ಬೆಂಗಳೂರು: ಕಳೆದ 17 ವರ್ಷಗಳ ಹಿಂದೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಗೀತಾ ಎಂಬುವವರ ಕೊಲೆ ಹಾಗೂ ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದ ದಂಡುಪಾಳ್ಯ ತಂಡದ ಐವರು ಸದಸ್ಯರಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ ಐದು ಸಾವಿರ ರೂ. ದಂಡ ವಿಧಿಸಿ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.
ಮಹಿಳೆ ಕೊಲೆಗೈದು ಹಾಗೂ ಚಿನ್ನಾಭರಣ ದೋಚಿರುವುದಕ್ಕೆ ಪ್ರಾಸಿಕ್ಯೂಶನ್ ಸಲ್ಲಿಸಿದ್ದ ಪ್ರಬಲಸಾಕ್ಷ್ಯಾಧಾರಗಳು ಹಾಗೂ ವಾದವನ್ನು ಪುರಸ್ಕರಿಸಿದ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಶಿವನಗೌಡ, ಈ ತೀರ್ಪು ನೀಡಿದರು.
ಆರೋಪಿಗಳು ಮಹಿಳೆಯನ್ನು ಕೊಲೆಗೈದು,ದರೋಡೆ ಮಾಡಿರುವುದು ಅಮಾನುಷ ಕೃತ್ಯ ಎಂದು ಅಭಿಪ್ರಾಯಪಟ್ಟ ನ್ಯಾಯಾಧೀಶರು, ದೋಷಿಗಳಾದ ದಂಡುಪಾಳ್ಯಗ್ಯಾಂಗ್‌ನ ದೊಡ್ಡಹನುಮ, ಮುನಿಕೃಷ್ಣ, ವೆಂಕಟೇಶ್, ನಲ್ಲತಿಮ್ಮ, ಲಕ್ಷ್ಮೀಗೆ ಜೀವಾವಧಿ ಹಾಗೂ ತಲಾ ಐದು ಸಾವಿರ ದಂಡ ವಿಧಿಸಿ ತೀರ್ಪು ನೀಡಿದರು.
ಆರೋಪಿಗಳು ಗೀತಾರನ್ನು ಕೊಲೆಗೈದು ಆಕೆಯ ಮೈಮೇಲಿದ್ದ ಓಡವೆಗಳನ್ನು ದೋಚಿದ್ದರು. ಈ ಕುರಿತು ಒಡವೆ ಗಿರವಿ ಇಟ್ಟುಕೊಂಡಿದ್ದ ರಾಜಾಮಾರ್ಕೆಟ್‌ನ ಜ್ಯುವೆಲರಿ ಶಾಪ್ ಮಾಲೀಕ ಆರೋಪಿಗಳ ವಿರುದ್ಧ ನೀಡಿದ ಹೇಳಿಕೆ. ಪೊಲೀಸರು ಸಲ್ಲಿಸಿದ್ದ ಸಾಕ್ಷ್ಯಾಧಾರಗಳು ಹಾಗೂ ಪ್ರಾಸಿಕ್ಯೂಶನ್ ವಾದವನ್ನು ನ್ಯಾಯಾಧೀಶರು ಪುರಸ್ಕರಿಸಿ ಈ ತೀರ್ಪು ನೀಡಿದ್ದಾರೆ ಎಂದು ಪ್ರಾಸಿಕ್ಯೂಶನ್ ಪರವಾಗಿ ವಾದಿಸಿದ್ದ ಸರ್ಕಾರಿ ವಿಶೇಷ ಅಭಿಯೋಜಕ ಬಿ.ಎಸ್ ಪಾಟೀಲ್ ವಾದ ಮಂಡಿಸಿದ್ದರು.
ಏನಿದು ಪ್ರಕರಣ?: ದಂಡುಪಾಳ್ಯ ಗ್ಯಾಂಗ್‌ನ ಐವರೂ ಸದಸ್ಯರು 2000ರ ನವೆಂಬರ್ 7 ರಂದು ಮಧ್ಯಾಹ್ನದ ವೆಳೆ ಅಗ್ರಹಾರದಾಸರಹಳ್ಳಿಯಲ್ಲಿ ಮನೆಯೊಂದರ ಬಳಿ ತೆರಳಿ ಕುಡಿಯಲು ನೀರು ಕೇಳಿದ್ದರು. ಈ ವೇಳೆ ಮನೆಯಲ್ಲಿದ್ದ ಗೀತಾ ಎಂಬಾಕೆ ನೀರು ನೀಡಲು ಒಳಹೋಗುತ್ತಿದ್ದಂತೆ ಆರೋಪಿಗಳೆಲ್ಲಾ ಮನೆಯೊಳಗೆ ಬಂದು ಬಾಗಿಲು ಹಾಕಿದ್ದರು.
ಬಳಿಕ ಭೀಕರವಾಗಿ ಆಕೆಯ ಕತ್ತುಕೊಯ್ದು ಕೊಲೆಗೈದು, ಆಕೆಯ ಮೈಮೇಲಿದ್ದ ಲಕ್ಷಾಂತರ ರೂ.ಮೌಲ್ಯದ ಚಿನ್ನಾಭರಣ ಪಡೆದುಕೊಂಡು ಪರಾರಿಯಾಗಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ದಂಡುಪಾಳ್ಯ ಗ್ಯಾಂಗ್‌ನ ಐವರು ಆರೋಪಿಗಳನ್ನು ಬಂಧಿಸಿ ಐಪಿಸಿಕಲಂ 302, 396 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿದ್ದರು.