Advertisement

Fix date ; ಪ್ರಧಾನಿ ಮೋದಿ ಜತೆ ಬಹಿರಂಗ ಚರ್ಚೆಗೆ ಸಿದ್ಧ: ರಾಹುಲ್‌ ಗಾಂಧಿ

02:05 AM May 12, 2024 | Team Udayavani |

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಜತೆಗೆ ಸಾರ್ವಜನಿಕ ಚರ್ಚೆ ನಡೆಸುವ ಆಹ್ವಾನವನ್ನು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅಧಿಕೃತವಾಗಿ ಸ್ವೀಕರಿಸಿದ್ದಾರೆ. ಅಲ್ಲದೇ ಈ ಚರ್ಚೆಗೆ ಪ್ರಧಾನಿ ಮೋದಿ ಕೂಡ ಒಪ್ಪಿಕೊಂಡರೆ, ಚರ್ಚೆಯ ರೂಪರೇಖೆಯ ವಿವರ ಹಾಗೂ ದಿನಾಂಕದ ಮಾಹಿತಿಯನ್ನು ಹಂಚಿಕೊಳ್ಳುವಂತೆ ಕೇಳಿದ್ದಾರೆ.

Advertisement

2024ರ ಚುನಾವಣೆ ಸಂಬಂಧಿಸಿ ಪ್ರಮುಖ ಸಮಸ್ಯೆಗಳು ಹಾಗೂ ಆರೋಪ-ಪ್ರತ್ಯಾರೋಪಗಳನ್ನು ಖುದ್ದು ರಾಹುಲ್‌ ಮತ್ತು ಮೋದಿ ಸಾರ್ವಜನಿಕ ವೇದಿಕೆಯಲ್ಲೇ ಪರಸ್ಪರ ಮುಖಾಮುಖೀಯಾಗಿ ಚರ್ಚಿಸಿದರೆ, ಜನರಿಗೆ ಇದರಿಂದ ಉಪಯೋಗವಾಗುತ್ತದೆ. ಹಾಗಾಗಿ ಈ ಇಬ್ಬರೂ ಸಾರ್ವಜನಿಕವಾಗಿ ಚರ್ಚೆ ನಡೆಸಬೇಕು ಎಂದು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಮದನ್‌ ಬಿ. ಲೋಕುರ್‌, ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎ.ಪಿ. ಶಾ ಹಾಗೂ ಹಿರಿಯ ಪತ್ರಕರ್ತ ಎನ್‌.ರಾಮ್‌ ಅವರು ಪ್ರಧಾನಿ ಮೋದಿ ಮತ್ತು ರಾಹುಲ್‌ಗೆ ಪತ್ರ ಬರೆದಿದ್ದರು. ಇದಕ್ಕೆ ಪ್ರತಿಯಾಗಿ ರಾಹುಲ್‌ ಟ್ವೀಟ್‌ ಮಾಡಿ, ಬಹಿರಂಗ ಚರ್ಚೆಗೆ ನೀಡಿರುವ ಆಹ್ವಾನವನ್ನು ಸ್ವೀಕರಿಸಿದ್ದೇನೆ. ಮೋದಿ ಅವರು ತಯಾರಿದ್ದರೆ ದಿನಾಂಕ ತಿಳಿಸಿ ಎಂದು  ಸವಾಲೆಸೆದಿದ್ದಾರೆ.

