Advertisement

ಉಡುಪಿ: ಮತ್ತೆ 5 ಸಾವು, 225 ಪಾಸಿಟಿವ್‌ ; ಜಿಲ್ಲೆಯಲ್ಲಿ ಕೋವಿಡ್ 19ನಿಂದ ಮೊದಲ ಸಾವು

02:03 AM Jul 28, 2020 | Hari Prasad |

ಉಡುಪಿ: ಜಿಲ್ಲೆಯಲ್ಲಿ ಕೇವಲ ಕೋವಿಡ್ 19 ಕಾರಣದಿಂದ ಮೊದಲ ಸಾವು ಸಂಭವಿಸಿದೆ.

Advertisement

ಇದಲ್ಲದೆ ಮತ್ತೆ ನಾಲ್ವರು ಮೃತ ಪಟ್ಟಿದ್ದು ಅವರಲ್ಲೂ ಕೋವಿಡ್‌ ಸೋಂಕು ದೃಢಪಟ್ಟಿದೆ.

ಜಿಲ್ಲೆಯಲ್ಲಿ ಒಟ್ಟು ಸಾವಿನ ಸಂಖ್ಯೆ 21ಕ್ಕೇರಿದೆ. ಸೋಮವಾರ 286 ನೆಗೆಟಿವ್‌ ಮತ್ತು 225 ಪಾಸಿಟಿವ್‌ ಪ್ರಕರಣಗಳು ವರದಿಯಾಗಿವೆ.

ಒಟ್ಟು ಸೋಂಕಿತರಲ್ಲಿ ಮಣಿಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರೂ ಸೇರಿದ್ದಾರೆ.

51 ಮಂದಿ ಗುಣಮುಖ
225 ಸೋಂಕಿತರಲ್ಲಿ 121 ಪುರುಷರು, 91 ಮಹಿಳೆಯರು, 7 ಗಂಡು ಮಕ್ಕಳು, 6 ಹೆಣ್ಣು ಮಕ್ಕಳು ಇದ್ದಾರೆ. ಉಡುಪಿ ತಾಲೂಕಿನಲ್ಲಿ 68 ಮಂದಿ, ಕುಂದಾಪುರದಲ್ಲಿ 115, ಕಾರ್ಕಳದಲ್ಲಿ 42 ಇದ್ದಾರೆ. 51 ಮಂದಿ ಆಸ್ಪತ್ರೆಗಳಿಂದ ಗುಣಮುಖರಾಗಿ ಬಿಡುಗಡೆಗೊಂಡರು.

Advertisement

ಶಿರ್ವ: ಮೆಸ್ಕಾಂ ಸಿಬಂದಿಗೆ ಸೋಂಕು
ಇಲ್ಲಿನ ಮೆಸ್ಕಾಂ ಸಿಬಂದಿಗೆ ಸೋಮವಾರ ಕೋವಿಡ್ 19 ಸೋಂಕು ದೃಢಪಟ್ಟಿದೆ. ಕಚೇರಿಯನ್ನು 3 ದಿನ ಸೀಲ್‌ಡೌನ್‌ ಮಾಡಲಾಗಿದೆ. ಅವರ ಇಂದ್ರಪುರದ ಮನೆ, ಒಂದು ಅಂಗಡಿ ಮತ್ತು ಸಮೀಪದ 11 ಮನೆಗಳನ್ನು ಸೀಲ್‌ಡೌನ್‌ ಮಾಡಲಾಗಿದೆ.

ಸಚ್ಚೇರಿಪೇಟೆ: ವೈದ್ಯ, ಸಿಬಂದಿಗೆ ಪಾಸಿಟಿವ್‌
ಸಚ್ಚೇರಿಪೇಟೆ ಪ್ರಾ.ಆ. ಕೇಂದ್ರದ ವೈದ್ಯಾಧಿಕಾರಿ ಮತ್ತು ಓರ್ವ ಸಿಬಂದಿಗೆ ಸೋಂಕು ದೃಢಪಟ್ಟಿದೆ. ಈ ಹಿಂದೆ ಸಚ್ಚೇರಿಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ಡಿ ಗ್ರೂಪ್‌ ಮಹಿಳಾ ಸಿಬಂದಿ ಹಾಗೂ ಮುಂಡ್ಕೂರು ಪ್ರಾ.ಆ. ಕೇಂದ್ರದ ಆರೋಗ್ಯ ಸಹಾಯಕಿಗೆ ಕೋವಿಡ್ 19 ಸೋಂಕು ಬಾಧಿಸಿತ್ತು. ಸಂಕಲಕರಿಯದಲ್ಲಿ ಈ ಹಿಂದೆ ಸೋಂಕು ದೃಢ ಪಟ್ಟಿದ್ದ ಮನೆಯ ಮಗು ಸಹಿತ ಇನ್ನೋರ್ವರಿಗೆ ಸೋಂಕು ದೃಢಪಟ್ಟಿದೆ.ಮುಲ್ಲಡ್ಕದಲ್ಲಿಯೂ ಒಂದು ಪಾಸಿಟಿವ್‌ ಪ್ರಕರಣ ವರದಿಯಾಗಿದೆ.

