ಲಿಂಗಸುಗೂರು: ವೀರಶೈವ ಧರ್ಮಕ್ಕೆ ಐದು ಸಾವಿರ ವರ್ಷಗಳ ಇತಿಹಾಸವಿದೆ. ರಂಭಾಪುರಿ, ಉಜ್ಜಯಿನಿ, ಕೇದಾರ, ಕಾಶೀ, ಶ್ರೀಶೈಲ ಈ ಪಂಚಪೀಠಗಳು ರಾಷ್ಟ್ರೀಯ ಮಹಾಪೀಠಗಳಾಗಿವೆ ಎಂದು ಕಾಶಿ ಜ್ಞಾನ ಸಿಂಹಾಸನ ಪೀಠದ ಜಗದ್ಗುರು ಶ್ರೀ ಡಾ| ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ನುಡಿದರು.
ತಾಲೂಕಿನ ದೇವರಭೂಪುರ ಬೃಹನ್ಮಠದಲ್ಲಿ ರವಿವಾರ ನಡೆದ ಅಮರೇಶ್ವರ ಗುರುಗಜದಂಡ ಶಿವಾಚಾರ್ಯರ 13ನೇ ಪುಣ್ಯಸ್ಮರಣೋತ್ಸವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಪೂಜ್ಯರು ಆಶೀರ್ವಚನ ನೀಡಿದರು.
ಪಂಚಪೀಠಗಳು ಸಮಸ್ತ ಮನುಕುಲದ ಉದ್ಧಾರಕ್ಕಾಗಿ ಅವತಾರ ತಾಳಿ, ವರ್ಗ, ವರ್ಣ, ಜಾತಿ, ಮತ, ಭಾಷೆಗಳ ಭೇದವಿಲ್ಲದೆ ಎಲ್ಲ ವರ್ಗದ ಜನರಿಗೆ ಸಮಾನತೆ ಸಾರುವ ಲಿಂಗದಿಧೀಕ್ಷೆ, ಜ್ಞಾನಾರ್ಜನೆ, ಸಂಸ್ಕಾರ ನೀಡುತ್ತಿವೆ. ಪಂಚಪೀಠಗಳು ಮತ್ತು ಶಾಖಾ ಮಠಗಳು ಸಮಾಜದ ಉದ್ಧಾರ ಕಾರ್ಯಮಾಡುತ್ತಿವೆ ಎಂದರು.
ಇಂತಹ ಶಾಖಾ ಮಠಗಳ ಪೈಕಿ ಉಜ್ಜಯಿನಿ ಪೀಠದ ಶಾಖಾ ಮಠವಾದ ದೇವರಭೂಪುರದ ಬೃಹನ್ಮಠವು ಶಿವನೇ ಬಾಲಕನ ರೂಪದಲ್ಲಿ ಧರೆಗೆ ಬಂದು ಶ್ರೀಮಠದ ಗಜದಂಡ ಶಿವಾಚಾರ್ಯರಿಂದ ಲಿಂಗ ದೀಕ್ಷೆ, ವಿದ್ಯಾಭ್ಯಾಸ ಪಡೆದ ಶ್ರೇಷ್ಠ ಪ್ರಾಚೀನ ಮಠವಾಗಿದೆ. ಅಲ್ಲದೆ ಶ್ರೀಮಠದಲ್ಲಿ ಸಿದ್ಧಾರೂಢರು 12 ವರ್ಷಗಳ ಕಾಲ ಸೇವೆ ಮಾಡಿ ಗುರುವಿನಿಂದ ದೀಕ್ಷೆ ಪಡೆದು ಪ್ರಸಿದ್ಧರಾಗಿದ್ದಾರೆ. ಇಂತಹ ಗುರು-ಶಿಷ್ಯ ಪರಂಪರೆಯ ಸಾಮರಸ್ಯ ಸಾರಿದ ಶ್ರೀಮಠ ಇನ್ನು ಬೆಳೆಯಲಿ ಎಂದು ಆಶಿಸಿದರು.
