ಕ್ಯುಬೆಕ್ : ಕೆನಡದ ಕ್ಯುಬೆಕ್ ನಗರದಲ್ಲಿನ ಮಸೀದಿಯೊಂದರ ಮೇಲೆ ನಡೆಸಲಾದ ದಾಳಿಯಲ್ಲಿ ಕನಿಷ್ಠ ಐವರು ಹತರಾಗಿ ಇತರ ಹಲವರು ಗಾಯಗೊಂಡಿರುವುದಾಗಿ ವರದಿಗಳು ತಿಳಿಸಿವೆ.
ಕ್ಯುಬೆಕ್ ನಗರದ ಇಸ್ಲಾಮಿಕ್ ಸಾಂಸ್ಕೃತಿಕ ಕೇಂದ್ರದಲ್ಲಿ ಪ್ರಾರ್ಥನಾ ಸಭೆ ನಡೆಯುತ್ತಿದ್ದ ವೇಳೆ ಈ ಗುಂಡಿನ ದಾಳಿ ನಡೆದಿರುವುದಾಗಿ ಪ್ರತ್ಯಕ್ಷದರ್ಶಿಗಳನ್ನು ಉಲ್ಲೇಖೀಸಿ “ದ ಗಾರ್ಡಿಯನ್’ ವರದಿ ಮಾಡಿದೆ.
ಘಟನೆ ನಡೆದ ವೇಳೆ ಸುಮಾರು 40 ಮಂದಿ ಮಸೀದಿಯೊಳಗೆ ಇದ್ದರು. ರೇಡಿಯೋ ಕೆನಡ ವರದಿಯ ಪ್ರಕಾರ ಆ ಹೊತ್ತಿಗೆ ಇಬ್ಬರು ಬಂದೂಕುಧಾರಿಗಳು ಮಸೀದಿಯನ್ನು ಪ್ರವೇಶಿಸಿ ಗುಂಡಿನ ದಾಳಿ ನಡೆಸಿದರು.
ಕ್ಯುಬೆಕ್ ಪ್ರಧಾನಿ ಫಿಲಿಪ್ ಕ್ವಿಲಾರ್ಡ್ ಅವರು ಘಟನೆಯ ಬಗ್ಗೆ ಸರಣಿ ಟ್ವೀಟ್ ಮಾಡಿದ್ದು ಕ್ಯುಬೆಕ್ ನಗರವಾಸಿಗಳ ಭದ್ರತೆಯನ್ನು ಬಿಗಿ ಗೊಳಿಸಲು ಇನ್ನಷ್ಟು ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಹೇಳಿದ್ದಾರೆ.
ಇಸ್ಲಾಮಿಕ್ ಕಲ್ಚರಲ್ ಸೆಂಟರ್ ಎನ್ನುವುದು ಕ್ಯುಬೆಕ್ ನಗರದ ಭಾರೀ ದೊಡ್ಡ ಮಸೀದಿಯಾಗಿದೆ. ಕಳೆದ ರಮ್ಜಾನ್ ಪವಿತ್ರ ತಿಂಗಳಲ್ಲಿ ದುಷ್ಕರ್ಮಿಗಳು ಈ ಮಸೀದಿಯ ಪ್ರವೇಶ ದ್ವಾರದಲ್ಲಿ ಸತ್ತ ಹಂದಿಯನ್ನು ಎಸೆದು ಹೋಗಿದ್ದರು.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕಳೆದ ಶುಕ್ರವಾರ ಮುಸ್ಲಿಂ ವಲಸಿಗರು ಮತ್ತು ನಿರಾಶ್ರಿತರ ಮೇಲೆ ಹೇರಿದ್ದ ವಿವಾದಾತ್ಮಕ ನಿಷೇಧವನ್ನು ಅನುಸರಿಸಿ ಕೆನಡ, ತಾನು ಮುಸ್ಲಿಮರು ಮತ್ತು ನಿರಾಶ್ರಿತರಿಗೆ ತೆರೆದ ಬಾಗಿಲಿನ ಸ್ವಾಗತ ನೀಡುವುದಾಗಿ ಹೇಳಿತ್ತು. ಇದಕ್ಕೆ ಪ್ರತಿಕ್ರಿಯೆ ಎಂಬಂತೆ ಈ ಘಟನೆ ನಡೆದಿದೆ.