ಕುಂದಾಪುರ, ಬೈಂದೂರು: 41 ಮಂದಿಗೆ ಪಾಸಿಟಿವ್‌
ತಾಲೂಕಿನ 19 ಮಂದಿಗೆ ಹಾಗೂ ಬೈಂದೂರು ತಾಲೂಕಿನ 22 ಮಂದಿ ಸೇರಿದಂತೆ ಒಟ್ಟು 41 ಮಂದಿಗೆ ಸೋಮವಾರ ಕೋವಿಡ್ 19 ಪಾಸಿಟಿವ್‌ ಬಂದಿದೆ. ಉಳ್ಳೂರು-74 ಗ್ರಾಮದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಕುಂದಾಪುರ ಪುರಸಭೆ ವ್ಯಾಪ್ತಿಯ 6 ಮಂದಿ, ಗಂಗೊಳ್ಳಿಯ ಒಂದೇ ಮನೆಯ ನಾಲ್ವರು, ಬೇಳೂರಿನ ಮೂವರು, ತೆಕ್ಕಟ್ಟೆ, ಸಿದ್ದಾಪುರದ ತಲಾ ಇಬ್ಬರು, ಕಮಲಶಿಲೆ, ಆಜ್ರಿಯ ತಲಾ ಒಬ್ಬರಿಗೆ ಪಾಸಿಟಿವ್‌ ಬಂದಿದೆ. ಬೈಂದೂರು ತಾಲೂಕಿನ ಶಿರೂರಿನ ಆರು ಮಂದಿ, ಕಿರಿಮಂಜೇಶ್ವರದ ಐವರು, ಉಪ್ಪುಂದ, ಯಡ್ತರೆಯ ತಲಾ ಮೂವರು, ಹಡವು, ಕೊಲ್ಲೂರು, ಕೆರ್ಗಾಲು, ಮುದೂರು, ಬಿಜೂರಿನ ತಲಾ ಒಬ್ಬರಿಗೆ ಪಾಸಿಟಿವ್‌ ದೃಢಪಟ್ಟಿದೆ.

ಕಮಲಶಿಲೆ ವ್ಯಕ್ತಿಗೆ ಪಾಸಿಟಿವ್‌
ಬೆಂಗಳೂರಿನಿಂದ 4 ದಿನಗಳ ಹಿಂದೆ ಕಮಲಶಿಲೆಗೆ ಬಂದ ವ್ಯಕ್ತಿಯನ್ನು ಕೋವಿಡ್ 19 ಸೋಂಕು ಬಾಧಿಸಿದೆ. ಊರಿಗೆ ಬಂದ ಮರುದಿನ ಕುಂದಾಪುರ ಕೋವಿಡ್‌ ಆಸ್ಪತ್ರೆಗೆ ಪರೀಕ್ಷೆಗೆ ತೆರಳಿದ್ದು, ಅಲ್ಲಿಯೇ ದಾಖಲಾಗಿದ್ದಾರೆ.

ಬಸ್ರೂರು, ಗುಲ್ವಾಡಿ, ಕಾವ್ರಾಡಿ: 11 ಪ್ರಕರಣ
ಬಸ್ರೂರು ಗ್ರಾ.ಪಂ. ವ್ಯಾಪ್ತಿಯ ಮೂವರು ಪುರುಷರು, ಇಬ್ಬರು ಮಹಿಳೆಯರು, ಗುಲ್ವಾಡಿ ಗ್ರಾ.ಪಂ.ನ ಪುರುಷ, ಇಬ್ಬರು ಮಹಿಳೆಯರು, ಕಾವ್ರಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಇಬ್ಬರು ಪುರುಷರು ಹಾಗೂ ಮಹಿಳೆಯಲ್ಲಿ ಸೋಮವಾರ ಕೋವಿಡ್ 19 ಸೋಂಕು ದೃಢವಾಗಿದೆ.

ಜಿಲ್ಲೆಯಲ್ಲಿ ಕೋವಿಡ್ 19 ಸೋಂಕಿನಿಂದಲೇ ಮೊದಲ ಸಾವು
– ಕಾರ್ಕಳ ತಾಲೂಕಿನ 60 ವರ್ಷದ ವ್ಯಕ್ತಿಯನ್ನು ಕೋವಿಡ್ 19 ಲಕ್ಷಣಗಳೊಂದಿಗೆ ಉಡುಪಿಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಪಾಸಿಟಿವ್‌ ಬಂದ ಬಳಿಕ ಡಾ| ಟಿಎಂಎ ಪೈ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಅವರು ಸೋಮವಾರ ಮೃತಪಟ್ಟರು. ಅವರಲ್ಲಿ ಬೇರೆ ಯಾವುದೇ ಆರೋಗ್ಯ ಸಮಸ್ಯೆಗಳು ಇರಲಿಲ್ಲ ಎನ್ನಲಾಗಿದೆ. ಆದ್ದರಿಂದ ಇದನ್ನು ಕೋವಿಡ್ 19 ಸೋಂಕಿನ ಲಕ್ಷಣದಿಂದ ಜಿಲ್ಲೆಯಲ್ಲಿ ಸಂಭವಿಸಿದ ಮೊದಲ ಸಾವು ಎಂದು ಪರಿಗಣಿಸಲಾಗಿದೆ.