ಭೂಮಿಯ ಮೇಲಿನ 84 ಲಕ್ಷ ಚರಾಚರ ಜೀವರಾಶಿಗಳಲ್ಲಿ ಮಾನವ ಜನ್ಮ ಶ್ರೇಷ್ಠವೆಂದೆನಿಸಿದೆ. ಮನುಷ್ಯ ಜನ್ಮ ತಾಳಿದ ಮೇಲೆ ದೇವರು, ಗುರು ಮತ್ತು ತಂದೆ-ತಾಯಿಗಳ ಋಣದಲ್ಲಿರುತ್ತಾನೆ. ಈ ಎಲ್ಲರ ಋಣದಿಂದ ಮುಕ್ತರಾಗಲು ದೇವರ ಸ್ಮರಣೆ, ಗುರು ಮತ್ತು ತಂದೆ-ತಾಯಿಗಳ ಸೇವೆಯಲ್ಲಿ ತೊಡಗಬೇಕು. ಇವರ ಸೇವೆಯಿಂದ ಮಾತ್ರ ಸನ್ಮಾರ್ಗ ಸಾಧ್ಯ ಎಂದರು.
ಪ್ರತಿನಿತ್ಯ ದೇವರನ್ನು ಸ್ಮರಿಸಬೇಕು. ಜ್ಞಾನಾರ್ಜನೆ ನೀಡಿದ ಗುರುವಿನ ಮತ್ತು ಹೆತ್ತು ಹೊತ್ತು ಸಾಕಿ ಸಲುಹಿದ ತಂದೆ-ತಾಯಿಗಳ ಸೇವೆ ಮಾಡಬೇಕು. ಅಂದಾಗ ಸನ್ಮಾರ್ಗದಲ್ಲಿ ನಡೆಯಲು ಸಾಧ್ಯ ಎಂದರು.
ಅಮರೇಶ್ವರ ಅಭಿನವ ಗುರುಗಜದಂಡ ಶಿವಾಚಾರ್ಯರು, ಮರಿಸಿದ್ಧಲಿಂಗ ಶಿವಾಚಾರ್ಯರು, ಗುರುಲಿಂಗ ಶಿವಾಚಾರ್ಯರು, ಪ್ರಶಾಂತಸಾಗರ ಶಿವಾಚಾರ್ಯರು, ಮುರುಘೇಂದ್ರ ಸ್ವಾಮೀಜಿ, ಬೆಟ್ಟಪ್ಪಯ್ಯ ತಾತನವರು, ಚಂದ್ರಶೇಖರಯ್ಯ ಶ್ರೀಗಳು, ಮಾಜಿ ಸಚಿವ ರಾಜಾ ಅಮರೇಶ್ವರ ನಾಯಕ, ಗ್ರಾಪಂ ಮಾಜಿ ಅಧ್ಯಕ್ಷ ರಾಜಾ ಸೋಮನಾಥ ನಾಯಕ, ಮುಖಂಡರಾದ ಆರ್. ಎಸ್.ನಾಡಗೌಡ, ಸಿದ್ಧನಗೌಡ ಪಾಟೀಲ, ಗಜೇಂದ್ರ ನಾಯಕ, ಶರಣಯ್ಯ ಗೊರೇಬಾಳ, ವಲಿಬಾಬು ಸೇರಿದಂತೆ ಇತರರು ಇದ್ದರು.
ಇತ್ತೀಚಿನ ದಿನಮಾನಗಳಲ್ಲಿ ತಂದೆ-ತಾಯಿ ಗಳಿಸಿದ ಆಸ್ತಿ ಬೇಕು. ಆದರೆ ಅವರು ಬೇಡ ಎಂಬ ಮನೋಭಾವ ಮಕ್ಕಳಲ್ಲಿ ಹೆಚ್ಚುತ್ತಿರುವುದು ವಿಷಾದನೀಯ. ತಂದೆ-ತಾಯಿಯನ್ನು ದೇವರಂತೆ ಕಂಡಾಗ ಪುಣ್ಯ ಪ್ರಾಪ್ತಿ ಆಗುತ್ತದೆ. ಜಗದ್ಗುರು ಶ್ರೀ ಡಾ| ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಕಾಶಿ ಜ್ಞಾನಸಿಂಹಾಸನಾಧೀಶ್ವರ ಪೀಠ