ಬಾಗಲಕೋಟೆ: ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ಬೆಳಗ್ಗೆ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ರಾಷ್ಟ್ರ ಧ್ವಜಾರೋಹಣ ವೇಳೆ, ಅಧಿಕಾರಿಗಳ ಚಿಕ್ಕ ಎಡವಟ್ಟಿನಿಂದ ಉಸ್ತುವಾರಿ ಸಚಿವರು ಪೇಚಾಡುವಂತಾಯಿತು.
ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಅವರು ಧ್ವಜಾರೋಹಣಕ್ಕೆ ಮುಂದಾದಾಗ ಧ್ವಜ ಹಾರಲೇ ಇಲ್ಲ. ಸುಮಾರು 40 ಸೆಕೆಂಡುಗಳ ಕಾಲ ಹಗ್ಗ ಹಿಡಿದು ಜಗ್ಗುತ್ತಲೇ ಇದ್ದರು. ಧ್ವಜದ ಕಂಬ ಮತ್ತು ಧ್ವಜಕ್ಕೆ ನಿಯಮಾನುಸಾರ ಕಟ್ಟುವ ವೇಳೆ ಧ್ವಜಕ್ಕೆ ಹಗ್ಗದ ಗಂಟು ಹಾಕಿದ್ದು ಅದು ತಕ್ಷಣ ಬಿಚ್ಚಿಕೊಳ್ಳಲಿಲ್ಲ.
ಹೀಗಾಗಿ ಸೇವಾದಳ ವಿಭಾಗದ ಸಿಬ್ಬಂದಿ ಧ್ವಜವನ್ನು ಕೆಳಕ್ಕೆ ಇಳಿಸಿ, ಗಂಟು ಬಿಚ್ಚಿದರು. ಆಗ ಸಚಿವರು, ಧ್ವಜವನ್ನು ಕೆಳಮಟ್ಟದಲ್ಲೇ ಹಾರಿಸಿ ಬಳಿಕ, ಹಗ್ಗದಿಂದ ಮೇಲಕ್ಕೆತ್ತಿದ್ದರು.
ಇದನ್ನೂ ಓದಿ:ಸ್ವಾತಂತ್ರ್ಯ ದಿನಾಚರಣೆ: ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಚಾಮರಾಜಪೇಟೆ ಮೈದಾನ
ಮೇಲಿಂದ ಮೇಲೆ ಹಗ್ಗ ಜಗ್ಗಿದರೂ ಧ್ವಜ ಹಾರದ ಹಿನ್ನೆಲೆಯಲ್ಲಿ ಇಡೀ ಕ್ರೀಡಾಂಗಣದಲ್ಲಿ ಸೇರಿದ್ದ ಜನರು, ಅಧಿಕಾರಿಗಳು ಏನಾಯಿತು ಎಂದು ಆತಂಕದಿಂದ ನೋಡುತ್ತಿದ್ದರು.
ಧ್ವಜವನ್ನು ಕೆಳಗಡೆ ತಂದು ತೊಡಕು ತಪ್ಪಿಸಿ, ಕಳಗಡೆಯಿಂದ ಮೇಲೆ ಹಾರಿಸಲಾಯಿತು.