Advertisement

ಕಿಂಗ್ಸ್‌ ಇಲೆವೆನ್‌ ಪಂಜಾಬ್‌ನಲ್ಲಿ ಕನ್ನಡಿಗರ ಸೇನೆ!

09:19 PM Sep 17, 2020 | mahesh |

ಕೋಚ್‌ ಅನಿಲ್‌ ಕುಂಬ್ಳೆ, ನಾಯಕ ಕೆ.ಎಲ್‌. ರಾಹುಲ್‌, ಮಾಯಾಂಕ್‌ ಅಗರ್ವಾಲ್‌, ಕರುಣ್‌ ನಾಯರ್‌, ಆಲ್‌ರೌಂಡರ್‌ ಕೃಷ್ಣಪ್ಪ ಗೌತಮ್‌, ಜಗದೀಶ್‌ ಸುಚಿತ್‌… ಹೀಗೆ ಸಾಲು ಸಾಲು ಕರ್ನಾಟಕದವರನ್ನು ಹೊಂದಿರುವ ತಂಡ ಕಿಂಗ್ಸ್‌ ಇಲೆವೆನ್‌ ಪಂಜಾಬ್‌. ವಿಪರ್ಯಾಸವೆಂದರೆ, ಕರ್ನಾಟಕದ ಫ್ರಾಂಚೈಸಿ ಆರ್‌ಸಿಬಿಯಂತೆ ಪಂಜಾಬ್‌ಗೂ ಐಪಿಎಲ್‌ ಪ್ರಶಸ್ತಿ ಇದುವರೆಗೆ ಮರೀಚಿಕೆಯೇ ಆಗಿರುವುದು!

Advertisement

ಕರ್ನಾಟಕದ ಕ್ರಿಕೆಟ್‌ ಪ್ರೇಮಿಗಳು ಆರ್‌ಸಿಬಿಗಿಂತ ಒಂದು ತೂಕ ಹೆಚ್ಚೇ ಎನಿಸುವಷ್ಟು ಆರಾಧಿಸುವ ತಂಡವೆಂದರೆ ಕಿಂಗ್ಸ್‌ ಇಲೆವೆನ್‌ ಪಂಜಾಬ್‌. ಕಾರಣ, ಇಲ್ಲಿ ಆರ್‌ಸಿಬಿಗಿಂತ ಹೆಚ್ಚಿನ ಸಂಖ್ಯೆಯ ಕರ್ನಾಟಕದ ಕ್ರಿಕೆಟಿಗರು ತುಂಬಿದ್ದಾರೆ. ಈ ಸಲವಂತೂ ಪ್ರೀತಿ ಝಿಂಟಾ ಬಳಗದ ಮೇಲಿನ ಕನ್ನಡಿಗರ ಪ್ರೀತಿ ಇನ್ನಷ್ಟು ಹೆಚ್ಚಬಹುದು. ಸ್ಟಾರ್‌ ಆಟಗಾರ ಕೆ.ಎಲ್‌. ರಾಹುಲ್‌ ಮೊದಲ ಸಲ ತಂಡದ ನಾಯಕನಾಗಿರುವುದು, ಸ್ಪಿನ್‌ ಮಾಂತ್ರಿಕ ಅನಿಲ್‌ ಕುಂಬ್ಳೆ ಕೋಚ್‌ ಆಗಿರುವುದು ಇದಕ್ಕೆ ಕಾರಣ.

ಆದರೆ ಅದೃಷ್ಟದ ವಿಷಯದಲ್ಲಿ ಆರ್‌ಸಿಬಿ ಮತ್ತು ಪಂಜಾಬ್‌ ಒಂದೇ ದೋಣಿಯ ಪಯಣಿಗರು. ವಿಶ್ವ ದರ್ಜೆಯ ಆಟಗಾರರನ್ನು ಹೊಂದಿಯೂ ಈ ಎರಡು ತಂಡಗಳಿಗೆ ಇನ್ನೂ ಕಪ್‌ ಎತ್ತಲಾಗಿಲ್ಲ. 2014ರಲ್ಲೊಮ್ಮೆ ಫೈನಲ್‌ಗೆ ಲಗ್ಗೆ ಇರಿಸಿದರೂ ಅಲ್ಲಿ ಕೆಕೆಆರ್‌ಗೆ ಶಿರ ಬಾಗಿತು. ಅನಂತರ 2 ವರ್ಷ ಕಟ್ಟಕಡೆಯ ಸ್ಥಾನಕ್ಕೆ ಕುಸಿಯಿತು. ಬಳಿಕ 5ನೇ, ಕಳೆದೆರಡು ಋತುಗಳಲ್ಲಿ 7ನೇ ಸ್ಥಾನಕ್ಕೆ ತೃಪ್ತಿಪಟ್ಟಿದೆ.

