Advertisement

ರಸ್ತೆ,ಉಪ್ಪು ನೀರಿನ ಸಮಸ್ಯೆ,ಕಲ್ಲಿನ ಚಪ್ಪಡಿ,ಶುದ್ಧ ನೀರಿನ ಘಟಕ ಸರಿಪಡಿಸಿ

08:57 PM Feb 12, 2020 | Sriram |

ನಾಗರಿಕ ಸಮಸ್ಯೆಗಳ ಬಗ್ಗೆ ನಿಮ್ಮ ದನಿಗೆ ನಮ್ಮ ದನಿ ಸೇರಿಸುವ ಪ್ರಯತ್ನ ಈ ಸುದಿನ ಜನದನಿ. ಓದುಗರು ತಮ್ಮ ಪ್ರದೇಶದ ರಸ್ತೆ, ನೀರು, ಸ್ವತ್ಛತೆ, ನೈರ್ಮಲ್ಯ, ಮಾಲಿನ್ಯ, ಸಂಚಾರ ವ್ಯವಸ್ಥೆ ಸೇರಿದಂತೆ ಯಾವುದೇ ಸಮಸ್ಯೆ ಕುರಿತು ತಿಳಿಸಬಹುದು. ಈ ಅಂಕಣ ಪ್ರತೀ ಗುರುವಾರ ಪ್ರಕಟವಾಗಲಿದೆ. ವೈಯಕ್ತಿಕ ಸಮಸ್ಯೆ, ಕಾನೂನು ವ್ಯಾಜ್ಯದ ದೂರು ಅಥವಾ ವಿವಾದದಲ್ಲಿರುವ ವಿಷಯಗಳನ್ನು ಪರಿಗಣಿಸುವುದಿಲ್ಲ. ನಾಗರಿಕರು ತಮ್ಮ ಪ್ರದೇಶದ ಸಮಸ್ಯೆಗಳನ್ನು ಸಂಕ್ಷಿಪ್ತವಾಗಿ ಬರೆದು ಪೂರಕವೆನಿಸುವ ಒಂದು ಫೋಟೋ ಜತೆ ಹೆಸರು, ವಿಳಾಸ ಮತ್ತು ಮೊಬೈಲ್‌ ಸಂಖ್ಯೆಯನ್ನು ನಮೂದಿಸಿ ಇ-ಮೇಲ್‌ ಅಥವಾ ವಾಟ್ಸಪ್‌ ಮೂಲಕ ಕಳುಹಿಸಬಹುದು. ಅರ್ಹ ದೂರುಗಳನ್ನು ಪ್ರಕಟಿಸಿ, ಸಂಬಂಧಪಟ್ಟ ಇಲಾಖಾಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವ ಪ್ರಯತ್ನವನ್ನು ಸುದಿನ ಮಾಡಲಿದೆ.

Advertisement

ಈ ರಸ್ತೆಯ ಗೋಳು ಕೇಳ್ಳೋರು ಯಾರು?
ನಾಯಕವಾಡಿಯ ಮಾವಿನಕಟ್ಟೆಗೆ ಹೋಗುವ ರಸ್ತೆಯ ಸಮಸ್ಯೆಯ ಗೋಳು ಮುಗಿಯುವಂತೆ ಕಾಣುತ್ತಿಲ್ಲ. ಹಲವಾರು ವರ್ಷಗಳಿಂದ ಇದೇ ಸಮಸ್ಯೆಯಿಂದ ನಾಯಕ ವಾಡಿ ಭಾಗದ ನಾಗರಿಕರು ಸಮಸ್ಯೆ ಅನುಭವಿಸು ತ್ತಿದ್ದಾರೆ.

ಈ ರಸ್ತೆ ನಮ್ಮ ನಾಯಕವಾಡಿ ಮಂಕಿಯಿಂದ ಆರಂಭವಾಗಿ ಮಾವಿನಕಟ್ಟೆ ನೇರವಾಗಿ ಕೊಡಪಾಡಿಗೆ ಹೋಗಿ ತಲುಪುತ್ತದೆ. ಆದರೆ ಮಂಕಿಯಿಂದ ಶುರುವಾದ ಈ ಒಳ ರಸ್ತೆ ಸರಿ ಸುಮಾರು ಮಾವಿನ ಕಟ್ಟೆಯವರೆಗೆ ಮರು ಡಾಮರು ಕಾಮಗಾರಿ ಆಗ‌ದೆ 30 ವರ್ಷಗಳೇ ಕಳೆದಿದೆ.

