕ್‌, ಆಯುಷ್ಮಾನ್‌ ಭಾರತ್‌ ಆರೋಗ್ಯ ಕರ್ನಾಟಕದ ಜಿಲ್ಲಾ ಸಂಯೋಜಕ ಸಚ್ಚಿದಾನಂದ, ಕುಂದಾಪುರ ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ  ಡಾ| ರಾಬರ್ಟ್‌ ಅವರನ್ನು ಗೌರವಿಸಲಾಯಿತು. ಎಸೆಸೆಲ್ಸಿ / ಪಿಯುಸಿ ಅಂತಿಮ ಪರೀಕ್ಷೆಗಳಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು, ಅತ್ಯುತ್ತಮ ಅಂಕ ಗಳಿಸಿದ ಪ್ರೌಢ ಶಾಲೆಗಳ ಮುಖ್ಯಶಿಕ್ಷಕರನ್ನು ಮತ್ತು ದ್ವಿತೀಯ ಪಿಯುಸಿಯಲ್ಲಿ ಶೇ. 100 ಫ‌ಲಿತಾಂಶ ಗಳಿಸಿದ ಕಾಲೇಜುಗಳ ಪ್ರಾಂಶುಪಾಲರನ್ನು ಅಭಿನಂದಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next