ಬೆಂಗಳೂರು: ಉತ್ತರ ಲೋಕಸಭಾ ಕ್ಷೇತ್ರದ ಸಂಸದನಾಗಿ, ಕೇಂದ್ರ ಸಚಿವನಾಗಿ ಐದು ವರ್ಷ ನಿರ್ವಹಿಸಿದ ಕಾರ್ಯ ತೃಪ್ತಿ ತಂದಿದೆ. ಈ ಚುನಾವಣೆಗೆ ಪಕ್ಷ ಹೇಳಿದಲ್ಲಿ ಸ್ಪರ್ಧೆ ಮಾಡುವೆ. ಹಾಗೇ ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವ ಸಾಮರ್ಥ್ಯವನ್ನೂ ಸೃಷ್ಟಿ ಮಾಡಲಾಗಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹೇಳಿದರು.
ಹೋಟೆಲ್ ಒಂದರಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ತಮ್ಮ ಐದು ವರ್ಷದ ಸಾಧನೆಯ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, ಬಿಜೆಪಿ ಚುನಾವಣೆಗೆ ಸಿದ್ಧವಾಗಿದೆ. ಪಕ್ಷದ ಕಾರ್ಯಕರ್ತರ ತಯಾರಿ, ಮತದಾರರಿಗೆ ಕೇಂದ್ರದ ಸಾಧನೆಗಳ ಕುರಿತು ತಿಳಿಸುವುದು ಹಾಗೂ ಶೇ.100ರಷ್ಟು ಮತದಾನ ಆಗುವಂತೆ ಪ್ರಯತ್ನ ನಡೆಸುವುದು ನಮ್ಮ ಗುರಿಯಾಗಿದೆ. ಐದು ತಿಂಗಳ ಹಿಂದಿನಿಂದಲೇ ಚುನಾವಣಾ ಕಾರ್ಯ ಆರಂಭಿಸಿದ್ದೇವೆ ಎಂದರು.
ಪ್ರತಿ ಭಾರಿಯೂ ಜನರಿಂದಲೇ ಮೌಲ್ಯಮಾಪನ ಮಾಡಲಾಗುತ್ತದೆ. ಐದು ವರ್ಷದ ಸಾಧನೆಯನ್ನು ಜನರ ಮುಂದೆ ತೆರೆದಿಟ್ಟಿದ್ದೇವೆ. ಚುನಾವಣಾ ಸ್ಪರ್ಧೆಗೆ ಇಳಿಯುವ ಮೊದಲು ಸಾಧನೆಯ ಪಟ್ಟಿಯನ್ನು ಜನರ ಮುಂದೆ ಇಡುವಂತೆ ಪಕ್ಷದ ಸೂಚನೆ ಇತ್ತು. ಅದರಂತೆ ಸಾಧನೆಯ ಪಟ್ಟಿಯನ್ನು ಜನರ ಮುಂದಿಟ್ಟಿದ್ದೇವೆ. ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರವೇ ಮತ್ತೂಮ್ಮೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಐದು ವರ್ಷ ಕೇಂದ್ರ ಸಚಿವನಾಗಿ ರಾಜ್ಯದ ಎಲ್ಲ ಸಮಸ್ಯೆಗಳಿಗೂ ಸ್ಪಂದಿಸಿದ್ದೇನೆ. ಕೇಂದ್ರದ ಮಂತ್ರಿಯಾಗಿ ನನ್ನ ಕರ್ತವ್ಯವನ್ನು ಸಮರ್ಥವಾಗಿ ನಿಭಾಯಿಸಿದ್ದೇನೆ. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರಕ್ಕೆ ಬಂದಿದ್ದ 25 ಕೋಟಿ ರೂ. ಅನುದಾನದಲ್ಲಿ 22.55 ಕೋಟಿ ರೂ.ಗಳ ಸಂಪೂರ್ಣ ವಿನಿಯೋಗ ಮಾಡಿದ್ದೇವೆ. 2.45 ಕೋಟಿ ರೂ.ಗಳ ಕಾಮಗಾರಿಗೂ ಚಾಲನೆ ನೀಡಲಾಗಿದೆ. ಕ್ಷೇತ್ರದಲ್ಲಿ ಬಹು ವರ್ಷದಿಂದ ಇದ್ದ ರಕ್ಷಣಾ ಇಲಾಖೆ ವ್ಯಾಪ್ತಿಯ 24 ಸಮಸ್ಯೆಗಳಿಗೆ ಪರಿಹಾರ ನೀಡಲಾಗಿದೆ ಎಂದರು.
