Advertisement

ಕೆರೆ, ಕಸ, ರಸ್ತೆ, ನೈರ್ಮಲ್ಯ ಸಮಸ್ಯೆ ಬಗೆಹರಿಸಿ

11:05 AM Dec 28, 2018 | Team Udayavani |

ಮೈಸೂರು: ಕೆರೆಗೆ ತ್ಯಾಜ್ಯ ಸುರಿಯುವುದನ್ನು ತಡೆಯಿರಿ..ಕೆರೆ ಒತ್ತುವರಿ ತೆರವುಗೊಳಿಸಿ..ಬೀದಿ ದೀಪ ಹಾಕಿಸಿ ಸರಗಳ್ಳತನ ತಪ್ಪಿಸಿ.. ರಸ್ತೆ ಅಭಿವೃದ್ಧಿಪಡಿಸಿ.. ಮನೆ ಮನೆಯಿಂದ ಕಸ ಸಂಗ್ರಹಿಸಿ ನೈರ್ಮಲ್ಯ ಕಾಪಾಡಲು ಸೂಚಿಸಿ…ಇವು ಮೈಸೂರು ಜಿಲ್ಲೆಯ ಜನತೆ ಜಿಲ್ಲಾಧಿಕಾರಿಗಳಿಗೆ ಹೇಳಿದ ದೂರುಗಳು.

Advertisement

ಜಿಲ್ಲಾಧಿಕಾರಿ ಅಭಿರಾಮ್‌ ಜಿ.ಶಂಕರ್‌ ಅವರು ಗುರುವಾರ ಜಿಲ್ಲಾಡಳಿತದ ವಿವಿಧ ಇಲಾಖೆ ಹಿರಿಯ ಅಧಿಕಾರಿಗಳೊಂದಿಗೆ ನಡೆಸಿದ ಒಂದು ಗಂಟೆಗಳ ಕಾಲ ನಡೆಸಿದ ನೇರ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧೆಡೆಯ 15 ಮಂದಿ ದೂರವಾಣಿ ಕರೆ ಮಾಡಿ, ದೂರು ಹೇಳಿದ್ದಲ್ಲದೆ ತಮ್ಮ ಅಳಲು ತೋಡಿಕೊಂಡರು. 

ಕೆರೆಗೆ ತ್ಯಾಜ್ಯ: ಪಿರಿಯಾಪಟ್ಟಣ ತಾಲೂಕು ಕಂಪಲಾಪುರದ ನಿವಾಸಿಯೊಬ್ಬರು ಕರೆ ಮಾಡಿ ನಮ್ಮೂರಿನ ಕೆರೆಗೆ ತ್ಯಾಜ್ಯ ಸುರಿದು ಮಲಿನಗೊಳಿಸುತ್ತಿದ್ದು, ಕೆರೆಗೆ ತ್ಯಾಜ್ಯ ಸುರಿಯುವುದನ್ನು ತಡೆಯುವಂತೆ ಸ್ಥಳೀಯ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.

ನೀವಾದರು ಕಟ್ಟುನಿಟ್ಟಿನ ಸೂಚನೆ ನೀಡಿ, ಕೆರೆ ಮಲಿನವಾಗುವುದನ್ನು ತಪ್ಪಿಸಿ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಅಲ್ಲಿನ ಗ್ರಾಪಂ ಪಿಡಿಒಯಿಂದ ವರದಿ ಪಡೆದು, ತ್ಯಾಜ್ಯ ಸುರಿಯುವುದನ್ನು ತಡೆಗಟ್ಟಲು ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ಒತ್ತುವರಿ: ಎನ್‌.ಬೇಗೂರು ಗ್ರಾಮದ ವೆಂಕಟೇಶ್‌ ಕರೆ ಮಾಡಿ ನಮ್ಮೂರು ವ್ಯಾಪ್ತಿಗೆ ಬರುವ ಮೂರು ಕೆರೆಗಳು ಒತ್ತುವರಿಯಾಗಿದ್ದು, ಒತ್ತುವರಿ ತೆರವುಗೊಳಿಸಿ ಕೆರೆ ಅಭಿವೃದ್ಧಿಪಡಿಸುವಂತೆ ಮನವಿ ಮಾಡಿದರು. ಮಹದೇವ ಎಂಬುವರು ನಮ್ಮೂರಿನ ಓಣಿಗಳನ್ನು ಮುಚ್ಚಲಾಗಿದೆ,

