Advertisement

ಐದು ಕುಟುಂಬಗಳಿಗೆ ಜಲಬಂಧನ

04:20 PM Jul 10, 2018 | Team Udayavani |

ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ವರುಣನ ಆರ್ಭಟ ಸೋಮವಾರವೂ ಮುಂದುವರಿದಿದೆ. ಭದ್ರಾ ನದಿ ಉಕ್ಕಿ ಹರಿಯುತ್ತಿರುವುದರಿಂದ ಮೂಡಿಗೆರೆ ತಾಲೂಕಿನ ಹೊಳೆಕುಡಿಗೆ ಗ್ರಾಮದಲ್ಲಿ ಐದು ಕುಟುಂಬಗಳು ಕಳೆದ ಒಂದು ವಾರದಿಂದ ಮನೆಯಿಂದ ಹೊರ ಬರಲು ಆಗದೆ ನರಕಯಾತನೆ ಅನುಭವಿಸುತ್ತಿವೆ.

Advertisement

ಮೂಡಿಗೆರೆ ತಾಲೂಕಿನ ಹೊಳೆಕುಡಿಗೆ ಗ್ರಾಮಕ್ಕೆ ರಸ್ತೆ ಸಂಪರ್ಕವಿಲ್ಲ. ಈ ಗ್ರಾಮದಲ್ಲಿ ವಾಸವಾಗಿರುವ ಐದು ಕುಟುಂಬಗಳು ಗ್ರಾಮದಿಂದ ಬೇರೆಡೆ ತೆರಳಬೇಕಾದರೆ ಭದ್ರಾ ನದಿ ದಾಟಬೇಕಾಗಿದೆ. ಕಳೆದ 40 ವರ್ಷಗಳಿಂದ ಇಲ್ಲಿಯ ಜನ ತೆಪ್ಪದ ಸಹಾಯದಿಂದ ನದಿ ದಾಟಿ ಬೇರೆಡೆ ತೆರಳುತ್ತಿದ್ದರು. 

ಆದರೆ ಕಳೆದ ಹಲವು ದಿನಗಳಿಂದ ಎಡಬಿಡದೆ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಭದ್ರಾ
ನದಿಯಲ್ಲಿ ನೀರು ಉಕ್ಕಿ ಹರಿಯುತ್ತಿದೆ. ಇದರಿಂದಾಗಿ ನದಿಯಲ್ಲಿ ತೆಪ್ಪವನ್ನೂ ಬಳಸಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಮನೆಯಿಂದ ಹೊರ ಬರಲು ಸಾಧ್ಯವಾಗದೆ ನಿತ್ಯ ಬಳಕೆ ಸಾಮಗ್ರಿಗಳನ್ನು ತರಲೂ ಪರಿತಪಿಸುವಂತಾಗಿದೆ.

ಶೃಂಗೇರಿ ತಾಲೂಕಿನಲ್ಲೂ ಸೋಮವಾರ ನಿರಂತರ ಮಳೆ ಸುರಿಯುತ್ತಲೇ ಇದ್ದು, ತುಂಗಾ ನದಿ ತುಂಬಿ ಹರಿಯುತ್ತಿದೆ.
ಮೆಣಸೆ ಗ್ರಾಪಂ ವ್ಯಾಪ್ತಿಯ ಕಿಕ್ರೆ ಹಳ್ಳದ ಸೇತುವೆ ಮೇಲೆ ನೀರು ಹರಿಯುತ್ತಿದ್ದು, ಸಂಚಾರ ಸ್ಥಗಿತಗೊಂಡಿದೆ. ಕಿಕ್ರೆ ರಸ್ತೆ ಬಂದ್‌ ಆದ ಪರಿಣಾಮ ಸಸಿಮನೆ-ಕೆರೆಮನೆ ರಸ್ತೆ ಮೂಲಕ ಜನ ಸಂಚರಿಸಲು ಆರಂಭಿಸಿದ್ದಾರೆ. ಆದರೆ ಮಧ್ಯಾಹ್ನ ಮರಟೆ ಹಳ್ಳವೂ ಉಕ್ಕಿ ಹರಿದ ಪರಿಣಾಮ ಇಲ್ಲಿಯೂ ಸಂಚಾರ ಸ್ಥಗಿತಗೊಂಡು ಜನ ಪರದಾಡಿದರು. ಸತತ ಮಳೆಯಿಂದ ಹಲವೆಡೆ ಭೂ ಕುಸಿತವಾಗಿದೆ.

