ಹರಿಹರ: ದೇಶದಲ್ಲಿರುವ ಒಟ್ಟು 25 ಕೋಟಿ ಕುಟುಂಬಗಳ ಪೈಕಿ ಕನಿಷ್ಟ 5 ಕೋಟಿ ಕುಟುಂಬಗಳಿಗೆ ಇನ್ನೂ ಅಡುಗೆ ಅನಿಲ ಬಳಸುವ ಅವಕಾಶ ಸಿಕ್ಕಿಲ್ಲ ಎಂದು ಸಂಸದ ಜಿ.ಎಂ.ಸಿದ್ದೇಶ್ವರ್ ಆರೋಪಿಸಿದರು. ನಗರದ ಲಕ್ಷಿ ಮಹಲ್ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಪ್ರಧಾನ ಮಂತ್ರಿ ಉಜ್ವಲ್ ಯೋಜನೆಯಡಿ ಬಿಜೆಪಿ ತಾಲೂಕು ಘಟಕ ಆಯೋಜಿಸಿದ್ದ ಫಲಾನುಭವಿಗಳ ಅಡುಗೆ ಅನಿಲ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಕಟ್ಟಿಗೆ ಆಧಾರಿತ ಒಲೆಗಳಲ್ಲಿ ಅಡುಗೆ ಮಾಡುವ ಮಾತೆಯರ ಆರೋಗ್ಯ ಹೊಗೆ, ಬೂದಿಯಿಂದ ಹಾಳಾಗುತ್ತಿದೆ, ವಿಶೇಷವಾಗಿ ಕಣ್ಣು, ಉಸಿರಾಟದ ತೊಂದರೆಗೀಡಾಗುತ್ತಿದ್ದಾರೆ ಎಂದರು.ಎಲ್‌ಪಿಜಿ ಬಳಸದ ಮನೆಗಳ ಮಾತೆಯರ ಸಂಕಷ್ಟ ದೂರಗೊಳಿಸಲು ಪ್ರಧಾನಿ ಮೋದಿ ಉಜ್ವಲ್ ಯೋಜನೆ ಜಾರಿಗೊಳಿಸಿದ್ದಾರೆ.
ಅಡುಗೆ ಅನಿಲ ಬುಕ್ಕಿಂಗ್‌ಗೆ ಆರ್ಥಿಕ ಚೈತನ್ಯವಿಲ್ಲದ ಈ ಕುಟುಂಬಗಳಿಗೆ ಸಂಪೂರ್ಣ ಉಚಿತವಾಗಿ ಬುಕ್ಕಿಂಗ್ ಮಾಡಿ ಅಡುಗೆ ಅನಿಲ ವಿತರಿಸಲಾಗುತ್ತಿದೆ ಎಂದರು. ಉಜ್ವಲ್ ಯೋಜನೆಗೆ ಜಿಲ್ಲೆಯಲ್ಲಿ 11500, ಹರಿಹರ ತಾಲೂಕಿನಲ್ಲಿ 3000 ಫಲಾನುಭವಿಗಳನ್ನು ಗುರುತಿಸಿ, ಎಲ್ಲರಿಗೂ ಈಗ ಅಡುಗೆ ಅನಿಲ ವಿತರಿಸಲಾಗುತ್ತಿದೆ.
2011ರ ಜನಗಣತಿ ಆಧರಿಸಿ ಆಯ್ಕೆ ನಡೆದಿದ್ದು, ಅರ್ಹ ಫಲಾನುಭವಿಗಳ ಹೆಸರು ಪಟ್ಟಿಯಲ್ಲಿ ಇಲ್ಲದಿದ್ದರೆ ನೇರವಾಗಿ ಸಮೀಪದ ಅನಿಲ ವಿತರಕರ ಅಂಗಡಿಗೆ ತೆರಳಿ ಸೂಕ್ತ ದಾಖಲೆಗಳನ್ನು ಸಲ್ಲಿಸಬಹುದಾಗಿದೆ ಎಂದರು. ಪಕ್ಷದ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್ ಮಾತನಾಡಿ, ರಾಜ್ಯದ 1.07 ಲಕ್ಷ ಫಲಾನುಭವಿಗಳು ಉಜ್ವಲ್ ಯೋಜನೆಗೆ ಆಯ್ಕೆಯಾಗಿದ್ದು, ಇದರಿಂದ ಉರುವಲುಗಾಗಿ ಗಿಡಮರ ನಾಶವಾಗುವುದನ್ನು ತಪ್ಪಿಸಿದಂತಾಗಿದೆ.
ನಿರ್ಮಲ ಯೋಜನೆಯಡಿ ಎಸ್ಸಿ, ಎಸ್ಟಿ ಕುಟುಂಬಕ್ಕೆ 15 ಸಾವಿರ ರೂ., ಸಾಮಾನ್ಯರಿಗೆ 12 ಸಾವಿರ ರೂ. ಅನುದಾನ ನೀಡಲಾಗುತ್ತಿದೆ. ಗ್ಯಾರಂಟರ್ ಇಲ್ಲದೆ ಸಾಲ ನೀಡುವ ಮುದ್ರಾ ಯೋಜನೆ ಜಾರಿಗೊಂಡಿದೆ ಎಂದರು. ಮಾಜಿ ಶಾಸಕ ಬಿ.ಪಿ.ಹರೀಶ್ ಮಾತನಾಡಿ, ಮಹಿಳೆಯರು ಅಭಿವೃದ್ಧಿ ಹೊಂದಿದರೆ ಮಾತ್ರ ದೇಶವು ಅಭಿವೃದ್ಧಿ ಹೊಂದಲು ಸಾಧ್ಯವೆಂಬ ಅಂಶ ಅರಿತ ಮೋದಿಯವರು ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಿದ್ದಾರೆ.
ಹೊಗೆ ರಹಿತ ಅಡುಗೆ ಕೋಣೆ ಕಲ್ಪನೆಯೊಂದಿಗೆ ಉಜ್ವಲ್ ಯೋಜನೆ ಜಾರಿ ಮಾಡಿರುವುದು ವಿಶೇಷ ಎಂದರು. ಜಿಪಂ ಮಾಜಿ ಅಧ್ಯಕ್ಷ ಎಸ್.ಎಂ.ವೀರೇಶ್ ಮಾತನಾಡಿದರು. ತಾಪಂ ಅಧ್ಯಕ್ಷೆ ಶ್ರೀದೇವಿ ಮಂಜಪ್ಪ, ಜಿಪಂ ಸದಸ್ಯರಾದ ಬಿ.ಎಂ. ವಾಗೀಶಸ್ವಾಮಿ,
-ನಿರ್ಮಲ ಮುಕುಂದ, ನಗರಸಭಾ ಸದಸ್ಯ ರಾಜು ರೋಖಡೆ, ಬಿಜೆಪಿ ಮುಖಂಡರಾದ ಗೋವಿನಹಾಳ್ ರಾಜಣ್ಣ, ಇಂಧನ ಇಲಾಖೆ ಅ ಕಾರಿ ಅಮಿತ್ ಕುಮಾರ್, ತುಳಜಪ್ಪ ಭೂತೆ, ಮಾಲತೇಶ್ ಭಂಡಾರಿ, ಅಜಿತ್ ಸಾವಂತ್, ರಾಘವೇಂದ್ರ, ಐರಣಿ ನಾಗರಾಜ್, ಡಿ.ವೈ.ಇಂದಿರಾ, ವಾಸು ಚಂದಾಪೂರ್ ಮತ್ತಿತರರಿದ್ದರು.