ಬೆಂಗಳೂರು: ಎಂಜಲು ಬಿದ್ದ ವಿಚಾರಕ್ಕೆ ಯುವಕನ ಮೇಲೆ ಹಲ್ಲೆ ನಡೆಸಿ ಕೊಲೆಗೈದಿದ್ದ ಐವರು ಆರೋಪಿಗಳನ್ನು ಹೆಣ್ಣೂರು ಪೊಲೀಸರು ಬಂಧಿಸಿದ್ದಾರೆ.
ಜಾನ್ ರಾಕೇಶ್ (25) ಮೃತ ಯುವಕ. ಚೇಳಿಕೆರೆ ನಿವಾಸಿ ವಿನೀಶ್ ಅಲಿಯಾಸ್ ಬ್ರೈ (22), ಷೇರ್‌ಸಿಂಗ್ ಅಲಿಯಾಸ್ ಶೋಬಿಯಾ (37), ಸಂತೋಷ್ (30), ಅನಿಲ್ ಕುಮಾರ್ (25), ಕಾವಲ್‌ಬೈರಸಂದ್ರದ ಅಪ್ಪು ಅಲಿಯಾಸ್ ಅಶೋಕ (40) ಬಂಧಿತರು. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಆಟೋ, ಬೈಕ್, ಮೊಬೈಲ್ ಹಾಗೂ ಮಾರಕಾಸ್ತ್ರಗಳನ್ನು ಜಪ್ತಿ ಮಾಡಲಾಗಿದೆ.
ಪ್ಲಂಬಿಂಗ್ ಕೆಲಸ ಮಾಡುತ್ತಿದ್ದ ಜಾನ್ ರಾಕೇಶ್, ಏ.20ರಂದು ತಡರಾತ್ರಿ 1.45ರ ಸುಮಾರಿಗೆ ಮದ್ಯ ಸೇವಿಸಲು ಹೆಣ್ಣೂರು ಬಂಡೆಯಲ್ಲಿರುವ ರಾಜೇಶ್ವರಿ ಬಾರ್‌ಗೆ ಹೋಗಿದ್ದಾನೆ. ಇದೇ ವೇಳೆ ಆರೋಪಿಗಳು ಕೂಡ ಅಲ್ಲಿಯೇ ಮದ್ಯ ಸೇವಿಸುತ್ತಿದ್ದರು.
ಆಕಸ್ಮಿಕವಾಗಿ ಜಾನ್ ರಾಕೇಶ್ ಎಂಜಲು ಆರೋಪಿಯೊಬ್ಬನ ಮೇಲೆ ಬಿದ್ದಿದೆ. ಈ ವಿಚಾರಕ್ಕೆ ಆರೋಪಿಗಳು ಹಾಗೂ ರಾಕೇಶ್ ನಡುವೆ ಜಗಳವಾಗಿದ್ದು, ಒಂದು ಹಂತದಲ್ಲಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಇದು ವಿಕೋಪಕ್ಕೆ ಹೋಗಿದ್ದು, ಆರೋಪಿಗಳು ಬಿಯರ್ ಬಾಟಲಿ ಹಾಗೂ ಇತರೆ ಮಾರಕಾಸ್ತ್ರಗಳಿಂದ ರಾಕೇಶ್‌ನ ತಲೆ, ಎದೆ ಹಾಗೂ ಇತರೆಡೆ ಗಂಭೀರವಾಗಿ ಹಲ್ಲೆ ನಡೆಸಿ, ಪರಾರಿಯಾಗಿದ್ದರು.
ರಕ್ತದ ಮಡುವಲ್ಲಿ ಬಿದ್ದಿದ್ದ ರಾಕೇಶ್‌ನನ್ನು ಕೂಡಲೇ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದ. ಈ ಸಂಬಂಧ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದ ಹೆಣ್ಣೂರು ಪೊಲೀಸರು, ಘಟನಾ ಸ್ಥಳದಲ್ಲಿದ್ದ ಸಿಟಿ ಕ್ಯಾಮೆರಾ ದೃಶ್ಯಾವಳಿಗಳನ್ನು ಸಂಗ್ರಹಿಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರು ಈ ಹಿಂದೆ ಕೂಡ ಹಲವು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಅನುಮಾನವಿದ್ದು, ವಿಚಾರಣೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.