ಈ ರಸ್ತೆಯ ಸ್ವಲ್ಪ ದೂರದವರೆಗೆ ಕೆಲ
ವರ್ಷಗಳ ಹಿಂದೆ ಡಾಮರುಗೊಂಡಿದ್ದು, ಅದರಲ್ಲಿಯೂ ಅಲ್ಲಲ್ಲಿ ಹೊಂಡ – ಗುಂಡಿಗಳಿವೆ. ಇನ್ನು ಸ್ವಲ್ಪ ದೂರ ಬರೀ ಮಣ್ಣಿನ ರಸ್ತೆಯಾಗಿಯೇ ಇದೆ. ಧೂಳಿನಿಂದ ನಿತ್ಯ ಪಾದಚಾರಿಗಳಿಗೆ ತೊಂದರೆಯಾಗುತ್ತಿದೆ.

ಮಳೆಗಾಲದಲ್ಲಿ ಕೆಸರುಗದ್ದೆಯಂತಾಗುವ ಈ ರಸ್ತೆಯ ದುರಸ್ತಿ ಕಾರ್ಯವನ್ನು ಸ್ಥಳೀಯ ಗ್ರಾಮ ಪಂಚಾಯತ್‌ ಆಗಲಿ, ಅಧಿಕಾರಿಗಳು ಆಗಲಿ, ಜನಪ್ರತಿನಿಧಿಗಳು ಆಗಲಿ ಮಾಡಲು ಮುಂದಾಗುತ್ತಿಲ್ಲ. ಈ ರಸ್ತೆಗೆ ಕೆಂಪು ಅಂಟು ಮಣ್ಣನ್ನು ತಂದು ಹಾಕಿದ್ದು ಅದರ ಮೇಲೆ ಜಲ್ಲಿ ಕಲ್ಲುಗಳನ್ನು ಹಾಕಲಾಗುವುದು ಎಂಬ ಆಶ್ವಾಸನೆ ನೀಡಿದ್ದು, ಇದುವರೆಗೂ ಆ ಕಾರ್ಯ ಕೈಗೆತ್ತಿಕೊಳ್ಳಲಿಲ್ಲ. ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳ ದೃಷ್ಟಿಯಿಂದಾದರೂ ಈ ರಸ್ತೆಯ ದುರಸ್ತಿ ಮಾಡಲು ಮುಂದಾಗಲಿ.
– ಶಿವರಾಜ್‌ಖಾರ್ವಿ,ಸ್ಥಳೀಯರು

Advertisement

ಚಪ್ಪಡಿ ಸರಿಪಡಿಸಿ
ಕುಂದಾಪುರ ಪುರಸಭೆ ವ್ಯಾಪ್ತಿಯ ಗುರುನಾರಾಯಣ ಮಂದಿರ ಬಳಿಯಿಂದ ಮದ್ದುಗುಡ್ಡೆಗೆ ಹೋಗುವ ರಸ್ತೆಯ ಆರಂಭದಲ್ಲಿ ಚರಂಡಿಗೆ ಮುಚ್ಚಿದ ಚಪ್ಪಡಿ ಕಿತ್ತುಹೋಗಿದೆ.

ಇದು ವರ್ಷಗಳಿಂದ ಇರುವಂತೆ ಇಲ್ಲಿ ಬಾಕಿಯಾಗಿದ್ದು ಶಾಲಾ ವಾಹನಗಳ ಓಡಾಟ, ದ್ವಿಚಕ್ರ ವಾಹನಗಳ ಓಡಾಟ ಸಂದರ್ಭ ಬಹಳ ತೊಂದರೆಯಾಗುತ್ತಿದೆ.

ಅದೆಷ್ಟು ಬಾರಿ ಪುರಸಭೆಯವರ ಗಮನಕ್ಕೆ ತಂದರೂ ಈವರೆಗೂ ಯಾವುದೇ ಕ್ರಮಕೈಗೊಂಡಿಲ್ಲ. ಬಂದು ವೀಕ್ಷಿಸಿ ಹೋಗುತ್ತಾರೆ ವಿನಾ ಸಮಸ್ಯೆ ಪರಿಹಾರವಾಗಿಲ್ಲ. ಪ್ರತಿನಿತ್ಯ ಎಂಬಂತೆ ಇಲ್ಲಿ ಬೈಕ್‌ಗಳು ಬೀಳುತ್ತವೆ. ಜನರು ಎಡವಿ ಬೀಳುತ್ತಾರೆ. ರಸ್ತೆಯಲ್ಲಿಯೇ ಇಂತಹ ಸಮಸ್ಯೆಗಳಿ
ದ್ದರೂ ಅಧಿಕಾರಿಗಳು ಕುರುಡಾಗಿದ್ದಾರೆ.
-ಸದಾನಂದ ಖಾರ್ವಿ,
ಮದ್ದುಗುಡ್ಡೆ, ಕುಂದಾಪುರ

