Advertisement

ಐದು ತಿಂಗಳ ನಂತರ ಐರಾವತ ಬಿಡುಗಡೆ 

12:14 PM Jul 05, 2017 | Team Udayavani |

ಆನೇಕಲ್‌: ಕಳೆದ ಐದು ತಿಂಗಳ ಹಿಂದೆ ಪುಂಡಾಟ ಪ್ರದರ್ಶಿಸಿ ನೆಲಮಂಗಲದ ಬಳಿ ಅರಣ್ಯ ಇಲಾಖೆ ಸಿಬ್ಬಂದಿಗೆ ಸೆರೆ ಸಿಕ್ಕಿದ್ದ ಆನೆ ಐರಾವತ, ಬನ್ನೇರುಘಟ್ಟದ ಕ್ರಾಲ್‌ ಸೇರಿದ್ದ. ಅರಣ್ಯ ಸಿಬ್ಬಂದಿಯ ಸತತ 132 ದಿನಗಳ ಆರೈಕೆ ನಂತರ “ಐರಾವತ’ ಆನೆ ಈಗ ತನ್ನ ಒರಟುತನವನ್ನು ತೊರೆದು ಸೌಮ್ಯ ಸ್ಥಿತಿಗೆ ಬಂದಿದ್ದಾನೆ. 

Advertisement

ಆನೇಕಲ್‌ ತಾಲೂಕಿನ ಬನ್ನೇರುಘಟ್ಟ ಅರಣ್ಯದ ಆನೆ ಕ್ಯಾಂಪ್‌ನ ಕ್ರಾಲ್‌ನಲ್ಲಿ ಐದು ತಿಂಗಳಿನಿಂದಲೂ ಬಂಧಿಯಾಗಿದ್ದ ಐರಾವತ ಆನೆಯನ್ನು ಮಂಗಳವಾರ ಸಂಜೆ ಹೊರ ತರಲಾಯಿತು. ಆದರೂ ಮುನ್ನೆಚ್ಚರಿಕಾ ಕ್ರಮವಾಗಿ ಅದರ ಎರಡು ಕಾಲುಗಳಿಗೆ ಸರಪಳಿ ಬಿಗಿದು, ಮರಗಳಿಗೆ ಕಟ್ಟಿಹಾಕಲಾಗಿದೆ. 

ಆನೆಗಳನ್ನು ಪಳಗಿಸಲೆಂದೇ ಬನ್ನೇರುಘಟ್ಟದ ಆನೆ ಕ್ಯಾಂಪ್‌ನಲ್ಲಿ ಎರಡು ಕ್ರಾಲ್‌ಗ‌ಳನ್ನು ನಿರ್ಮಾಣ ಮಾಡಲಾಗಿತ್ತು. ಒಂದು ಕ್ರಾಲ್‌ನಲ್ಲಿ ಕಾಡಾನೆ ಜೆಂಟಲ್‌ ರಂಗನನ್ನು ಇರಿಸಲಾಗಿತ್ತು. ಕಳೆದ 29 ರ ಗುರವಾರ ರಂಗನನ್ನು ಹೊರ ತರಲಾಗಿತ್ತು. ಮಂಗಳವಾರ ಐರಾವತ ಕೂಡ ಬಿಡುಗಡೆ ಹೊಂದಿದ್ದಾನೆ. 

ಐರಾವತನನ್ನು ಕ್ರಾಲ್‌ನಿಂದ ಹೊರ ತರುವ ಕಾರ್ಯಚರಣೆಯು ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳ ಉಪಸ್ಥಿತಿಯಲ್ಲೇ ನಡೆಯಿತು. ಮಧ್ಯಾಹ್ನದಿಂದಲೇ ಕಾರ್ಯಾಚರಣೆ ಆರಂಭವಾಯಿತು. ಮಾವುತರೊಬ್ಬರು ಒಳ ಹೋಗಿ ಐರಾವತನ ಮುಂಭಾಗದ ಎರಡು ಕಾಲಿಗೆ ಕಬ್ಬಿಣದ ಸರಪಣಿ ಬಿಗಿದು ಹೊರ ಬಂದಿದ್ದರು.

ನಂತರ ವೈದ್ಯರ ತಂಡ ಆನೆಗೆ ಕಡಿಮೆ ಪ್ರಮಾಣದ ಅರವಳಿಕೆ ನೀಡಿ ಕೆಲ ಸಮಯದ ಬಳಿಕ ಅರವಳಿಕೆ ಮೈ ಸೇರಿದೆಯೇ ಎಂಬುದನ್ನು ಪರೀಕ್ಷಿಸಿ ಕೊಳ್ಳಲಾಯಿತು. ನಂತರ ಅಭಿಮನ್ಯು ಹಾಗೂ ಕೃಷ್ಣ ಎಂಬಾನೆಗಳ ಸಹಾಯದಿಂದ ಕ್ರಾಲ್‌ಗೆ ಹಾಕಿದ್ದ ದೊಡ್ಡ ದೊಡ್ಡ ಮರದ ದಿಮ್ಮಿಗಳನ್ನು ತೆಗೆಯಲಾಯಿತು.

Advertisement

ಇದಾದ ಬಳಿಕ ಐರಾವತನನ್ನು ಹೊರ ಎಳೆದು ಪಕ್ಕದ ಬಯಲಿನಲ್ಲಿ ಎರಡು ಬೃಹತ್‌ ಮರಗಳಿಗೆ ಕಟ್ಟಲಾಯಿತು. ಆರಂಭದಲ್ಲಿ ಆರ್ಭಟಿಸಿದ್ದ ಐರಾವತ : ಐದು ತಿಂಗಳ ಹಿಂದೆ ಬೆಂಗಳೂರು ಹೊರವಲಯದ ನೆಲಮಂಗಲದ ಬಳಿ ಅರಣ್ಯ ಇಲಾಖೆಯ ವೈದ್ಯರು ಅರವಳಿಕೆ ಔಷದ ನೀಡಿ ಐರಾವತನನ್ನು ಸೆರೆಹಿಡಿದು ಬನ್ನೇರುಘಟ್ಟದ ಕ್ರಾಲ್‌ನಲ್ಲಿ ಬಂಧಿಸಿದ್ದರು. 

