Advertisement

ಐವರು ಸಚಿವರ ತಲೆದಂಡ? ಇಬ್ಬರು ಜೆಡಿಎಸ್‌, ಮೂವರು ಕಾಂಗ್ರೆಸ್‌ ಸಚಿವರಿಗೆ ಕೊಕ್‌?

02:33 AM May 07, 2019 | sudhir |

ಬೆಂಗಳೂರು: ಲೋಕಸಭೆ ಚುನಾವಣೆ ಫ‌ಲಿತಾಂಶದ ಬಳಿಕ ರಾಜ್ಯ ಸಚಿವ ಸಂಪುಟ ಪುನಾರಚನೆಯಾಗಲಿದ್ದು ಇಬ್ಬರು ಜೆಡಿಎಸ್‌ ಮತ್ತು ಮೂವರು ಕಾಂಗ್ರೆಸ್‌ ಸಚಿವರ “ತಲೆದಂಡ’ವಾಗುವ ಸಾಧ್ಯತೆಗಳಿವೆ.

Advertisement

ಲೋಕಸಭೆ ಚುನಾವಣೆ ಫ‌ಲಿತಾಂಶ ಆಧರಿಸಿ ಐವರು ಸಚಿವರಿಗೆ “ಕೊಕ್‌’ ಸಿಗ ಲಿದ್ದು ಹೊಸದಾಗಿ ಐವರು ಸೇರ್ಪಡೆಯಾಗ ಲಿದ್ದಾರೆ. ಜತೆಗೆ ಡಾ| ಜಿ. ಪರಮೇಶ್ವರ್‌, ಎಂ.ಬಿ.ಪಾಟೀಲ್‌, ಕೆ.ಜೆ. ಜಾರ್ಜ್‌, ಡಿ.ಕೆ.ಶಿವಕುಮಾರ್‌ ಸೇರಿ ಪ್ರಭಾವಿ ಸಚಿವರ ಖಾತೆಗಳೂ ಬದಲಾಗುವ ಸಾಧ್ಯತೆ ಇದೆ.

ರಾಜ್ಯ ಸಮ್ಮಿಶ್ರ ಸರಕಾರವನ್ನು ಪತನ ಗೊಳಿಸಲು ಬಿಜೆಪಿ ನಡೆಸುತ್ತಿರುವ ರಹಸ್ಯ ಕಾರ್ಯತಂತ್ರಕ್ಕೆ ಪ್ರತಿಯಾಗಿ ಸರಕಾರ ಉಳಿಸಿ ಕೊಳ್ಳಲು ಸಂಪುಟ ಪುನಾರಚನೆ “ಅಸ್ತ್ರ’ಕ್ಕೆ ಕಾಂಗ್ರೆಸ್‌-ಜೆಡಿಎಸ್‌ ಮುಂದಾಗಿದೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

ಜೆಡಿಎಸ್‌ ಕೋಟಾದಡಿ ಎರಡು ಸಚಿವ ಸ್ಥಾನ ಖಾಲಿ ಇದೆ. ಜತೆಗೆ ಕಾಂಗ್ರೆಸ್‌ನಿಂದ ಸಚಿವರಾಗಿದ್ದ ಸಿ.ಎಸ್‌.ಶಿವಳ್ಳಿ ನಿಧನದಿಂದ ಒಂದು ಸಚಿವ ಸ್ಥಾನ ತೆರವಾಗಿದೆ. ಇದರ ಜತೆಗೆ ಬೆಂಗಳೂರು ಉತ್ತರ ಲೋಕಸಭೆ ಕ್ಷೇತ್ರದಿಂದ ಸ್ಪರ್ಧೆ ಮಾಡಿರುವ ಕೃಷ್ಣ ಬೈರೇಗೌಡರು ಗೆಲ್ಲುವ ಭರವಸೆ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಾಯಕರಿಗೆ ಇದೆ. ಹೀಗಾಗಿ ಒಟ್ಟು ನಾಲ್ಕು ಸಚಿವ ಸ್ಥಾನ ಖಾಲಿ ಉಳಿಯಲಿದೆ.