ಉಪ್ಪು ನೀರಿನ ಸಮಸ್ಯೆ ನಿವಾರಿಸಿ
ಕುಂದಾಪುರ ಪುರಸಭೆಯ ಕುಂದೇಶ್ವರ ವಾರ್ಡ್‌ಗೆ ಸಂಬಂಧಿಸಿ ದಂತೆ ನಾವಡರಕೇರಿ ಪ್ರಸನ್ನಗಣಪತಿ ದೇವಸ್ಥಾನದ ಹಿಂದೆ ವಿಠಲವಾಡಿಯಲ್ಲಿ ಉಪ್ಪುನೀರಿನ ಸಮಸ್ಯೆ ಇದೆ. ಸಮುದ್ರದ ಉಬ್ಬರ ಇಳಿತದ ಸಂದರ್ಭ ಇಲ್ಲಿನ ಹೊಳೆಯಿಂದ ಗದ್ದೆಗೆ ಬರುತ್ತದೆ. ಆದರೆ ಮರಳಿ ಹೋಗಲು ವ್ಯವಸ್ಥೆಯಿಲ್ಲ. ಹಾಗಾಗಿ ಇಲ್ಲಿನ ಜನರ ಬೇಡಿಕೆಯೆಂದರೆ ಉಪ್ಪುನೀರಿನ ಸಮಸ್ಯೆಗೊಂದು ಪರಿಹಾರ ಒದಗಿಸಬೇಕು.


ಗದ್ದೆಯ ಮೂಲಕ ಮನೆಗಳ ಪಕ್ಕ ಇರುವ ಚರಂಡಿಗೂ ಈ ನೀರು ಸೇರಿ ನೀರು ಹರಿಯದೇ ಬಾಕಿಯಾಗಿ ಸೊಳ್ಳೆ ಉತ್ಪತ್ತಿ ತಾಣವಾಗಿದೆ. ಭಯಾನಕ ರೋಗಗಳ ಕುರಿತು ಕೇಳಿಯೇ ಭಯಗೊಂಡಿರುವ ನಮಗೆ ಇಂತಹ ವಾತಾವರಣ ಇನ್ನಷ್ಟು ಭೀತಿ ಮೂಡಿಸುತ್ತಿದೆ. ಇದನ್ನು ಆದಷ್ಟು ಶೀಘ್ರ ಕ್ರಮಕೈಗೊಂಡು ಉಪ್ಪುನೀರಿನ ಸಮಸ್ಯೆಯಿಂದ ಮುಕ್ತಿ ದೊರಕಿಸಿಕೊಡಬೇಕಿದೆ.
-ರಾಘು, ವಿಠಲವಾಡಿ

ಹಳ್ಳಿಹೊಳೆ – ದೇವರಬಾಳು ರಸ್ತೆ ದುಸ್ಥಿತಿ
ನಕ್ಸಲ್‌ ಬಾಧಿತ ದೇವರಬಾಳು ಎನ್ನುವ ಊರಿಗೆ ಹಳ್ಳಿಹೊಳೆಯಿಂದ ಸಂಪರ್ಕಿಸುವ ಹತ್ತಿರದ ಮಾರ್ಗ ಇದಾಗಿದ್ದು, ದುರಸ್ತಿಯಾಗದೇ ಕೆಲ ದಶಕಗಳೇ ಕಳೆದಿವೆ. ಗ್ರಾಮೀಣ ಭಾಗದ ಈ ರಸ್ತೆಯ ಸಮಸ್ಯೆ ಬಗ್ಗೆ ಕೇಳ್ಳೋರೇ ಇಲ್ಲ.

ಹಳ್ಳಿಹೊಳೆ ಗ್ರಾಮ ಪಂಚಾಯತ್‌, ಪೇಟೆಗೆ ಬರುವ ಜನರು ಮತ್ತೆ ದೇವರಬಾಳುವಿಗೆ ಚಕ್ರಾ ಮೈದಾನ ವಾಗಿ ತೆರಳುವುದಾದರೆ ಹೆಚ್ಚಿನ ದೂರವಾಗುತ್ತದೆ. ಆದರೆ ಈ ಮಾರ್ಗವಾಗಿ ತೆರಳಿದರೆ ತುಂಬಾ ಹತ್ತಿರವಾಗುತ್ತದೆ. ಆದರೆ ಈ ರಸ್ತೆ ಡಾಮರುಗೊಂಡಿದ್ದರೂ, ಅಲ್ಲಲ್ಲಿ ಹೊಂಡ – ಗುಂಡಿಗಳಿಂದಾಗಿ ಸಮಸ್ಯೆಯಾಗುತ್ತಿದೆ.