ಸ್ಪರ್ಧೆಗೆ ಹೆದರಿದವರಿಂದ ಚರ್ಚೆ ಸಾಧ್ಯವೇ?: ಬಿಜೆಪಿ ಲೇವಡಿ

ಬಹಿರಂಗ ಚರ್ಚೆಯ ಆಹ್ವಾನವನ್ನು ರಾಹುಲ್‌ ಒಪ್ಪಿಕೊಂಡಿದ್ದರ ಬಗ್ಗೆ ಬಿಜೆಪಿ ಲೇವಡಿ ಮಾಡಿದೆ. ಅಮೇಠಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲೂ ಹೆದರಿದವರು ಕೇಂದ್ರದಲ್ಲಿ ಸರಕಾರ ರಚಿಸುವುದರ ಬಗ್ಗೆ ಮಾತನಾಡುತ್ತಾರೆ ಎಂದು ರಾಹುಲ್‌ ವಿರುದ್ಧ ಬಿಜೆಪಿ ವಕ್ತಾರ ಸುಧಾಂಶು ತ್ರಿವೇದಿ ವ್ಯಂಗ್ಯವಾಡಿದ್ದಾರೆ. ಅಲ್ಲದೇ ದೇಶದ ಯಾವ ಸಮಸ್ಯೆಗಳ ಬಗ್ಗೆ ರಾಹುಲ್‌ಗೆ ಅರಿವಿದೆ, ಅವರು  ಪಕ್ಷದ ಅಧ್ಯಕ್ಷರೂ ಅಲ್ಲ, ವಿಪಕ್ಷದ ನಾಯಕರೂ ಅಲ್ಲ. ಇತ್ತೀಚೆಗೆ ಐಐಟಿಗಳ ಬಗ್ಗೆ ಮಾತನಾಡುವಾಗ ಮೇಲ್ಜಾತಿ ಮತ್ತು ಕೆಳಜಾತಿಗಳ ಬಗ್ಗೆ ರಾಹುಲ್‌ ಮಾತನಾಡಿ ಐಐಟಿಗಳಲ್ಲಿ ದಲಿತ ಪ್ರಾತಿನಿಧ್ಯ ಪ್ರಶ್ನಿಸಿದ್ದರು. ಆದರೆ, ಈ ಐಐಟಿಗಳನ್ನು ಜವಾಹರ್‌ಲಾಲ್‌ ನೆಹರೂ ಅವರೇ ವಿದೇಶಗಳ ಸಹಯೋಗದಲ್ಲಿ ನಿರ್ಮಿಸಿದ್ದರು. ರಾಹುಲ್‌ಗೆ ಇರುವ ಜ್ಞಾನದ ಮಟ್ಟವನ್ನು ನೋಡಿದರೆ ಸಾಕು, ಅವರೊಂದಿಗೆ ಚರ್ಚಿಸಬೇಕೇ, ಬೇಡವೇ ಎಂಬುದು ಅರ್ಥವಾಗುತ್ತದೆ ಎಂದು ತ್ರಿವೇದಿ ಹೇಳಿದ್ದಾರೆ.

ಮೋದಿ “ಟೆಂಪೋ ಬಿಲಿಯನೇರ್‌’ಗಳ “ಕೈಗೊಂಬೆ ರಾಜ’

Advertisement

“ನರೇಂದ್ರ ಮೋದಿ ಪ್ರಧಾನಿ ಅಲ್ಲ, ಅವರು “ರಾಜ’! ಟೆಂಪೋ ಬಿಲಿಯನೇರ್‌ಗಳ ಕೈಯಲ್ಲಿ ಗೊಂಬೆಯಂತೆ ಕುಣಿಯುವ ರಾಜ’ ಎಂದು ರಾಹುಲ್‌ ಗಾಂಧಿ ವಾಗ್ಧಾಳಿ ನಡೆಸಿದ್ದಾರೆ. ಅದಾನಿ ಮತ್ತು ಅಂಬಾನಿ ಕಡೆಯಿಂದ ಕಾಂಗ್ರೆಸ್‌ಗೆ ಟೆಂಪೋ ತುಂಬಾ ಹಣ ಬಂದಿದೆ ಎಂದು ಮೋದಿ ನೀಡಿದ್ದ ಹೇಳಿಕೆಗೆ ಶುಕ್ರವಾರ ಉತ್ತರಪ್ರದೇಶದ ಲಕ್ನೋದಲ್ಲಿ ತಾವು ನೀಡಿದ್ದ ತಿರುಗೇಟಿನ ಕೆಲವು ತುಣಕುಗಳನ್ನು ಶನಿವಾರ ಎಕ್ಸ್‌ನಲ್ಲಿ ರಾಹುಲ್‌ ಹಂಚಿಕೊಂಡಿದ್ದಾರೆ.  ಅದರಲ್ಲಿ “ಮೋದಿ ಪ್ರಧಾನಿ ಅಲ್ಲ, ರಾಜ! ಅವರ ಮುಂದೆ ಪ್ರಬಲರಾಗಿರುವ ಇಬ್ಬರೋ -ಮೂವರೋ ಉದ್ಯಮಿಗಳಿರುತ್ತಾರೆ. ಅವರನ್ನು ಬೆಳೆಸುವುದಷ್ಟೇ ಅವರ ಕೆಲಸ’ ಎಂದಿದ್ದಾರೆ.

