Advertisement

ಪಂಚ ದಿನಗಳ ಹಬ್ಬ ನಾಗರ ಪಂಚಮಿ ಸಂಭ್ರಮ

05:17 PM Aug 13, 2018 | |

ನರಗುಂದ: ‘ಪಂಚಮಿ ಬಂತು ಸನಿಯಾಕ.. ನಮ್ಮಣ್ಣಾ ಬರಲಿಲ್ಲ ಕರಿಯಾಕ, ಅವರೇನವ್ವ ಸಾವ್ಕಾರು.. ನಾವೇನವ್ವ ಬಡವ್ರು..’ ಎಂಬ ಜಾನಪದ ಹಾಡು ನಾಗರ ಪಂಚಮಿ ಹಬ್ಬವನ್ನು ಶ್ರೀಮಂತಗೊಳಿಸಿದೆ. ಗಂಡನ ಮನೆಗೆ ಹೋದ ಮಹಿಳೆಯರಿಗೆ ತವರು ನೆನಪಿಸುವ ಈ ಹಾಡು ಜನಪದ ಕಲಿಗಳ ಅನುಭವದಿಂದ ರಚಿಸಿದ ಉತ್ಕೃಷ್ಟ ಗೀತೆ.

Advertisement

ಉತ್ತರ ಕರ್ನಾಟಕ ಬಯಲು ಸೀಮೆಯಲ್ಲಿ ವಿಶೇಷವಾಗಿ ಪಂಚ (ಐದು) ದಿನಗಳು ಆಚರಿಸುವ, ಮಹಿಳೆಯರು ಹೇಗೆ ಸಂಭ್ರಮಿಸುತ್ತಾರೆ ಎಂಬುದನ್ನು ಜನಪದ ಕಲಾವಿದರು ಅಕ್ಷರಗಳಿಂದ ಬಣ್ಣಿಸುವ ಹಬ್ಬವಿದು. ನಾಗದೇವ ಅಪಾಯ ತರದಿರಲಿ, ಮಳೆ-ಬೆಳೆ ಸಮೃದ್ಧವಾಗಲಿ ಎಂದು ರೈತರು ಪ್ರಾರ್ಥಿಸುವ ನಾಗರಪಂಚಮಿ ಬರ ಇರಲಿ, ಬೆಳೆ ಇರಲಿ ವೈಭವದಿಂದ ಆಚರಣೆಗೊಳ್ಳುತ್ತದೆ.

ಸಹೋದರತ್ವ ಸಾರಿದೆ: ಅಣ್ಣ-ತಂಗಿ ಸಂಬಂಧ ಗಟ್ಟಿಗೊಳಿಸುವ ರಕ್ಷಾಬಂಧನ ಮುನ್ನವೇ ಅಣ್ಣ-ತಂಗಿ ಬಾಂಧವ್ಯ ಬೆಸೆಯುವಲ್ಲಿ ಮುನ್ನುಡಿ ಇಟ್ಟಿದೆ. ಗಂಡನ ಮನೆಗೆ ಹೋದ ತಂಗಿ ಹಬ್ಬಕ್ಕೆ ಕರೆಯಲು ಅಣ್ಣನಿಗೆ ನೆನಪಿಸುವ ಜನಪದ ಸಾಲುಗಳು ನಾಗ ಪಂಚಮಿಯಲ್ಲಿ ಸಹೋದರತ್ವ ಸಾರಿದೆ ಎಂಬುದು ಮಹತ್ವದ್ದು.

ಐದು ದಿನದ ಹಬ್ಬ: ನಾಗರ ಅಮಾವಾಸ್ಯೆ ಎರಡನೇ ದಿನವಾದ ಇಂದು ಆ.13ರಿಂದ 5 ದಿನಗಳು ಆಚರಿಸಲ್ಪಡುವ ನಾಗರ ಪಂಚಮಿ ಪ್ರಯುಕ್ತ ನಾಗರ ಹುತ್ತ, ದೇವರ ಜಗುಲಿ ಮುಂದೆ ನಾಗಮೂರ್ತಿ ಇಟ್ಟು ಮನೆಮಂದಿಯೆಲ್ಲ ಹಾಲೆರೆಯುವದು, ಹುತ್ತ ಮುರಿಯುವದು, ರೊಟ್ಟಿ ಪಂಚಮಿ, ವರ್ಷ ತೊಡಕು ಹೀಗೆ ಬಹು ಆಚರಣೆ ಹಬ್ಬವಾಗಿದೆ ನಾಗರ ಪಂಚಮಿ.