ಯುಎಇಯಲ್ಲಿ ಅಜೇಯ
ಐಪಿಎಲ್‌ ಇತಿಹಾಸದಲ್ಲೇ 2014ನೇ ಋತು ಪಂಜಾಬ್‌ ಪಾಲಿಗೆ ಸ್ಮರಣೀಯ. ಅಂದು ಮೊದಲ ಸುತ್ತಿನ ಪಂದ್ಯಗಳು ಯುಎಇಯಲ್ಲೇ ನಡೆದಾಗ ಪಂಜಾಬ್‌ ಅಜೇಯ ಸಾಧನೆಗೈದುದನ್ನು ಮರೆಯುವಂತಿಲ್ಲ. ಇಲ್ಲಿ ಆಡಲಾದ ಎಲ್ಲ 5 ಪಂದ್ಯಗಳನ್ನು ಗೆಲ್ಲುವ ಮೂಲಕ ಪಂಜಾಬ್‌ ತನ್ನ ಪಾರಮ್ಯ ಮೆರೆದಿತ್ತು. ಅಂದು ಜಾರ್ಜ್‌ ಬೈಲಿ ನಾಯಕತ್ವವಿತ್ತು.

ನೂತನ ನಾಯಕ ರಾಹುಲ್‌ ಪಂಜಾಬ್‌ ತಂಡವನ್ನು ಮೇಲೆತ್ತಿ ಪ್ರಶಸ್ತಿ ಪೀಠದಲ್ಲಿ ಕುಳ್ಳಿರಿಸಬಹುದೇ, ಕುಂಬ್ಳೆ ಅವರ ಮಾರ್ಗದರ್ಶನ ಫ‌ಲಪ್ರದವಾದೀತೇ, ಮೊಹಾಲಿ ಮೂಲದ ಫ್ರಾಂಚೈಸಿಯಲ್ಲಿ ಕನ್ನಡಿಗರ ಕ್ರಿಕೆಟ್‌ ಸೇನೆ ಕಮಾಲ್‌ ಮಾಡೀತೇ ಎಂಬುದೆಲ್ಲ ಈ ಸಲದ ನಿರೀಕ್ಷೆಗಳು.

Advertisement

ಬ್ಯಾಟಿಂಗ್‌ ಸರದಿ ಬಲಿಷ್ಠ
ಉತ್ತಮ ಫಾರ್ಮ್ನಲ್ಲಿರುವ ರಾಹುಲ್‌, ಆರ್‌ಸಿಬಿಯಿಂದ ದೂರಹೋದ ಯುನಿವರ್ಸ್‌ ಬಾಸ್‌ ಕ್ರಿಸ್‌ ಗೇಲ್‌, ಇಂಗ್ಲೆಂಡ್‌ ಸರಣಿಯಲ್ಲಿ ಸ್ಫೋಟಕ ಪ್ರದರ್ಶನ ನೀಡಿದ ಗ್ಲೆನ್‌ ಮ್ಯಾಕ್ಸ್‌ವೆಲ್‌, ಟೆಸ್ಟ್‌ ಆರಂಭಕಾರ ಮಾಯಾಂಕ್‌ ಅಗರ್ವಾಲ್‌, ಪರಿಣಾಮಕಾರಿ ಬೌಲರ್‌ ಮೊಹಮ್ಮದ್‌ ಶಮಿ, ಸ್ಪಿನ್‌ ಬೌಲಿಂಗ್‌ ಆಲ್‌ರೌಂಡರ್‌ ಕೃಷ್ಣಪ್ಪ ಗೌತಮ್‌, ಬಿಗ್‌ ಹಿಟ್ಟಿಂಗ್‌ ಕೀಪರ್‌ ನಿಕೋಲಸ್‌ ಪೂರಣ್‌, ಯುವ ಲೆಗ್‌ಸ್ಪಿನ್ನರ್‌ ರವಿ ಬಿಶ್ನೋಯ್‌ ಅವರೆಲ್ಲ ಪಂಜಾಬ್‌ ತಂಡದ ಸ್ಟಾರ್‌ ಆಟಗಾರರು.