ಎನ್‌.ಆರ್‌.ಪುರ ಹಾಗೂ ಕೊಪ್ಪ ತಾಲೂಕುಗಳಲ್ಲಿಯೂ ಬೆಳಗ್ಗೆಯಿಂದ ಮಳೆ ಸುರಿಯುತ್ತಿದೆ. ಚಿಕ್ಕಮಗಳೂರು ನಗರ
ಸೇರಿದಂತೆ ತಾಲೂಕಿನ ವಿವಿಧೆಡೆಗಳಲ್ಲಿ ಬೆಳಗ್ಗೆಯಿಂದ ಆಗಾಗ ಮಳೆ ಜೋರಾಗಿ ಸುರಿಯುತ್ತಿದೆ. ಉಳಿದಂತೆ ಬಯಲು ಸೀಮೆಯ ಕಡೂರು ಮತ್ತು ತರೀಕೆರೆ ತಾಲೂಕುಗಳಲ್ಲಿ ಇಡೀದಿನ ಮೋಡ ಕವಿದ ವಾತಾವರಣ ನಿರ್ಮಾಣವಾಗಿದ್ದು, ಆಗಾಗ ಸೋನೆ ಮಳೆಯಾಗಿದೆ.

Advertisement

ಗಿರಿ ಶ್ರೇಣಿಯಲ್ಲಿ ಸುಗಮ ಸಂಚಾರ: ಧಾರಾಕಾರ ಮಳೆಯಿಂದಾಗಿ ಮುಳ್ಳಯ್ಯನಗಿರಿಯ ಅಲ್ಲಲ್ಲಿ ಗುಡ್ಡ ಕುಸಿದು ಭಾನುವಾರ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ವಾರಾಂತ್ಯವಾಗಿದ್ದರಿಂದ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದ್ದರಿಂದ ಕುಸಿದಿದ್ದ ಬಂಡೆ ಕಲ್ಲುಗಳನ್ನು ತೆರವುಗೊಳಿಸಲು ವಿಳಂಬವಾಗಿತ್ತು. ಪ್ರವಾಸಿಗರ ಸಂಖ್ಯೆ ಕಡಿಮೆಯಾದ ಕೂಡಲೇ ಭಾನುವಾರ ರಾತ್ರಿಯೇ ಕಲ್ಲುಗಳನ್ನು ತೆರವುಗೊಳಿಸಲಾಯಿತು. ಸೋಮವಾರವು ಗಿರಿಶ್ರೇಣಿಯಲ್ಲಿ ಉತ್ತಮ ಮಳೆಯಾಗಿದ್ದರೂ ಎಲ್ಲಿಯೂ ಗುಡ್ಡ ಕುಸಿತವಾಗಿರುವ ಬಗ್ಗೆ ವರದಿಯಾಗಿಲ್ಲ

