ಹುಬ್ಬಳ್ಳಿ: ಚಂದ್ರಶೇಖರ ಗುರೂಜಿ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸಿಪಿ ಅಧಿಕಾರಿಯೊಬ್ಬರಿಗೆ ತನಿಖೆ ಹೊಣೆ ನೀಡಲಾಗಿದ್ದು, ದುಷ್ಕರ್ಮಿಗಳ ಪತ್ತೆಗೆ ಐದು ತಂಡಗಳನ್ನು ರಚಿಸಲಾಗಿದೆ ಎಂದು ಮಹಾನಗರ ಪೊಲೀಸ್ ಆಯುಕ್ತ ಲಾಭೂ ರಾಮ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಂದ್ರಶೇಖರ ಗುರೂಜಿ ಅವರಿಗೆ ಕರೆ ಮಾಡಿದ ದುಷ್ಕರ್ಮಿಗಳು ಇಲ್ಲಿಗೆ ಕರೆಯಿಸಿಕೊಂಡಿದ್ದಾರೆ. ಹೋಟೆಲ್ ಗೆ ಆಗಮಿಸಿದಾಗ ಓರ್ವ ಕಾಲಿಗೆ ನಮಸ್ಕಾರ ಮಾಡಿದ್ದಾನೆ. ಇನ್ನೊಬ್ಬ ಏಕಾಏಕಿ ಚಾಕುವಿನಿಂದ ದಾಳಿ ನಡೆಸಿದ್ದಾನೆ. ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳಲಾಗಿದೆ. ಎಸಿಪಿ ವಿನೋದ ಮುಕ್ತೇದಾರ ಆವರನ್ನು ತನಿಖಾಧಿಕಾರಿಯನ್ನಾಗಿ ನೇಮಿಸಲಾಗಿದ್ದು, ದುಷ್ಕರ್ಮಿಗಳ ಪತ್ತೆಗಾಗಿ ಐದು ತಂಡ ರಚಿಸಲಾಗಿದೆ ಎಂದರು.
ಇದನ್ನೂ ಓದಿ:‘ಮಾನವ ಗುರು’ ಚಂದ್ರಶೇಖರ್ ಗುರೂಜಿ ಹತ್ಯೆ ಹಿಂದೆ “ಹೆಣ್ಣು – ಮಣ್ಣು” ಶಂಕೆ?
ಮಹಾನಗರದ ಎಲ್ಲಾ ಕಡೆ ನಾಕಾಬಂದಿ ಹಾಕಲಾಗಿದೆ. ಅಕ್ಕಪಕ್ಕದ ಜಿಲ್ಲೆಗಳ ಪೊಲೀಸರಿಗೂ ಮಾಹಿತಿ ನೀಡಲಾಗಿದೆ. ತನಿಖೆ ನಂತರ ಕೊಲೆಗೆ ಕಾರಣ ಏನು ಎಂಬುವುದು ಗೊತ್ತಾಗಲಿದೆ. ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದರು.
ಇದನ್ನೂ ಓದಿ: ಚಂದ್ರಶೇಖರ್ ಗುರೂಜಿ ಹತ್ಯೆ: ‘ನಮಸ್ಕಾರ ಗುರೂಜಿ’ ಎಂದು ಕಾಲಿಗೆರಗಿ ಚುಚ್ಚಿ ಚುಚ್ಚಿ ಕೊಂದರು!