Advertisement

Five State Election: ಕಾಂಗ್ರೆಸ್‌ನಲ್ಲಿ ಸತ್ಯ ಹೇಳಿದವರಿಗೆ ಉಳಿಗಾಲವಿಲ್ಲ- ಮೋದಿ ವಾಗ್ಧಾಳಿ

10:37 PM Nov 22, 2023 | Pranav MS |

ಜೈಪುರ/ಚಂಡೀಗಢ: ಕಾಂಗ್ರೆಸ್‌ನಲ್ಲಿ ಸತ್ಯ ಹೇಳಿದವರಿಗೆ ಸ್ಥಾನ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಕಟುವಾಗಿ ಟೀಕಿಸಿದ್ದಾರೆ. ನ.25ರಂದು ರಾಜಸ್ಥಾನದಲ್ಲಿ ಮತದಾನ ನಡೆಯಲಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಭಿಲ್ವಾರ ಜಿಲ್ಲೆಯ ಕೊಟ್ರಿ ಎಂಬಲ್ಲಿ ಬುಧವಾರ ಆಯೋಜಿಸಲಾಗಿದ್ದ ಸಾರ್ವಜನಿಕ ರ್ಯಾಲಿಯಲ್ಲಿ ಮಾತನಾಡಿದರು.

Advertisement

“ಕಾಂಗ್ರೆಸ್‌ನಲ್ಲಿ ನಿಷ್ಠಾವಂತರಿಗೆ ಮತ್ತು ಸತ್ಯ ಹೇಳಿದವರಿಗೆ ಸ್ಥಾನ ಇಲ್ಲ. ವಿಶೇಷವಾಗಿ ಗಾಂಧಿ ಕುಟುಂಬದ ಮುಂದೆ ಸತ್ಯ ಹೇಳಿದವರಿಗೆ ಅಲ್ಲಿ ಉಳಿಗಾಲವೇ ಇಲ್ಲ. ರಾಜೇಶ್‌ ಪೈಲಟ್‌ ಗಾಂಧಿ ಕುಟುಂಬಕ್ಕೆ ಸವಾಲು ಹಾಕಿದ್ದರು. ಆದರೆ, ಅವರ ಉದ್ದೇಶ ಒಳ್ಳೆಯದಾಗಿತ್ತು. ಅದಕ್ಕಾಗಿ ಕಾಂಗ್ರೆಸ್‌ ವರಿಷ್ಠರು ಶಿಕ್ಷೆ ವಿಧಿಸಿದರು. ಅದೇ ನಿಲುವನ್ನು ಸಚಿನ್‌ ಪೈಲಟ್‌ ವಿಚಾರದಲ್ಲೂ ಅನುಸರಿಸಲಾಗುತ್ತಿದೆ’ ಎಂದು ಪ್ರಧಾನಿ ಟೀಕಿಸಿದ್ದಾರೆ.

“ಭಯೋತ್ಪಾದಕರು, ಗಲಾಟೆ ಮಾಡುವವರು, ಅಪರಾಧಿಗಳ ವಿರುದ್ಧ ಆ ಪಕ್ಷ ದೃಢ ನಿಲುವು ತಳೆಯುವುದೇ ಇಲ್ಲ. ಜತೆಗೆ ಭ್ರಷ್ಟಾಚಾರ ನಡೆಸುವುದೇ ಕಾಂಗ್ರೆಸ್‌ ನಿಲುವು. ರಾಜಸ್ಥಾನದಲ್ಲಿಯೂ ಅದನ್ನೇ ಕಾಂಗ್ರೆಸ್‌ ಅನುಸರಿಸಿದೆ’ ಎಂದು ಪ್ರಧಾನಿ ದೂರಿದ್ದಾರೆ.