ಈ ಮಾರ್ಗವಾಗಿ ದೇವರಬಾಳು, ಕಟ್ಟಿನಾಡಿ, ರಾಮನಹಕ್ಲು, ಕಬ್ಬಿನಾಲು ಭಾಗದ ನೂರಾರು ಮಂದಿ ಪ್ರತಿ ದಿನ ಸಂಚರಿಸುತ್ತಾರೆ. ಪ್ರತಿ ನಿತ್ಯ ಅನೇಕ ವಾಹನಗಳು ಸಂಚರಿಸುತ್ತವೆ. ಈ ಸಲವಾದರೂ ಈ ಭಾಗದ ಸ್ಥಳೀಯ ಜನಪ್ರತಿನಿಧಿಗಳು, ಸಂಬಂಧಪಟ್ಟ ಅಧಿಕಾರಿಗಳು ಈ ರಸ್ತೆಯ ಮರು ಡಾಮರಿಗೆ ಮುಂದಾಗಲಿ.
– ನಿವಾಸಿಗಳು,
ದೇವರಬಾಳು, ಕಟ್ಟಿನಾಡಿ

ನಿಷ್ಪ್ರಯೋಜಕವಾದ ಕುಡಿಯುವ ನೀರಿನ ಘಟಕ
ಗ್ರಾಮೀಣ ಪ್ರದೇಶದ ಜನರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವ ಉದ್ದೇಶದಿಂದ ಎಲ್ಲ ಕಡೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಆರಂಭಿಸಲಾಗಿದೆ. ಕುಡಿಯುವ ನೀರು ಮತ್ತು ನೈರ್ಮಲ್ಯ
ಇಲಾಖೆಯಿಂದ ಮೇಲ್‌ಗ‌ಂಗೊಳ್ಳಿ ಭಾಗಕ್ಕೆ ಕೂಡ ಒಂದು ಘಟಕ ಮಂಜೂರಾಗಿದ್ದು, ಆದರೆ ಸಮರ್ಪಕ ನಿರ್ವಹಣೆ ಕೊರತೆಯಿಂದ ಅದು ಈಗ ಬಳಕೆಗೆ ಮಾತ್ರ ಬಾರದೇ ನಿಷ್ಪ್ರಯೋಜಕವಾಗಿದೆ.

ಬರೋಬ್ಬರಿ 12 ಲಕ್ಷ ರೂ. ಅನುದಾನದಲ್ಲಿ ನಿರ್ಮಾಣಗೊಂಡ ಈ ಘಟಕವು ಸರಿಯಾದ ನಿರ್ವಹಣೆ ಕೊರತೆಯಿಂದ ಯಾರಿಗೂ ಪ್ರಯೋಜನಕ್ಕೆ ಸಿಗುತ್ತಿಲ್ಲ. ಇದರಿಂದ ಸರಕಾರದ ಲಕ್ಷಾಂತರ ರೂ. ವೆಚ್ಚದ ಮಹತ್ವಾಕಾಂಕ್ಷೆಯ ಯೋಜನೆಯೊಂದು ನನೆಗುದಿಗೆ ಬಿದ್ದಂತಾಗಿದೆ.

ಇನ್ನು ಬೇಸಗೆಕಾಲ ಆರಂಭವಾಗುತ್ತಿದ್ದು, ಸಮುದ್ರದ ತೀರದ ನಿವಾಸಿಗಳ ಮನೆಗಳ ಬಾವಿ ನೀರು ತಳಮಟ್ಟಕ್ಕೆ ತಲುಪಿದ್ದು, ಇದಕ್ಕೆ ಉಪ್ಪು ನೀರಿನ ಪ್ರಭಾವವೂ ಇರುವುದರಿಂದ ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೂ ಸಮಸ್ಯೆಯಾಗುತ್ತದೆ. ಆ ನಿಟ್ಟಿನಲ್ಲಿ ಇದನ್ನು ಸಮರ್ಪಕವಾಗಿ ನಿರ್ವಹಿಸಿದರೆ ಈ ಭಾಗದ ಹತ್ತಾರು ಮನೆಗಳಿಗೆ ಪ್ರಯೋಜನವಾಗಲಿದೆ.
– ನಾಗರಿಕರು, ಮೇಲ್‌ಗ‌ಂಗೊಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next