– ನೇಜಾರಿನ 44 ವರ್ಷದ ವ್ಯಕ್ತಿ ಹೃದ್ರೋಗ ಸಮಸ್ಯೆಯಿಂದ ಕಲ್ಯಾಣಪುರ ಆಸ್ಪತ್ರೆಗೆ ಸೇರಿದ್ದರು. ಆರೋಗ್ಯ ಸ್ಥಿತಿ ಗಂಭೀರವಿದ್ದ ಕಾರಣ ಶನಿವಾರ ರಾತ್ರಿ ಜಿಲ್ಲಾಸ್ಪತ್ರೆಗೆ ಕರೆದೊಯ್ಯುವಾಗ ನಿಧನ ಹೊಂದಿದರು. ಮೊದಲಿನ ಸಾಮಾನ್ಯ ಪರೀಕ್ಷೆಯಲ್ಲಿ ನೆಗೆಟಿವ್‌ ಬಂದಿದ್ದು, ಸಾವಿನ ಬಳಿಕ ಪರೀಕ್ಷಿಸಿದಾಗ ಪಾಸಿಟಿವ್‌ ವರದಿಯಾಗಿದೆ.

– ಕುಂದಾಪುರ ತಾಲೂಕು ಶಂಕರ ನಾರಾಯಣದ 45 ವರ್ಷದವರೊಬ್ಬರನ್ನು  ಕುಂದಾಪುರ ಆಸ್ಪತ್ರೆಯಿಂದ ಜಿಲ್ಲಾಸ್ಪತ್ರೆಗೆ ಸೋಮವಾರ ಕರೆದುಕೊಂಡು ಬರುವಾಗ ಕೊನೆಯುಸಿರೆಳೆದರು. ಪರೀಕ್ಷೆಯಲ್ಲಿ ಪಾಸಿಟಿವ್‌ ವರದಿಯಾಗಿದೆ.

– ಕುಂದಾಪುರ ಆಸ್ಪತ್ರೆಯಲ್ಲಿ 60 ವರ್ಷದವರೊಬ್ಬರನ್ನು ದಾಖಲಿಸಿಕೊಳ್ಳಲಾಗಿತ್ತು. ಐಸಿಯು ಬೆಡ್‌ಗಾಗಿ ಬ್ರಹ್ಮಾವರಕ್ಕೆ ಕರೆತರುವಾಗ ರವಿವಾರ ರಾತ್ರಿ ನಿಧನ ಹೊಂದಿದರು.

– ಕುಂದಾಪುರ ತಾಲೂಕಿನ ಉಳ್ಳೂರು-74 ಗ್ರಾಮದ 40 ವರ್ಷದ ವ್ಯಕ್ತಿ ಜು. 24ರಂದು ಬೆಂಗಳೂರಿನಿಂದ ಆಗಮಿಸಿದ್ದರು. ಬಳಿಕ ಜ್ವರ ಕಾಣಿಸಿಕೊಂಡಿತ್ತು. ರವಿವಾರ ಕೋವಿಡ್ 19 ಸೋಂಕು ದೃಢವಾಗಿದ್ದು, ಕೂಡಲೇ ಕುಂದಾಪುರದ ಕೋವಿಡ್‌ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ ವೇಳೆಗೆ ಮೃತಪಟ್ಟರು. ಕುಂದಾಪುರದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು. ಅವರು ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ನೇಜಾರು: 54 ಮನೆ, 8 ಅಂಗಡಿಗಳು ಸೀಲ್‌ಡೌನ್‌
ಕೋವಿಡ್ 19 ಸೋಂಕಿನಿಂದ ಮೃತಪಟ್ಟ ನೇಜಾರಿನ ವ್ಯಕ್ತಿಯ ಮನೆಯ ಸುತ್ತಮುತ್ತ ಇರುವ ಒಟ್ಟು 54 ಮನೆಗಳು ಮತ್ತು 8 ಅಂಗಡಿಗಳನ್ನು ಸೀಲ್‌ಡೌನ್‌ ಮಾಡಲಾಗಿದೆ. ಮನೆ ಹಾಗೂ ಅಂಗಡಿಗೆ ಸಂಬಂಧಿಸಿದ ಒಟ್ಟು 241 ಮಂದಿಯನ್ನು 14 ದಿನಗಳ ಕಾಲ ಹೋಂ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಣಿಪುರ ಗ್ರಾಮದಲ್ಲಿ ಐದು, ಕೊರಂಗ್ರಪಾಡಿ, 41 ಶೀರೂರಿನಲ್ಲಿ ತಲಾ ಒಂದು ಮನೆಯನ್ನು ಸೀಲ್‌ಡೌನ್‌ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next