Advertisement
ಅಜ್ಜಿಬೆಟ್ಟು ಸಮೀಪದ ಬೆಟ್ಟದ ಬದಿಯಲ್ಲಿ ಗುಡಿಸಲಿನಲ್ಲಿ ವಾಸವಾಗಿರುವ ಈ ಕುಟುಂಬಕ್ಕೆ ಸೌಲಭ್ಯಗಳೂ ಸಿಕ್ಕಿಲ್ಲ. ಕುಟುಂಬದ ಯಜಮಾನ ಬಟ್ಯಪ್ಪ ಅವರು ಕೆಲವು ವರ್ಷಗಳ ಹಿಂದೆಯೇ ತೀರಿಕೊಂಡಿದ್ದಾರೆ. ಅವರ ಪತ್ನಿ ಚೋಮು, ಮಕ್ಕಳಾದ ರಾಮು, ಲಕ್ಷ್ಮೀ, ನಾರಾಯಣ ಪಾಟಾಳಿ ಮತ್ತು ನವೀನ ಈ ಪುಟ್ಟ ಗುಡಿಸಲಿನಲ್ಲಿ ಆಶ್ರಯ ಪಡೆದಿದ್ದಾರೆ. ಮಕ್ಕಳ ಪೈಕಿ ಲಕ್ಷ್ಮೀ ಹಾಗೂ ರಾಮ ಅಂಗವಿಕಲರು. ಕುಟುಂಬಕ್ಕೆ ಆಸರೆಯಾಗಿದ್ದ ಏಕೈಕ ಪುತ್ರ ನಾರಾಯಣ ಪಾಟಾಳಿ ಕೆಲವು ತಿಂಗಳಿಂದ ಕ್ಯಾನ್ಸರ್‌ಗೆ ತುತ್ತಾಗಿ ಆಸ್ಪತ್ರೆ ಸೇರಿದ್ದಾರೆ. ಮನೆಯ ಸ್ಥಿತಿ ಕಂಡು ಚೋಮು ಮಾನಸಿಕ ಸ್ಥಿಮಿತವನ್ನೇ ಕಳೆದುಕೊಂಡಿದ್ದಾರೆ. ನಾರಾ ಯಣ ಪಾಟಾಳಿ ಅವರ ಮಗ ನವೀನ ಅನಿವಾರ್ಯವಾಗಿ 9ನೇ ತರಗತಿಯಲ್ಲಿ ಶಾಲೆ ಬಿಟ್ಟು ಕೆಲಸಕ್ಕೆ ಹೋಗುತ್ತಿದ್ದಾನೆ.
ಎಷ್ಟೋ ವರ್ಷಗಳ ಹಿಂದೆ ಕಟ್ಟಿದ ಮಣ್ಣಿನ ಇಟ್ಟಿಗೆಯ ಮನೆ ಈಗಲೋ ಆಗಲೋ ಬೀಳುವ ಸ್ಥಿತಿಯಲ್ಲಿದೆ. ಪುಟ್ಟದಾದ ಇಕ್ಕಟ್ಟಾದ ಮನೆಯಲ್ಲಿ ಐವರು ವಾಸ್ತವ್ಯವಿದ್ದಾರೆ. ಕುಡಿಯುವ ನೀರಿನ ಸಂಪರ್ಕವೂ ಇಲ್ಲ. ನೆರೆಹೊರೆಯವರ ಬಾವಿಯೇ ಗತಿ. ಸರಕಾರದಿಂದ ಈ ಕುಟುಂಬಕ್ಕೆ ಮನೆಯೂ ಮಂಜೂರಾಗಿಲ್ಲ. ಕಾರಣವೇನೆಂಬುದೂ ಗೊತ್ತಿಲ್ಲ. ಸರಕಾರದಿಂದ ಉಚಿತ ಮನೆ ಸಿಗುತ್ತದೆ ಎಂಬ ಮಾಹಿತಿಯೂ ಸರಿಯಾಗಿ ಇದ್ದಂತಿಲ್ಲ. ಇಬ್ಬರು ಆಸ್ಪತ್ರೆಗೆ ದಾಖಲು
ಮನೆಯ ಆಧಾರ ಸ್ತಂಭವಾಗಿದ್ದ ನಾರಾಯಣ ಪಾಟಾಳಿ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ದುಡಿಯಲು ಹೋಗುತ್ತಿದ್ದ ನವೀನನೂ ಚಿಂತೆಯಿಂದಲೇ ಆಸ್ಪತ್ರೆ ಸೇರಿದ್ದಾನೆ. ಅಂಗವಿಕಲ ಸಹೋದರ, ಸಹೋದರು ಹಾಗೂ ವೃದ್ಧೆ ಚೋಮು ಮಾತ್ರ ಇದ್ದು ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ.
Related Articles
ಕುಟುಂಬ ಬಹಳ ನೊಂದಿದೆ. ಸಾರ್ವಜನಿಕರ ಸಹಕಾರ ಕುಟುಂಬಕ್ಕೆ ಅತೀ ಅಗತ್ಯವಾಗಿದೆ. ಎಲ್ಲರೂ ಸೇರಿ ಈ ಕುಟುಂಬ ನೆಮ್ಮದಿಯ ಜೀವನ ನಡೆಸುವಂತೆ ಮಾಡಲು ಮುತುವರ್ಜಿ ವಹಿಸಬೇಕಾಗಿದೆ. ಅನಾರೋಗ್ಯಪೀಡಿತರಾದ ಇಬ್ಬರು ಮಕ್ಕಳನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಿದ್ದೇವೆ. ಕುಟುಂಬ ನೆರವಿನ ನಿರೀಕ್ಷೆಯಲ್ಲಿದೆ.
– ಕೃಷ್ಣಪ್ರಸಾದ್ ಆಳ್ವ,
ಸ್ಥಳೀಯ ನಿವಾಸಿ
Advertisement
ಮನೆ ಕೊಡಿಸಲು ಪ್ರಯತ್ನಒಳಮೊಗ್ರು ಗ್ರಾಮದಲ್ಲಿ ಕುಟುಂಬವೊಂದು ಈ ರೀತಿಯಾಗಿ ಸಂಕಷ್ಟದಲಿರುವುದು ನನ್ನ ಗಮನಕ್ಕೆ ಬಂದಿಲ್ಲ. ಕುಟುಂಬದ ಮನೆಗೆ ಭೇಟಿ ನೀಡಿ ಪರಿಶಿಲನೆ ನಡೆಸುತ್ತೇನೆ. ಭೂಮಿಯ ದಾಖಲೆ ಪತ್ರ ಸಮರ್ಪಕವಾಗಿದ್ದಲ್ಲಿ ಸರಕಾರದ ವತಿಯಿಂದ ಅವರಿಗೊಂದು ಮನೆ ಕೊಡಿಸುವಲ್ಲಿ ಪ್ರಯತ್ನ ಮಾಡುತ್ತೇನೆ. ಉಳಿದಂತೆ ಸರಕಾರದಿಂದ ಸಿಗುವ ಸೌಲಭ್ಯವನ್ನು ಕೊಡಿಸಲು ಮುತುವರ್ಜಿ ವಹಿಸುತ್ತೇನೆ.
- ಯತಿರಾಜ್ ರೈ ನೀರ್ಪಾಡಿ,
ಒಳಮೊಗ್ರು ಗ್ರಾ.ಪಂ. ಅಧ್ಯಕ್ಷರು