ರೊಟ್ಟಿ ಪಂಚಮಿ: ಕೋಮು ಸೌಹಾರ್ದದ ಪ್ರತೀಕ ರೊಟ್ಟಿ ಪಂಚಮಿ ದಿನದಂದು ಮೊದಲೇ ತಯಾರಿಸಿದ ಕಡಕ್‌ ರೊಟ್ಟಿಯಲ್ಲಿ ತರತರದ ಪಲ್ಯೆ, ಚಟ್ನಿ, ಉಂಡಿಗಳು ಪದಾರ್ಥವಿಟ್ಟು ಪರಸ್ಪರ ಮನೆಗೆ ಹಂಚಿ ಸಮಾಜದಲ್ಲಿ ಎಲ್ಲರೂ ಒಂದೇ ಎಂಬ ಭಾವ ಬಿಂಬಿಸುವಲ್ಲಿ ಸಮಾನತೆ ಸಾರಿದ ರೊಟ್ಟಿ ಪಂಚಮಿ ಆ.13ರಂದು ಆಚರಿಸಲಾಗುತ್ತಿದೆ.

Advertisement

ಸಸಿ ಮುಡಿಯುವುದು: ಆ.14ರಂದು ಹಾಲೆರೆಯುವ ದಿನ. ಮಹಿಳೆಯರು ತಲೆಯಲ್ಲಿ ಗೋಧಿ ಸಸಿ ಮುಡಿಯುವದು ವಾಡಿಕೆ. ವಾರ ಮೊದಲೇ ಬುಟ್ಟಿಯಲ್ಲಿ ಮಣ್ಣಿನಲ್ಲಿ ಗೋಧಿ, ಗೋವಿನಜೋಳ ಬೀಜ ಹಾಕಿ ಕತ್ತಲು ಕೋಣೆಯಲ್ಲಿ ಇರಿಸಿ, ವಾರದ ಬಳಿಕ ಗಾಳಿ ಬೆಳಕು ಸೋಕದೇ ಹಳದಿ ವರ್ಣಕ್ಕೆ ಚಿಗುರೊಡೆಯುವ ಸಸಿಗಳನ್ನು ಹಾಲೆರೆಯುವ ಸಂದರ್ಭದಲ್ಲಿ ದೇವರಿಗೆ ನೈವೇದ್ಯ ಮಾಡಿ ಮಹಿಳೆಯರು, ಯುವತಿಯರು ಸಸಿ ಮುಡಿಯುವ ಪದ್ಧತಿ ಇಂದಿಗೂ ಆಚರಣೆಯಲ್ಲಿದೆ.

ವರ್ಷ ತೊಡಕು: ಆ.15ರಂದು ಹುತ್ತ ಮುರಿಯುವುದು. ಇನ್ನು ಆ.19ರಂದು ಕರೆ ಕಟಮ್ಲ ದಿನ. ಯಾವುದೇ ಕರಿದ ತಿಂಡಿ ತಯಾರಿಸುವುದಿಲ್ಲ. ಆ.17ರ ಕೊನೆಯ ದಿನ ವಿಶಿಷ್ಟವಾದುದು ವರ್ಷ ತೊಡಕು!. ಆ ದಿನ ಮಾಡಿದ ಕಾರ್ಯ ವರ್ಷಪೂರ್ತಿ ಮಾಡುವಂತಾಗುತ್ತದೆಂಬ ನಂಬಿಕೆಯಿಂದ ಅಂದು ಹೆಚ್ಚಾಗಿ ಒಳ್ಳೆ ಕೆಲಸ, ದೇವರ ಧ್ಯಾನ ರೂಢಿಯಲ್ಲಿದೆ. ಯುವತಿಯರು, ಯುವಕರು ಜೋಕಾಲಿಯಾಡಿ ಹಬ್ಬವನ್ನು ಸಂಭ್ರಮಿಸುತ್ತಾರೆ.

ಗಂಡನ ಮನೆಗೆ ಹೋದವರು ಯಾವುದೇ ಹಬ್ಬ ಕೈಬಿಟ್ಟರೂ ನಾಗರ ಪಂಚಮಿಗೆ ವಾರಗಟ್ಟಲೇ ತವರಿಗೆ ಹೋಗುವುದರಿಂದ ಇದು ಮಹಿಳೆಯರ ಹಬ್ಬವಾಗಿ ಗುರುತಿಸಿಕೊಂಡಿದೆ. ಉತ್ತರ ಕರ್ನಾಟಕ ಭಾಗದ ಗ್ರಾಮೀಣ ಪ್ರದೇಶದಲ್ಲಿ ಐದು ದಿನಗಳವರೆಗೆ ಸಾಮಾಜಿಕ ಸಾಮರಸ್ಯ ಪ್ರತಿಬಿಂಬಿಸಿದ ನಾಗರ ಪಂಚಮಿ ಸಂಭ್ರಮದಿಂದ ಆಚರಿಸಲ್ಪಡುತ್ತದೆ.

„ಸಿದ್ಧಲಿಂಗಯ್ಯ ಮಣ್ಣೂರಮಠ 

Advertisement

Udayavani is now on Telegram. Click here to join our channel and stay updated with the latest news.

Next