Advertisement

ದೀಕ್ಷಾಭೂಮಿ ಯಾತ್ರೆಗೆ ಈ ಬಾರಿ ಐದು ಸಾವಿರ ಅನುಯಾಯಿಗಳು: ಸಚಿವ ಕೋಟ

04:22 PM Oct 03, 2022 | Team Udayavani |

ಬೆಂಗಳೂರು: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಬೌದ್ಧಧರ್ಮದ ದೀಕ್ಷೆ ಪಡೆದ ಸ್ಥಳವಾದ ಮಹಾರಾಷ್ಟ್ರದ ನಾಗಪುರ ದೀಕ್ಷಾಭೂಮಿ ಯಾತ್ರೆಗೆ ಈ ಬಾರಿ ಕರ್ನಾಟಕದಿಂದ ಸುಮಾರು 5 ಸಾವಿರ ಅನುಯಾಯಿಗಳನ್ನು ಸರ್ಕಾರದ ವತಿಯಿಂದ ಕಳುಹಿಸಿಕೊಡಲಾಗುತ್ತಿದೆ ಎಂದು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

Advertisement

ಬೇರೆ ಧರ್ಮದವರು ವಿವಿಧ ಕ್ಷೇತ್ರಗಳಿಗೆ ಯಾತ್ರೆ ಮಾಡುವ ಮಾದರಿಯಲ್ಲಿ ಡಾ.ಅಂಬೇಡ್ಕರ್ ಅವರ ಅನುಯಾಯಿಗಳು ಪ್ರತಿ ವರ್ಷವೂ ಅಕ್ಟೋಬರ್ ತಿಂಗಳಿನಲ್ಲಿ ನಾಗಪುರದಲ್ಲಿ ನಡೆಯುವ ದಮ್ಮ ಪ್ರವರ್ತನಾ ದಿನ ಕಾರ್ಯಕ್ರಮಕ್ಕೆ ದೀಕ್ಷಾಯಾತ್ರೆ ಕೈಗೊಳ್ಳುವುದು ವಾಡಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಬಾಬಾ ಸಾಹೇಬರ ಅನುಯಾಯಿಗಳನ್ನು ಪ್ರತಿ ವರ್ಷವೂ ದೀಕ್ಷಾಯಾತ್ರೆಗೆ ಕಳುಹಿಸಲಾಗುತ್ತಿದ್ದು ಈ ವರ್ಷ ಐದು ಸಾವಿರ ಅನುಯಾಯಿಗಳನ್ನು ನಾಗಪುರ ದೀಕ್ಷಾಯಾತ್ರೆಗೆ ಕಳುಹಿಸುತ್ತಿರುವುದಾಗಿ ತಿಳಿಸಿದರು.

ಇದನ್ನೂ ಓದಿ : ಅಲ್ಪಸಂಖ್ಯಾತ ಸಚಿವಾಲಯ ರದ್ದು ವರದಿ : ಕೇಂದ್ರ ಸರಕಾರ ಸ್ಪಷ್ಟನೆ

ಈ ಹಿಂದೆ ಸುಮಾರು 2 ಸಾವಿರ ಜನರನ್ನು ಯಾತ್ರೆಗೆ ಕಳುಹಿಸುವ ವ್ಯವಸ್ಥೆಯನ್ನು ಇಲಾಖೆ ರೂಪಿಸಿತ್ತು. ಈ ಮಧ್ಯೆ ಕೋವಿಡ್ ಕಾರಣದಿಂದ ಕಳೆದೆರಡು ವರ್ಷ ಯಾತ್ರೆ ಮಾಡಿಸಲು ಸಾಧ್ಯವಾಗಿರಲಿಲ್ಲ. ಈ ಬಾರಿ ಐದು ಸಾವಿರ ಅನುಯಾಯಿಗಳು ರಾಜ್ಯದ ಎಲ್ಲ ಜಿಲ್ಲೆಗಳಿಂದ ತೆರಳಲು ವ್ಯವಸ್ಥೆ ಮಾಡಲಾಗಿದೆ ಎಂದರು.

ಯಾತ್ರೆ ಕೈಗೊಳ್ಳುವ ಅನುಯಾಯಿಗಳು ಆನ್ ಲೈನ್ ಮೂಲಕ ನೋಂದಣಿ ಮಾಡಿದ್ದು ಆಯಾ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರು ಯಾತ್ರಿಗಳನ್ನು ಸುರಕ್ಷಿತವಾಗಿ ನಾಗಪುರ ದೀಕ್ಷಾಯಾತ್ರೆಗೆ ಕರೆದೊಯ್ಯಲು ಬಸ್ ವ್ಯವಸ್ಥೆ ಕಲ್ಪಿಸಲು ಆದೇಶಿಸಲಾಗಿದೆ. ರಾಜ್ಯಾದ್ಯಂತ ಈ ಯೋಜನೆಗಾಗಿ ಸುಮಾರು 2.5 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next