ಬೆಂಗಳೂರು: ಆಶ್ರಯ ನೀಡುವ ನೆಪದಲ್ಲಿ ಅಪ್ರಾಪ್ತೆಯನ್ನು ವೇಶ್ಯಾವಾಟಿಕೆಗೆ ತಳ್ಳಿದ ಆರೋಪದ ಮೇಲೆ ಸಂತ್ರಸ್ತೆಯ ತಾಯಿಯ ಸ್ನೇಹಿತೆ ಸೇರಿ ಐವರು ಆರೋಪಿಗಳನ್ನು ಪುಟ್ಟೇನಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಸಂತ್ರಸ್ತೆಯ ತಾಯಿಯ ಸ್ನೇಹಿತೆ ಆಶಾ, ಈಕೆಯ ಪತಿ ವೀರೇಶ್, ಸಂಬಂಧಿ ಜಸ್ಸಿಕಾ, ಭರತ್ ಹಾಗೂ ಮುರುಳಿ ಎಂಬುವವರನ್ನು ಬಂಧಿಸಿದ್ದು, ಆರೋಪಿಗಳ ವಿರುದ್ಧ ಪೊಕೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣ ಸಂಬಂಧ ನೀಡಿರುವ ದೂರಿನಲ್ಲಿ ಇನ್ನೂ ಮೂವರು ಆರೋಪಿಗಳ ಹೆಸರಿದ್ದು, ಅವರನ್ನು ಶೀಘ್ರವೇ ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರು ಮೂಲದ ಸಂತ್ರಸ್ತೆಯ ತಾಯಿ 2010ರಲ್ಲಿ ಮೃತಪಟ್ಟಿದ್ದು, ಬಳಿಕ ಮಾವ ಸಗಾಯ್ ರಾಜ್ ಹಾಗೂ ಅತ್ತೆ ಮೇರಿ ಜತೆ ದೊರೆಸ್ವಾಮಿ ಪಾಳ್ಯದ ಅವರ ಮನೆಯಲ್ಲಿ ಸಂತ್ರಸ್ತೆ ವಾಸವಿದ್ದಳು. ಕೆಲ ದಿನಗಳ ಬಳಿಕ ಸಂತ್ರಸ್ತೆಯ ತಾಯಿಯ ಸ್ನೇಹಿತೆ ಆಶಾ ಬಂದು, ಆಕೆಗೆ ನಾನು ಆಶ್ರಯ ನೀಡುತ್ತೇನೆ ಎಂದು ಹೇಳಿದ್ದರು. ಹೀಗಾಗಿ ಸಗಾಯ್ ರಾಜ್ ಬಾಲಕಿಯನ್ನು ಆಶಾ ಜತೆ ಕಳುಹಿಸಿಕೊಟ್ಟಿದ್ದರು.
ಸಂತ್ರಸ್ತೆ ಕೆಲ ತಿಂಗಳ ಕಾಲ ಆಶಾಳ ಮನೆಯಲ್ಲಿ ವಾಸವಿದ್ದಳು. ಈ ವೇಳೆ ಆಶಾಳ ಪತಿ ವೀರೇಶ್ ಆಕೆಯ ಮೇಲೆ ಹಲವು ಬಾರಿ ಅತ್ಯಾಚಾರವೆಸಗಿದ್ದ. ಇದು ಗೊತ್ತಿದ್ದರೂ ಸುಮ್ಮನಿದ್ದ ಆಶಾ, ನಂತರ ಸಂತ್ರಸ್ತೆಯನ್ನು ಜೆಸ್ಸಿಕಾ ಎಂಬ ತನ್ನ ಸಂಬಂಧಿ ಮನೆಗೆ ಕಳುಹಿಸಿಕೊಟ್ಟಿದ್ದಳು. ಆದರೆ, ಹಣದಾಸೆಗೆ ಬಿದ್ದ ಜೆಸ್ಸಿಕಾ, ಅಪ್ರಾಪ್ತೆಯನ್ನು ವೇಶ್ಯಾವಾಟಿಕೆ ದಂಧೆಗೆ ದೂಡಿ, ಹಣ ಕೊಟ್ಟವರ ಜತೆ ಆಕೆಯನ್ನು ಕಳುಹಿಸುತ್ತಿದ್ದಳು. ಜಸ್ಸಿಕಾಳ ಕಾರು ಚಾಲಕ ಮುರಳಿ ಕೂಡ ಯುವತಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂದು ತಿಳಿದುಬಂದಿದೆ.
