ನವದೆಹಲಿ : ನಕಲಿ ಪಾಸ್‌ಪೋರ್ಟ್ ಪಡೆಯಲು ಲಾರೆನ್ಸ್ ಬಿಷ್ಣೋಯ್ ನ ಸೋದರಳಿಯನಿಗೆ ಸಹಾಯ ಮಾಡಿದ ಆರೋಪದ ಮೇಲೆ ಮಹಿಳೆ ಸೇರಿದಂತೆ ಐವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಆರೋಪಿಗಳು ಸಚಿನ್ ಥಾಪನ್ ಮತ್ತು ಇತರ ದರೋಡೆಕೋರರಿಗೆ ನಕಲಿ ಪಾಸ್‌ಪೋರ್ಟ್‌ಗಳನ್ನು ಪಡೆಯಲು ಸಹಾಯ ಮಾಡಿದ್ದರು. ಪಂಜಾಬಿ ಗಾಯಕ ಸಿದ್ದು ಮೂಸೆವಾಲಾ ಹತ್ಯೆಯ ಸಂಚಿನಲ್ಲಿ ಬಿಷ್ಣೋಯ್ ಸೋದರಳಿಯ ಥಾಪನ್ ಭಾಗಿಯಾಗಿದ್ದಾನೆ ಎಂದು ಆರೋಪಿಸಲಾಗಿದ್ದು, ಆತ ಬಳಿಕ ದೇಶ ಬಿಟ್ಟು ಪರಾರಿಯಾಗಿದ್ದ.
ಅನ್ಮೋಲ್ ಬಿಷ್ಣೋಯ್ ಮತ್ತು ಸಚಿನ್ ಥಾಪನ್, ಮೂಸೆವಾಲಾ ಕೊಲೆಗೆ ಸಂಚು ರೂಪಿಸಿದ್ದರು. ಅವರು ಶೂಟರ್‌ಗಳನ್ನು ನೇಮಿಸಿಕೊಂಡು ಅವರಿಗೆ ಉಪಕರಣಗಳನ್ನು ಒದಗಿಸಿದ್ದರು, ನಂತರ ನಕಲಿ ಪಾಸ್‌ಪೋರ್ಟ್‌ಗಳನ್ನು ಬಳಸಿಕೊಂಡು ದೇಶದಿಂದ ಪಲಾಯನ ಮಾಡಿದರು ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳನ್ನು ರಾಹುಲ್ ಸರ್ಕಾರ್ (27), ಅರ್ಜಿತ್ ಕುಮಾರ್ (55), ನವನೀತ್ ಪ್ರಜಾಪತಿ (33), ಸೋಮನಾಥ್ ಪ್ರಜಾಪತಿ (33) ಮತ್ತು 27 ವರ್ಷದ ಮಹಿಳೆ ಎಂದು ಗುರುತಿಸಲಾಗಿದೆ.
ಜುಲೈ 4 ರಂದು, ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಸದಸ್ಯರೊಂದಿಗೆ ಸಂಪರ್ಕದಲ್ಲಿದ್ದ ಸರ್ಕಾರ್ ಚಲನವಲನದ ಬಗ್ಗೆ ಪೊಲೀಸರಿಗೆ ಸುಳಿವು ಸಿಕ್ಕಿತ್ತು. ಆತನನ್ನು ಹಿಡಿಯಲು ಸಾಕೇತ್ ಮೆಟ್ರೋ ಸ್ಟೇಷನ್ ಫುಟ್ ಓವರ್ ಬ್ರಿಡ್ಜ್ ಬಳಿ ಬಲೆ ಬೀಸಲಾಗಿತ್ತು.