ಇದರ ಜತೆಗೆ ಲೋಕಸಭೆ ಚುನಾ ವಣೆ ಫ‌ಲಿತಾಂಶದ ಅನಂತರ ಸೋಲು- ಗೆಲುವಿನ ಆಧಾರದಲ್ಲಿ ಹಾಗೂ ನಿಷ್ಕ್ರಿಯತೆ ಕಾರಣಕ್ಕಾಗಿ ಜೆಡಿಎಸ್‌ನ ಇಬ್ಬರು ಹಾಗೂ ಕಾಂಗ್ರೆಸ್‌ನ ಮೂವರು ಸಚಿವರಿಗೆ ಕೊಕ್‌ ಕೊಡುವ ಸಾಧ್ಯತೆಯಿದೆ. ಮೈಸೂರು, ತುಮಕೂರು, ಚಿಕ್ಕಬಳ್ಳಾಪುರ, ಮಂಡ್ಯದ ಸಚಿವರಿಗೆ ಅಧಿಕಾರ ಕಳೆದುಕೊಳ್ಳುವ ಆತಂಕ ಎದುರಾಗಿದೆ.

Advertisement

ಸಂಪುಟದಲ್ಲಿ ಖಾಲಿಯಾಗುವ ಸ್ಥಾನಗಳಿಗೆ ಆಪರೇಷನ್‌ ಕಮಲ ಕಾರ್ಯಾಚರಣೆಯ ಖೆಡ್ಡಾಗೆ ಬೀಳಬಹುದಾದ ಶಾಸಕರಿಗೆ ಹಾಗೂ ಸಚಿವ ಸ್ಥಾನದ ನಿರೀಕ್ಷೆಯಲ್ಲಿರುವವರಿಗೆ ಕುದುರ ಬಹುದು. ಇತ್ತೀಚೆಗೆ ಜೆಡಿಎಸ್‌ ಶಾಸಕಾಂಗ ಪಕ್ಷದ ಸಭೆಯಲ್ಲೂ ಸಂಪುಟ ಪುನಾರಚನೆ ಕುರಿತು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಮಾಹಿತಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬಿಜೆಪಿಯ ಆಪರೇಷನ್‌ ಕಮಲ ಕಾರ್ಯಾಚರಣೆಗೆ ಪ್ರತಿಯಾಗಿ ಕಾಂಗ್ರೆಸ್‌-ಜೆಡಿಎಸ್‌ನಿಂದ ಆಪರೇಷನ್‌ ನಡೆಸಿ ಮೂರರಿಂದ ಐವರು ಬಿಜೆಪಿ ಶಾಸಕರನ್ನು ಸೆಳೆದು ಆ ಪೈಕಿ ಇಬ್ಬರಿಗೆ ಸಚಿವ ಸ್ಥಾನ ನೀಡುವ ಮಾಸ್ಟರ್‌ ಪ್ಲಾನ್‌ ಸಹ ರೂಪಿಸ ಲಾಗಿದೆ ಎಂದು ಹೇಳಲಾಗಿದೆ.

ಸಂಪುಟ ಪುನಾರಚನೆ ಸಂದರ್ಭದಲ್ಲಿ ಮುಖ್ಯಮಂತ್ರಿಯವರ ಬಳಿಯಿರುವ ಇಂಧನ ಖಾತೆ ಕಾಂಗ್ರೆಸ್‌ ಸಚಿವರಿಗೆ ದೊರೆ ಯುವ ಸಾಧ್ಯತೆಯಿದೆ.

ಮೇ 22ಕ್ಕೆ ಕೆಸಿವಿ ಆಗಮನ ಸಾಧ್ಯತೆ
ಮೇ 22ರಂದು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ರಾಜ್ಯಕ್ಕೆ ಆಗಮಿಸಿ ವಾಸ್ತವ್ಯ ಹೂಡುವ ಸಾಧ್ಯತೆಯಿದೆ. ಎರಡು ದಿನಗಳ ಕಾಲ ಇಲ್ಲೇ ಇದ್ದು, ಆಪರೇಷನ್‌ ಕಮಲ ಕಾರ್ಯಾಚರಣೆ ವಿಫ‌ಲಗೊಳಿಸುವ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸಲಿದ್ದಾರೆ ಎಂದು ಹೇಳಲಾಗಿದೆ.