ಕೆಲ ಸಮಯದ ಬಳಿಕ ಇವರಿಂದ ತಪ್ಪಿಸಿಕೊಂಡ ಸಂತ್ರಸ್ತೆ, ತಮಿಳುನಾಡಿನ ವಿಳ್ಳುಪುರಂಗೆ ತೆರಳಿ ಮನೆಯೊಂದರಲ್ಲಿ ಆಶ್ರಯ ಪಡೆದಿದ್ದಳು. ಆದರೆ, ಆಶಾಳ ಪತಿ ವೀರೇಶ್‌ನ ಸಂಬಂಧಿ ಭರತ್ ಎಂಬಾತ ವಿಳ್ಳುಪುರಂಗೆ ತೆರಳಿ, ಮನೆಗೆ ನುಗ್ಗಿ ಸಂತ್ರಸ್ತೆ ಮೇಲೆ ಹಲ್ಲೆ ನಡೆಸಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ತಮಿಳುನಾಡಿನ ವಿಳ್ಳುಪುರಂ ಠಾಣೆ ಪೊಲೀಸರು ಸಂತ್ರಸ್ತೆಯನ್ನು ರಕ್ಷಿಸಿ ಮಕ್ಕಳ ರಕ್ಷಣಾ ಸಮಿತಿಗೆ ಒಪ್ಪಿಸಿದ್ದರು. ಅನಂತರ ಆಕೆಯನ್ನು ಬೆಂಗಳೂರಿನ ಮಕ್ಕಳ ರಕ್ಷಣಾ ಸಮಿತಿಗೆ ಸ್ಥಳಾಂತರಿಸಲಾಗಿತ್ತು.
ಇದೀಗ ನಗರದ ಬಾಲಗೃಹ ಒಂದರಲ್ಲಿ ಆಶ್ರಯ ಪಡೆದಿರುವ ಸಂತ್ರಸ್ತೆ ನಡೆದ ಘಟನೆಗಳನ್ನು ಪೊಲೀಸರಿಗೆ ವಿವರಿಸಿದ್ದಾಳೆ. ಆಶಾಳ ಮನೆಯಲ್ಲಿ ತನ್ನ ಮೇಲೆ ದೌರ್ಜನ್ಯ ನಡೆಯುತ್ತಿರುವ ವಿಷಯ ತಿಳಿದಿದ್ದರೂ, ಅತ್ತೆ ಮೇರಿ ಹಾಗೂ ಮಾವ ಸಗಾಯ್ ರಾಜ್ ತನ್ನನ್ನು ಮನೆಗೆ ಕರೆದುಕೊಂಡು ಹೋಗದೆ ನಿರ್ಲಕ್ಷ್ಯವ ವಹಿಸಿದ್ದಾರೆ ಎಂದು ವಿವರಿಸಿರುವ ಸಂತ್ರಸ್ತೆ, ತನ್ನ ಅತ್ತೆ, ಮಾವ, ತಾಯಿಯ ಸ್ನೇಹಿತೆ ಸೇರಿದಂತೆ 8 ಮಂದಿ ವಿರುದ್ಧ ಪುಟ್ಟೇನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಅದರಂತೆ ಪೊಲೀಸರು ಆರೋಪಿಗಳ ವಿರುದ್ಧ ಪೊಕೊÕà ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.