ರಾಜಸ್ಥಾನದಲ್ಲಿ ಕೇಂದ್ರ ಸರ್ಕಾರದ ಉತ್ತಮ ಯೋಜನೆಗಳು ಪರಿಣಾಮಕಾರಿಯಾಗಿ ಅನುಷ್ಠಾನವಾಗಬೇಕಾದರೆ ಕಾಂಗ್ರೆಸ್‌ ಸರ್ಕಾರ ತೊಲಗಬೇಕು ಎಂದರು. ಕಮಲದ ಗುರುತಿಗೆ ನೀಡುವ ಒಂದು ಮತ ಈ ಉದ್ದೇಶ ಸಾಕಾರಗೊಳಿಸಲಿದೆ ಎಂದು ನರೇಂದ್ರ ಮೋದಿ ಮನವಿ ಮಾಡಿದರು.

ಜಾತಿ ಗಣತಿ ನಡೆಸುತ್ತೇವೆ: ರಾಜಸ್ಥಾನದ ಧೋಲ್‌ಪುರದಲ್ಲಿ ಮಾತನಾಡಿದ ವಯನಾಡ್‌ ಸಂಸದ ರಾಹುಲ್‌ ಗಾಂಧಿ “ಹಾಲಿ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆದ್ದು ಅಧಿಕಾರ ಉಳಿಸಿಕೊಂಡರೆ ಜಾತಿಗಣತಿ ಕೈಗೆತ್ತಿಕೊಳ್ಳಲಿದ್ದೇವೆ’ ಎಂದರು. ದೇಶದ ಸೇನಾಪಡೆಯಲ್ಲಿ ಅಗ್ನಿಪಥ ಯೋಜನೆ ಅನುಷ್ಠಾನಗೊಳಿಸಿದ್ದನ್ನು ಖಂಡಿಸಿದ ರಾಹುಲ್‌ ಗಾಂಧಿ, ದೇಶ ಸೇವೆಗಾಗಿ ಸೇನೆಗೆ ಸೇರಬೇಕು ಎಂದು ಕನಸು ಕಂಡಿದ್ದ ಯುವಕರ ಕನಸನ್ನು ಕೇಂದ್ರ ಸರ್ಕಾರ ನುಚ್ಚು ನೂರುಗೊಳಿಸಿದೆ ಎಂದು ಆರೋಪಿಸಿದರು.

Advertisement

ರಾಹುಲ್‌ ಎಂದರೇ ಅಪಶಕುನ: ವಿಶ್ವಕಪ್‌ ಕ್ರಿಕೆಟ್‌ ಫೈನಲ್‌ನಲ್ಲಿ ಆಸ್ಟ್ರೇಲಿಯ ವಿರುದ್ಧ ಭಾರತ ಸೋತು ಹೋಗಲು ಪ್ರಧಾನಿ ಮೋದಿ ಕಾರಣ ಎಂದು ಟೀಕಿಸಿದ್ದ ರಾಹುಲ್‌ ಗಾಂಧಿ ವಿರುದ್ಧ ಹರ್ಯಾಣ ಗೃಹಸಚಿವ ಅನಿಲ್‌ ವಿಜ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್‌ ನಾಯಕ ರಾಹುಲ್‌ ಎಂದರೇ ಅವರ ಪಕ್ಷಕ್ಕೆ ಅಪಶಕುನ. ಅವರು ಕಾಂಗ್ರೆಸ್‌ ಪ್ರಧಾನ ನಾಯಕರಾಗಿ ಹೊರಹೊಮ್ಮಿದ ದಿನದಿಂದ ಆ ಪಕ್ಷಕ್ಕೆ ಹಿನ್ನಡೆ ಉಂಟಾಗುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ.

ಪಾಪಗಳಿಗೆ ಪ್ರಾಯಶ್ಚಿತ್ತ:
ಹಣಕಾಸು ಅಕ್ರಮಕ್ಕೆ ಸಂಬಂಧಿಸಿದಂತೆ ನ್ಯಾಷನಲ್‌ ಹೆರಾಲ್ಡ್‌ಗೆ ಸೇರಿದ 751.9 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿಗೊಳಿಸಿದ ಇಡಿ ಕ್ರಮವನ್ನು ಬಿಜೆಪಿ ನಾಯಕ ರವಿಶಂಕರ ಪ್ರಸಾದ್‌ ಸಮರ್ಥಿಸಿಕೊಂಡಿದ್ದಾರೆ. ದಿನಪತ್ರಿಕೆಗೆ ಸೇರಿದ ಆಸ್ತಿಯನ್ನು, ವೈಯಕ್ತಿಕ ಆಸ್ತಿಯಂತೆ ಪರಿವರ್ತಿಸಿಕೊಂಡು ಗಾಂಧಿ ಕುಟುಂಬ ಸದಸ್ಯರು ದುರುಪಯೋಗ ಮಾಡಿದ್ದಾರೆ. ಹೀಗಾಗಿ, ಅವರು ತಮ್ಮ ಪಾಪಗಳಿಗೆ ಪ್ರಾಯಶ್ಚಿತ ಅನುಭವಿಸಬೇಕು ಎಂದರು ಪ್ರಸಾದ್‌.