ಅಂದು ಐದು ಸಾಕಾನೆಗಳ ನೆರವಿನೊಂದಿಗೆ ಕ್ರಾಲ್‌ ಸೇರಿದ್ದ ಐರಾವತ ಆನೆ ಅರವಳಿಕೆ ಔಷದ ಕಡಿಮೆಯಾಗುತ್ತಿದ್ದಂತೆ ಆರ್ಭಟ ಪ್ರದರ್ಶಿಸಿದ್ದ. 15 ಕ್ಕೂ ಹೆಚ್ಚು ಸಿಬ್ಬಂದಿ, ಸಾಕಾನೆ ಅರ್ಜುನ ಎಲ್ಲರಿದ್ದರೂ ಕ್ರಾಲ್‌ ದಾಟಲು ಹವಣಿಸುತ್ತಲೇ ಇದ್ದ. ಅದೊಂದು ರಾತ್ರಿ ಕ್ರಾಲ್‌ನ ಮೇಲಾºಗದ ಮರದ ದಿಮ್ಮಿಗಳನ್ನು ಪಕ್ಕಕ್ಕೆ ಸರಿಸಿ ಎರಡು ಮರಗಳನ್ನು ನೆಲಕ್ಕೆ ಉರುಳಿಸಿದ್ದ.

ಈ ಸಮಯದಲ್ಲಿ ಅರ್ಜುನನ ಬೆದರಿಕೆಗೂ ಜಗ್ಗದೆ ತನ್ನ ಆರ್ಭಟ ಮುಂದುವರೆಸಿದ ಐರಾವತ ಐದು ಇಂಚು ದಪ್ಪವಾಗಿದ್ದ ಪ್ಲಾಸ್ಟಿಕ್‌ ಅಗ್ಗವನ್ನೇ ತುಂಡರಿಸಿದ್ದ. ಈ ಸಮಯದಲ್ಲಿ ಅಲ್ಲಿದ್ದ ಸಿಬ್ಬಂದಿ ಆತಂಕಗೊಂಡು ಸುತ್ತಲು ಬೆಂಕಿ ಹಾಕಿ ಬೆದರಿಸಿದ್ದರು. ಮೇಲೆ ಏರಲು ಬಂದಾಗ ಕಿರಿಚುತ್ತ, ಹೊಡೆಯುತ್ತ ಕೆಳಗಿಲಿಸುತ್ತಿದ್ದರು. ಆನೆಯನ್ನು ನಿಯಂತ್ರಿಸಲು ಕ್ರಾಲ್‌ನ ಅನ್ನು ಇನ್ನಷ್ಟು ಮರಗಳ ಮೂಲಕ ಎತ್ತರಿಸಲಾಗಿತ್ತು. 

ಕಡಿಮೆಯಾಗದ ಆರ್ಭಟ: ಸದ್ಯ ಕ್ರಾಲ್‌ ನಿಂದ ಹೊರ ಬರುವವರೆಗೂ ಐರಾವತ ಬಂಧಮುಕ್ತನಾಗಲು ಬಯಸುತ್ತಲೇ ಇದ್ದ. ಅರವಳಿಕೆ ನೀಡಿ ಹೊರತಂದಿರುವುದರಿಂದ ಸದ್ಯ ಸೌಮ್ಯ ವರ್ತನೆ ತೋರಿದ್ದಾನೆ. 

ಪಕ್ಕಾ ಕಾಡಾನೆ: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಆನೆಗಳ ತಂಡದಲ್ಲಿದ್ದ ಸುಮಾರು 25 ರಿಂದ 30  ವರ್ಷದ ಐರಾವತ ಕಳೆದ 7 ವರ್ಷಗಳಿಂದ ತುಮಕೂರು, ಮಾಗಡಿ, ನೆಲಮಂಗಲ ಭಾಗದಲ್ಲೆ ವಾಸಿಸತೊಡಗಿದ್ದ. ಅದರ ಒಂದು ದಂತ ಚಿಕ್ಕದಿದ್ದರೆ ಒಂದು ಉದ್ದವಿದೆ. ಎಡಗಣ್ಣು ಪೂರ್ತಿ ಮಂಕಾಗಿದೆ. ಉಳಿದಂತೆ ಆರೋಗ್ಯ ಸ್ಥಿತಿ ಉತ್ತಮವಾಗಿದೆ.

ಐರಾವತ ಆನೆಯನ್ನು ಕ್ರಾಲ್‌ ನಿಂದ ಹೊರ ತರುವ ಕಾರ್ಯದಲ್ಲಿ ಅರಣ್ಯ ಇಲಾಖೆಯ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಜಯರಾಂ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸಾಸ್ವತಿ ಮಿಶ್ರಾ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಉಪ ಅರಣ್ಯಸಂರಕ್ಷಣಾಧಿಕಾರಿ ಜಾವೀದ್‌ ಮಮ್ತಾಜ್‌, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುರೇಶ್‌, ವಲಯ ಅರಣ್ಯಾಧಿಕಾರಿ ಮುನಿತಿಮ್ಮಯ್ಯ, ವೈದ್ಯಾಧಿಕಾರಿಗಳಾದ ಉಮಾಶಂಕರ್‌, ಕ್ಷಮಾ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next