ಬೀದರ: ತೊಗರಿಗೆ 8 ಸಾವಿರ ರೂ. ಕನಿಷ್ಟ ಬೆಂಬಲ ಬೆಲೆ ನಿಗದಿಪಡಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ವಿಜಯಸಿಂಗ್ ಒತ್ತಾಯಿಸಿದ್ದಾರೆ. ವಿಧಾನಸಭೆಯಲ್ಲಿ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿರುವ ಅವರು, ಮಾರುಕಟ್ಟೆಯಲ್ಲಿ ಬೆಂಬಲ ಬೆಲೆಗಿಂತ ಅಧಿಕ ಬೆಲೆ ಇರುವ ಕಾರಣ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ತೊಗರಿ ಮಾರಾಟಕ್ಕೆ ರೈತರು ಮುಂದೆ ಬರುತ್ತಿಲ್ಲ. ಬೀದರ ಜಿಲ್ಲೆಯಲ್ಲಿ 126 ತೊಗರಿ ಖರೀದಿ ಕೇಂದ್ರ ಆರಂಭಿಸಲಾಗಿದೆ. 20 ಸಾವಿರಕ್ಕೂ ಅಧಿಕ ರೈತರು ಹೆಸರು ನೋಂದಣಿ ಮಾಡಿಸಿದ್ದಾರೆ. ಆದರೆ, ಒಂದು ಕ್ವಿಂಟಲ್ ತೊಗರಿ ಸಹ ಮಾರಾಟ ಮಾಡಿಲ್ಲ ಎಂದು ಗಮನ ಸೆಳೆದಿದ್ದಾರೆ.
ಪ್ರಸಕ್ತ ವರ್ಷ ಅತಿವೃಷ್ಟಿಯಿಂದ ತೊಗರಿ ಬೆಳೆ ಹಾಳಾಗಿದ್ದು, ಇಳುವರಿಯೂ ಕಡಿಮೆಯಾಗಿದೆ. ಪ್ರಸ್ತುತ ಸರ್ಕಾರ ಪ್ರತಿ ಕ್ವಿಂಟಲ್ ಗೆ 6 ಸಾವಿರ ರೂ. ಬೆಂಬಲ ಬೆಲೆ ನಿಗದಿಪಡಿಸಿದೆ. ರಾಜ್ಯ ಸರ್ಕಾರ ಹಿಂದಿನಂತೆ ಪ್ರೋತ್ಸಾಹಧನವನ್ನೂ ಘೋಷಿಸಿಲ್ಲ. ಸರ್ಕಾರ ಕೂಡಲೇ ಕ್ವಿಂಟಲ್‌ಗೆ 8 ಸಾವಿರ ರೂ. ಬೆಂಬಲ ಬೆಲೆ ನಿಗದಿಪಡಿಸಬೇಕು.ಖರೀದಿ ಪ್ರಕ್ರಿಯೆಗೆ ಸಮಯದ ಮಿತಿ ಹಾಕಬಾರದು ಎಂದು ಬೇಡಿಕೆ ಮಂಡಿಸಿದ್ದಾರೆ.
ಉಪ ಸಮಿತಿ ಮುಂದೆ ಮಂಡನೆ: ಪ್ರಸಕ್ತ ಸಾಲಿಗೆ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಜತೆಗೆ ರಾಜ್ಯದ ಪ್ರೋತ್ಸಾಹ ಧನ ನಿಗದಿಪಡಿಸುವ ಕುರಿತು ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳ ಬೆಲೆ ಸ್ಥಿರೀಕರಣ ಸಚಿವ ಸಂಪುಟ ಉಪ ಸಮಿತಿ ಮುಂದೆ ವಿಷಯ ಮಂಡಿಸಬೇಕಿದೆ ಎಂದು ರಾಜ್ಯ ಕೃಷಿ ಮಾರಾಟ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ತಿಳಿಸಿದ್ದಾರೆ.
2020-21ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ನಾಫೆಡ್ ಸಂಸ್ಥೆ ರಾಜ್ಯ ಸರ್ಕಾರ ಗುರುತಿಸಿದ ಖರೀದಿ ಸಂಸ್ಥೆಗಳಾದ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳ ಹಾಗೂ ತೊಗರಿ ಅಭಿವೃದ್ಧಿ ಮಂಡಳಿಗಳ ಮೂಲಕ ಕಲಬುರ್ಗಿ, ಯಾದಗಿರಿ, ಬೀದರ, ರಾಯಚೂರು, ಬಳ್ಳಾರಿ, ಬಾಗಲಕೋಟೆ, ಕೊಪ್ಪಳ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ 560 ಖರೀದಿ ಕೇಂದ್ರ ತೆರೆದಿದೆ ಎಂದು ಹೇಳಿದ್ದಾರೆ.
ಫೆ.1ರವರೆಗೆ 1,77,120 ರೈತರು ಹೆಸರು ನೋಂದಾಯಿಸಿದ್ದು, 3,985 ರೈತರಿಂದ 61,849 ಕ್ವಿಂಟಲ್ ತೊಗರಿ ಖರೀದಿಸಲಾಗಿದೆ. ಫೆ.28ರವರೆಗೆ ಖರೀದಿ ಕಾಲಾವಧಿ ಇದೆ. ಸಹಕಾರ ಮಾರಾಟ ಮಹಾ ಮಂಡಳ ನೋಂದಣಿ ಅವಧಿ ಒಂದು ತಿಂಗಳವರೆಗೆ ವಿಸ್ತರಿಸಲು ಕೋರಿದೆ ಎಂದು ತಿಳಿಸಿದ್ದಾರೆ.