ಬಿಜೆಪಿ ಎಂದರೆ “ಬಾಬು, ಜಗನ್‌, ಪವನ್‌’: ರಾಗಾ

ಟಿಡಿಪಿ, ವೈಎಸ್‌ಆರ್‌ ಕಾಂಗ್ರೆಸ್‌, ಜನಸೇನಾ ಪಕ್ಷವು ಬಿಜೆಪಿಯ “ಬಿ’ ಟೀಂ ಇದ್ದಂತೆ. “ಬಿ” ಅಂದರೆ ಬಾಬು (ಚಂದ್ರಬಾಬು ನಾಯ್ಡು), “ಜೆ’ ಎಂದರೆ ಜಗನ್‌,”ಪಿ’ ಎಂದರೆ ಪವನ್‌ ಕಲ್ಯಾಣ್‌. ಇವರ ರಿಮೋಟ್‌ ಕಂಟ್ರೋಲ್‌ ಮೋದಿ ಬಳಿ ಇದೆ ಎಂದು ಆಂಧ್ರದ ಕಡಪದ ಚುನಾವಣ ರ್ಯಾಲಿಯಲ್ಲಿ ಲೇವಡಿ ರಾಹುಲ್‌ ಗಾಂಧಿ ಲೇವಡಿ ಮಾಡಿದರು.

ಅಳುವುದನ್ನು ಬಿಟ್ಟು, ಇಂದಿರಾ ಧೈರ್ಯ ಅಳವಡಿಸಿಕೊಳ್ಳಿ: ಪ್ರಿಯಾಂಕಾ ವಾದ್ರಾ

ಮುಂಬಯಿ: “ನನ್ನನ್ನು ಎಲ್ಲರೂ ನಿಂದಿಸುತ್ತಾರೆ ಎನ್ನುತ್ತಾ ಮಕ್ಕಳಂತೆ ಅಳುವುದನ್ನು ಬಿಟ್ಟು, ಇಂದಿರಾ ಗಾಂಧಿ ಅವರಿಗಿದ್ದ ಧೈರ್ಯ, ಸ್ಥೈರ್ಯದ ಗುಣಗ ಳನ್ನು ನೀವು ಅಳವಡಿಸಿಕೊಳ್ಳಿ’ ಎಂದು ಮೋದಿಗೆ ಕೈ ನಾಯಕಿ ಪ್ರಿಯಾಂಕಾ ವಾದ್ರಾ ಸಲಹೆ ನೀಡಿದ್ದಾರೆ. ಮಹಾರಾಷ್ಟ್ರದ ನಂದೂರ್‌ಬರ್‌ನಲ್ಲಿ ರ್ಯಾಲಿಯಲ್ಲಿ ಮಾತನಾಡಿದ ಪ್ರಿಯಾಂಕಾ, “ಭ್ರಷ್ಟಾಚಾರದ ವಿರುದ್ಧ ನಾನೊಬ್ಬನೇ ಹೋರಾಡುತ್ತಿ ದ್ದೀನಿ ಎಂದು ಮೋದಿ ಹೇಳಿಕೊಳ್ಳುತ್ತಾರೆ. ಅವರ ಪಕ್ಷ ದವರೆಲ್ಲ ಮೋದಿ ಮಹಾನ್‌ ನಾಯಕ ಎಂದೂ ಹೇಳುತ್ತಾರೆ. ಆದರೆ ಮೋದಿ ಸಾರ್ವಜನಿಕವಾಗಿ ಬಂದು ಎಲ್ಲರೂ ನಿಂದಿಸುತ್ತಾರೆ ಎಂದು ಮಕ್ಕಳಂತೆ ಅಳುತ್ತಾರೆ. ಮೋದಿ ಜೀ ಹೀಗೆ ಅಳುವುದನ್ನು ಬಿಡಿ, ಪಾಕಿಸ್ಥಾನವನ್ನು ಇಬ್ಭಾಗವಾಗಿಸಿದ ದುರ್ಗೆಯಂಥ ಮಹಿಳೆ ಇಂದಿರಾ ಗಾಂಧಿ ಅವರ ಧೈರ್ಯ ಗುಣ ಅಳವಡಿಸಿಕೊಳ್ಳಿ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next