ಪಂಜಾಬ್‌ ತಂಡದ ಬ್ಯಾಟಿಂಗ್‌ ಸರದಿ ಬಗ್ಗೆ ಎರಡು ಮಾತಿಲ್ಲ. ಅದು ಹೆಚ್ಚು ಬಲಿಷ್ಠ. ಗೇಲ್‌, ರಾಹುಲ್‌, ಮ್ಯಾಕ್ಸ್‌ವೆಲ್‌, ಪೂರಣ್‌, ಮನ್‌ದೀಪ್‌… ಇವರಲ್ಲಿ ಇಬ್ಬರು ಸಿಡಿದರೂ ತಂಡಕ್ಕೆ ಬಂಪರ್‌ ಮೊತ್ತ ಕಟ್ಟಿಟ್ಟ ಬುತ್ತಿ. ಮ್ಯಾಕ್ಸ್‌ವೆಲ್‌, ಕೆ. ಗೌತಮ್‌, ಜಿಮ್ಮಿ ನೀಶಮ್‌ ಅವರಂಥ ಆಲ್‌ರೌಂಡರ್ ತಂಡದ ಆಸ್ತಿ.

ಆದರೆ ಬೌಲಿಂಗ್‌? ಬ್ಯಾಟಿಂಗಿಗೆ ಹೋಲಿಸಿದರೆ ಪಂಜಾಬ್‌ನ ಬೌಲಿಂಗ್‌ ಮೇಲ್ನೋಟಕ್ಕೆ ದುರ್ಬಲವಾಗಿ ಗೋಚರಿಸುತ್ತದೆ. ಉಳಿದ ತಂಡಗಳಲ್ಲಿರುವಂತೆ ಘಾತಕ ಬೌಲರ್‌ಗಳು ಇಲ್ಲಿಲ್ಲ. ಬೌಲಿಂಗಿನಿಂದಲೇ ಪಂದ್ಯ ಗೆಲ್ಲಿಸಬಲ್ಲವರ ಕೊರತೆ ಇದೆ. ಇಲ್ಲಿ ಯಶಸ್ವಿಯಾದರೆ ಪಂಜಾಬ್‌ ಮೇಲೆ ಹೆಚ್ಚಿನ ನಿರೀಕ್ಷೆ ಇರಿಸಬಹುದು.

ಪಂಜಾಬ್‌ ತಂಡ
ಕೆ.ಎಲ್‌. ರಾಹುಲ್‌ (ನಾಯಕ), ಕ್ರಿಸ್‌ ಗೇಲ್‌, ಮಾಯಾಂಕ್‌ ಅಗರ್ವಾಲ್‌, ಮನ್‌ದೀಪ್‌ ಸಿಂಗ್‌, ಕರುಣ್‌ ನಾಯರ್‌, ಸರ್ಫ್ ರಾಜ್‌ ಖಾನ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌, ನಿಕೋಲಸ್‌ ಪೂರಣ್‌, ಪ್ರಭ್‌ಸಿಮ್ರಾನ್‌ ಸಿಂಗ್‌, ಜಿಮ್ಮಿ ನೀಶಮ್‌, ದೀಪಕ್‌ ಹೂಡಾ, ಕೆ. ಗೌತಮ್‌, ತೇಜಿಂದರ್‌ ಸಿಂಗ್‌, ಅರ್ಶದೀಪ್‌ ಸಿಂಗ್‌, ಕ್ರಿಸ್‌ ಜೋರ್ಡನ್‌, ದರ್ಶನ್‌ ನಲ್ಕಂಡೆ, ಹಾರ್ಡಸ್‌ ವಿಲ್‌ಜೊàನ್‌, ಹರ್‌ಪ್ರೀತ್‌ ಬ್ರಾರ್‌, ಇಶಾನ್‌ ಪೊರೆಲ್‌, ಜೆ. ಸುಚಿತ್‌, ಮೊಹಮ್ಮದ್‌ ಶಮಿ, ಮುಜೀಬ್‌ ಉರ್‌ ರಹಮಾನ್‌, ಮುರುಗನ್‌ ಅಶ್ವಿ‌ನ್‌, ರವಿ ಬೊಶ್ನೋಯ್‌, ಶೆಲ್ಡನ್‌ ಕಾಟ್ರೆಲ್‌.

Advertisement

Udayavani is now on Telegram. Click here to join our channel and stay updated with the latest news.

Next