ಪ್ರತಿತಂತ್ರ
ಲೋಕಸಭೆ ಚುನಾವಣೆಯಲ್ಲಿ ಫ‌ಲಿತಾಂಶ ನಿರೀಕ್ಷಿತವಾಗಿ ಬಾರದಿದ್ದರೆ ಸಿದ್ದರಾಮಯ್ಯ ಅವರ ಬೆಂಬಲಿಗ ಶಾಸಕರು ಮುಖ್ಯಮಂತ್ರಿ ಬದಲಾವಣೆಗೂ ಬೇಡಿಕೆ ಇಡಬಹುದು. ಕಾಂಗ್ರೆಸ್‌ ಮುಖ್ಯಮಂತ್ರಿ, ಜೆಡಿಎಸ್‌ನ ಉಪ ಮುಖ್ಯಮಂತ್ರಿ ಇರಲಿ ಎಂಬ ಸೂತ್ರ ಮುಂದಿಡಬಹುದು. ಈಗಾಗಲೇ ಇಂಥದ್ದೊಂದು ಸೂತ್ರ ಸಿದ್ಧಪಡಿಸಲಾಗಿದೆ. ಉಪ ಚುನಾವಣೆ ಮತದಾನ ಮುಗಿಯುತ್ತಿದ್ದಂತೆ ಆ ಕೂಗು ಪ್ರಬಲವಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಹೀಗಾಗಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿಯವರು ಡಾ| ಜಿ. ಪರಮೇಶ್ವರ್‌ ಹಾಗೂ ಡಿ.ಕೆ.ಶಿವಕುಮಾರ್‌ ಜತೆ ಸೇರಿ ಪ್ರತಿತಂತ್ರ ರೂಪಿಸಿದ್ದಾರೆ. ಹೀಗಾಗಿ ಕಾಂಗ್ರೆಸ್‌ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಆರಂಭವಾಗಿದೆ.

ಎಚ್‌ಡಿಕೆ ಭೇಟಿ ಮಾಡಲಿರುವ ಕೆಸಿಆರ್‌
ಕರ್ನಾಟಕದಲ್ಲಿ ಫ‌ಲಿತಾಂಶದ ಬಳಿಕ ಸರಕಾರ ಉಳಿಸಿಕೊಳ್ಳುವ ಮತ್ತು ಮೈತ್ರಿ ಗಟ್ಟಿ ಮಾಡಿಕೊಳ್ಳುವ ಪ್ರಯತ್ನಗಳು ನಡೆಯುತ್ತಿದ್ದರೆ, ಅತ್ತ ಕಾಂಗ್ರೆಸ್‌ ಮತ್ತು ಬಿಜೆಪಿಯೇತರ ರಂಗ ಕಟ್ಟಿಕೊಳ್ಳಲು ತೆಲಂಗಾಣ ಸಿಎಂ ಮತ್ತೂಂದು ಪ್ರಯತ್ನ ಶುರು ಮಾಡಿದ್ದಾರೆ. ಅವರು ಸದ್ಯದಲ್ಲೇ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರನ್ನೂ ಭೇಟಿ ಮಾಡಲಿದ್ದಾರೆ. ಸೋಮವಾರ ಕೇರಳ ಸಿಎಂ ಪಿಣರಾಯಿ ವಿಜಯನ್‌ರನ್ನು ಭೇಟಿ ಮಾಡಿರುವ ಕೆಸಿಆರ್‌, ಮೇ 13ರಂದು ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್‌ರನ್ನು ಭೇಟಿ ಮಾಡಲಿದ್ದಾರೆ. ಸ್ವತಃ ಕುಮಾರಸ್ವಾಮಿಯೇ ಕೆಸಿಆರ್‌ ಅವರನ್ನು ಭೇಟಿ ಮಾಡುವ ಬಯಕೆ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next