ಮುಂದುವರಿದ ವರುಣನ ಆರ್ಭಟ
ಶಿವಮೊಗ್ಗ:
ಮೂರ್‍ನಾಲ್ಕು ದಿನಗಳಿಂದ ಪುನರ್ವಸು ಮಳೆ ತನ್ನ ಅಬ್ಬರ ತೋರುತ್ತಿದ್ದು, ತೀರ್ಥಹಳ್ಳಿ, ಸಾಗರ, ಹೊಸನಗರ ವ್ಯಾಪ್ತಿಯಲ್ಲಿ ಭರ್ಜರಿ ಮಳೆಯಾಗುತ್ತಿದೆ. ಭಾನುವಾರ ಎಡೆಬಿಡದೆ ಸುರಿದ ಮಳೆಗೆ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದ ಜನಜೀವನ ಅಸ್ತವ್ಯಸ್ತವಾಗಿದೆ. ಸೋಮವಾರ ಮಧ್ಯಾಹ್ನದ ನಂತರ ಮಳೆ ಅಬ್ಬರ ಕಡಿಮೆಯಾಗಿದೆ. ಮೂರ್‍ನಾಲ್ಕು ದಿನಗಳಿಂದ ಮಳೆ ಅಬ್ಬರಿಸುತ್ತಿದ್ದ ಕಾರಣ ಸೋಮವಾರ ಜಿಲ್ಲಾಧಿಕಾರಿ ತೀರ್ಥಹಳ್ಳಿ ಶಾಲೆಗಳಿಗೆ ರಜೆ ಘೋಷಣೆ ಮಾಡಿದ್ದರು. ಶಾಲೆ ರಜೆಯಿದ್ದ ಕಾರಣ ತಾಯಿಯೊಂದಿಗೆ ದಿನಸಿ ಖರೀದಿಗೆ ಹೋಗುತ್ತಿದ್ದ ಬಾಲಕಿಯೊಬ್ಬಳು ಕಾಲುಸಂಕ ದಾಟುವಾಗ ಜಾರಿ ಬಿದ್ದು ಹಳ್ಳದಲ್ಲಿ ಕೊಚ್ಚಿ ಹೋಗಿರುವ ಘಟನೆ ಆಗುಂಬೆ ಬಳಿಯ ಹೊನ್ನೆತಾಳು ಗ್ರಾಪಂ ವ್ಯಾಪ್ತಿಯ ದುಡ್ಲಿ ಮನೆ ಬಳಿ ನಡೆದಿದೆ. ಆಗಾಗ ಬರುತ್ತಿರುವ ಜಡಿ ಮಳೆಯಿಂದಾಗಿ ಶೋಧ ಕಾರ್ಯಕ್ಕೆ ತೊಡಕಾಗಿದೆ. ಬಾಲಕಿ ಕೊಚ್ಚಿ ಹೋಗಿರುವ ಹಳ್ಳವು ಮಾಲತಿ ನದಿ ಸೇರಿ ಅಲ್ಲಿಂದ ಮುಂದೆ ತುಂಗಾ ನದಿ ಸೇರುತ್ತದೆ. ಜಡಿ ಮಳೆ ಹಾಗೂ ಉಕ್ಕಿ ಹರಿಯುತ್ತಿರುವ ಹಳ್ಳಕೊಳ್ಳ, ನದಿಗಳಿಂದಾಗಿ ಶೋಧ ಕಾರ್ಯಕ್ಕೆ ಅಡ್ಡಿಯಾಗಿದೆ. ಆಶಿಕಾ (15) ಕೊಚ್ಚಿ ಹೋದ ಯುವತಿ. ದಿ| ಯೋಗೇಂದ್ರ ಗೌಡ್ರು ಹಾಗೂ ಅನಿತಾ ದಂಪತಿ ಪುತ್ರಿಯಾದ ಆಕೆ ಗುಡ್ಡೇಕೇರಿಯಲ್ಲಿ 9ನೇ ತರಗತಿ ಓದುತ್ತಿದ್ದಳು.

ಇನ್ನು ಅರೆಮಲೆನಾಡು ಶಿವಮೊಗ್ಗ, ಭದ್ರಾವತಿ, ಶಿಕಾರಿಪುರ, ಸೊರಬದಲ್ಲಿ ಸಾಮಾನ್ಯ ಮಳೆಯಾಗಿದೆ. ಉಳಿದಂತೆ ಯಾವುದೇ ತಾಲೂಕುಗಳಲ್ಲಿ ಮಳೆ ಅವಘಡಗಳು ಸಂಭವಿಸಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next