ಸಾಧನೆ, ಅಭಿವೃದ್ಧಿಯ ಮಾಹಿತಿ: ರಸ್ತೆ ಕಾಮಗಾರಿ, ಮೇಲ್ಸೇತುವೆ, ಅಂಡರ್‌ಪಾಸ್ ಸೇರಿದಂತೆ ಹಲವು ಸಮಸ್ಯೆಗಳಿಗೆ ಮುಕ್ತಿ ನೀಡಲಾಗಿದೆ. ಕರ್ನಾಟಕ ಮುಕ್ತ ವಿವಿಗೆ ಮರುಜೀವ ನೀಡಿದ್ದೇವೆ. ಸಬ್‌ಅರ್ಬನ್ ರೈಲು ಯೋಜನೆಗೆ ರೈಲ್ವೆ ಸಚಿವನಾಗಿದ್ದಾಗಿಂದಲೇ ರೂಪುರೇಷೆ ಸಿದ್ಧಪಡಿಸಿದ್ದು, ಈಗ ಚಾಲನೆ ಸಿಗುತ್ತಿದೆ. ಕ್ಯಾನ್ಸರ್ ನಿವಾರಣೆಗೆ ಪೂರಕವಾದ 395 ಔಷಧಗಳು ಜನೌಷಧ ಮಳಿಗೆಗಳಲ್ಲಿ ದೊರೆಯುವಂತೆ ಮಾಡಿದ್ದೇವೆ.
ಯಶವಂತಪುರಕ್ಕೆ ಕೇಂದ್ರಿಯ ವಿದ್ಯಾಲಯ ತಂದಿದ್ದೇನೆ. ಆದರ್ಶ ಗ್ರಾಮ ಯೋಜನೆಯಲ್ಲಿ 12 ಗ್ರಾಮಗಳಿಗೆ ಮೂಲ ಸೌಕರ್ಯ ಕಲ್ಪಿಸಿ, ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಅತ್ಯುತ್ತಮ ಗ್ರಾಮಗಳು ಎಂಬ ಹೆಗ್ಗಳಿಕೆ ಸಿಕ್ಕಿದೆ. ಜೋಡಿ ರೈಲು ಮಾರ್ಗ, ವಿದ್ಯುದೀಕರಣ, ಬೆಂಗಳೂರು-ಮೈಸೂರು ನಡುವೆ ಹತ್ತು ಪಥದ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ ಎಂದು ತಮ್ಮ ಅವಧಿಯ ಸಾಧನೆಗಳು, ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು.
ಶಾಸಕರಾದ ಡಾ.ಸಿ.ಎನ್.ಅಶ್ವತ್ಥನಾರಾಯಣ, ಸುರೇಶ್ ಕುಮಾರ್, ವಿಧಾನ ಪರಿಷತ್ ಸದಸ್ಯರಾದ ಡಾ.ವೈ.ಎನ್.ನಾರಾಯಣ ಸ್ವಾಮಿ, ಲೇಹರ್ ಸಿಂಗ್, ಬಿಜೆಪಿ ಮುಖಂಡರಾದ ಅಶ್ವತ್ಥನಾರಾಯಣ, ನೆ.ಲ.ನರೇಂದ್ರಬಾಬು ಮೊದಲಾದವರು ಇದ್ದರು.
ಎಲ್ಲಾ ವಾರ್ಡ್‌ಗಳಲ್ಲೂ ಸಭೆ ಮಾಡಿದ್ದೇವೆ. ರೈಲ್ವೆ ಸಚಿವನಾಗಿ 21 ಹೊರ ರೈಲು ಬರುವಂತೆ ಮಾಡಿದ್ದೇನೆ. ಕಾನೂನು ಸಚಿವನಾಗಿ 100ಕ್ಕೂ ಅಧಿಕ ನಿರುಪಯುಕ್ತ ಕಾನೂನನ್ನು ತೆಗೆದುಹಾಕಿದ್ದೇನೆ. ಒಟ್ಟಾರೆಯಾಗಿ ಐದು ವರ್ಷದಲ್ಲಿ ಮಾಡಿದ ಸಾಧನೆ ತೃಪ್ತಿ ತಂದಿದೆ.
-ಡಿ.ವಿ.ಸದಾನಂದಗೌಡ, ಕೇಂದ್ರ ಸಚಿವ