ಇನ್ಸ್‌ಪೆಕ್ಟರ್‌ಗೆ ಬೆದರಿಕೆ, ಅಸಾದುದ್ದೀನ್‌ ಮೇಲೆ ಕೇಸ್‌
ಹೈದರಾಬಾದ್‌ನಲ್ಲಿ ನಡೆಯುತ್ತಿದ್ದ ಚುನಾವಣಾ ರ್ಯಾಲಿಯಲ್ಲಿ ಸಮಯದ ಮಿತಿ ನೆನಪಿಸಿದ ಪೊಲೀಸ್‌ ಇನ್ಸ್‌ಪೆಕ್ಟರ್‌ ಒಬ್ಬರಿಗೆ ಎಂಐಎಂ ನಾಯಕ ಅಸಾದುದ್ದೀನ್‌ ಒವೈಸಿ ಸಹೋದರ ಅಕ್ಬರುದ್ದೀನ್‌ ಒವೈಸಿ ಬೆದರಿಕೆ ಹಾಕಿದ್ದಾರೆ. ಘಟನೆಯ ವಿಡಿಯೊ ವೈರಲ್‌ ಆಗಿದೆ. ಅದರಲ್ಲಿ ದಾಖಲಾಗಿರುವ ಮಾತುಗಳ ಪ್ರಕಾರ ಅಕºರುದ್ದೀನ್‌ ಅವರು “ಇನ್ಸ್‌ಪೆಕ್ಟರ್‌ ಸಾಹೇಬರೇ. ನನ್ನ ಬಳಿಯೂ ವಾಚ್‌ ಇದೆ. ನೀವು ಇಲ್ಲಿಂದ ಹೊರಡಿ. ನಾವು ಕೈಸನ್ನೆ ಮಾಡಿದರೆ ಸಾಕು. ನೀವೆಲ್ಲರೂ ಇಲ್ಲಿಂದ ಓಡಿಹೋಗಬೇಕಾಗದ ಸ್ಥಿತಿ ಬರುತ್ತದೆ’ ಎಂದಿದ್ದಾರೆ. ಕರ್ತವ್ಯನಿರತ ಪೊಲೀಸ್‌ ಅಧಿಕಾರಿಗೆ ಬೆದರಿಕೆ ಆರೋಪದ ಹಿನ್ನೆಲೆಯಲ್ಲಿ ಅಕºರುದ್ದೀನ್‌ ವಿರುದ್ಧ ಕೇಸು ದಾಖಲಿಸಲಾಗಿದೆ. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ತೆಲಂಗಾಣ ಬಿಜೆಪಿ ಘಟಕ ಟ್ವೀಟ್‌ ಮಾಡಿ “ದಶಕಗಳ ಕಾಲ ಬಿಆರ್‌ಎಸ್‌ ಮತ್ತು ಕಾಂಗ್ರೆಸ್‌ ಬೆಂಬಲದಿಂದ ಎಂಐಎಂ ಅಪರಾಧಿಗಳ ಆಶ್ರಯ ಕೇಂದ್ರವಾಗಿದೆ. ಆ ಒಕ್ಕೂಟಕ್ಕೆ ಸೂಕ್ತ ಪಾಠ ಕಲಿಸುವ ಕೆಲಸ ಮಾಡಬೇಕಾಗಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಈ ಒಕ್ಕೂಟವನ್ನು ಕೆಡವಿ ಹಾಕಲಾಗುತ್ತದೆ’ ಎಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next