Advertisement

ಈ ಬಗ್ಗೆ ದೂರು ನೀಡಿದರೂ ತೆರವುಗೊಳಿಸಿಲ್ಲ ಎಂದರೆ, ಬಿಎಸ್‌ಎನ್‌ಎಲ್‌ ಲೇಔಟ್‌ನ ಮೀನಾ ಎಂಬುವರು, ಹಂಚ್ಯಾಸಾತಗಳ್ಳಿ ಬಳಿಯ ರಸ್ತೆಯಲ್ಲಿ ಬೀದಿದೀಪಗಳಿಲ್ಲದೆ ಸಂಜೆ ವೇಳೆ ತಿರುಗಾಡಲು ಕಷ್ಟವಾಗಿದ್ದು, ಸರಗಳ್ಳತನವಾಗುತ್ತಿದೆ ಎಂದು ಅಳಲು ತೋಡಿಕೊಂಡರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ, ಈ ಕುರಿತು ನಗರಪಾಲಿಕೆ ಆಯುಕ್ತರು ಪರಿಶೀಲಿಸಿ ಬೀದಿದೀಪ ಹಾಕಿಸುತ್ತಾರೆ. ಪೊಲೀಸರ ಗಸ್ತು ಹಾಕಲಾಗುತ್ತದೆ ಎಂದು ಹೇಳಿದರು.

ಕಸ ವಿಲೇವಾರಿ: ರಾಜೀವನಗರ ಒಂದನೇ ಹಂತದ ಪ್ರಭು, ಕರೆ ಮಾಡಿ ಬಡಾವಣೆಯಲ್ಲಿ ಮನೆ ಮನೆ ಕಸ ಸಂಗ್ರಹಿಸುತ್ತಿಲ್ಲ. ಕಸದ ಕಂಟೇನರ್‌ಅನ್ನು ಡಂಪ್‌ ಮಾಡುತ್ತಿಲ್ಲ, ಈ ಬಗ್ಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದರು. ಇದಕ್ಕೆ ಪ್ರತಿಕ್ರಿಯಸಿದ ಪಾಲಿಕೆ ಆಯುಕ್ತ ಕೆ.ಎಚ್‌.ಜಗದೀಶ್‌, ಮನೆ ಮನೆ ಕಸ ಸಂಗ್ರಹಕ್ಕೆ ಸೂಚನೆ ಕೊಡಲಾಗಿದೆ ಎಂದು ತಿಳಿಸಿದರು.

ರಸ್ತೆ ನಿರ್ಮಿಸಿ: ಉದೂರು ಲೇ ಔಟ್‌ನಲ್ಲಿ ರಸ್ತೆಗೆ ಜಲ್ಲಿ ಹಾಕಿ ಡಾಂಬರು ಹಾಕದೆ ಬಿಟ್ಟಿರುವುದರಿಂದ ಧೂಳು ಹೆಚ್ಚಾಗಿದ್ದು, ಅಲರ್ಜಿ, ನೆಗಡಿ, ಕೆಮ್ಮು ಬರುತ್ತಿದೆ ಎಂದು ಕೃಷ್ಣೇಗೌಡ ಎಂಬುವರು ದೂರಿದರು. ಸ್ಥಳ ಪರಿಶೀಲಿಸಿ ಅಗತ್ಯ ಕ್ರಮಕೈಗೊಳ್ಳುವುದಾಗಿ ಜಿಪಂ ಮುಖ್ಯ ಯೋಜನಾಧಿಕಾರಿ ಕೆ.ಬಿ.ಪ್ರಭುಸ್ವಾಮಿ ಭರವಸೆ ನೀಡಿದರು. 

ಅಕ್ರಮ ಕಟ್ಟಡ: ಶಾರದಾದೇವಿನಗರದ ನಿವಾಸಿಯೊಬ್ಬರು ಕರೆಮಾಡಿ, ವಲಯ 6ರ 47ನೇ ವಾರ್ಡ್‌ನಲ್ಲಿ ಪಾಲಿಕೆ ಸಹಕಾರದಲ್ಲೇ ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ, ಈ ಬಗ್ಗೆ ದೂರು ನೀಡಿದರೂ ಕ್ರಮಕೈಗೊಂಡಿಲ್ಲ ಎಂದರು. ಪಾಲಿಕೆ ಆಯುಕ್ತ ಜಗದೀಶ್‌, ಅಕ್ರಮ ನಿರ್ಮಾಣವಾಗಿದ್ದರೆ ತಡೆದು ಕ್ರಮ ಕೈಗೊಳ್ಳುವುದಾಗಿ ಹೇಳಿದರು. 

ಹೆಚ್ಚುವರಿ ಜಿಲ್ಲಾಧಿಕಾರಿ ಯೋಗೀಶ್‌, ಮುಡಾ ಆಯುಕ್ತ ಕಾಂತರಾಜು, ಜಿಪಂ ಮುಖ್ಯ ಯೋಜನಾಧಿಕಾರಿ ಕೆ.ಬಿ.ಪ್ರಭುಸ್ವಾಮಿ, ಮೈಸೂರು ಉಪ ವಿಭಾಗಾಧಿಕಾರಿ ಶಿವೇಗೌಡ, ಜಂಟಿ ಕೃಷಿ ನಿರ್ದೇಶಕ ಡಾ.ಮಹಂತೇಶಪ್ಪ, ತಹಶೀಲ್ದಾರ್‌ ರಮೇಶ್‌ ಬಾಬು ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next