ಹೊಸದಿಲ್ಲಿ: ಕಾರು, ಬಸ್, ಲಾರಿಗಳ ವಿಂಡ್‌ಶೀಲ್ಡ್ (ವಾಹನಗಳ ಮುಂಭಾಗದ ಗಾಜಿನ ಪರದೆ) ಮೇಲೆ ಫಾಸ್ಟ್‌ಟ್ಯಾಗ್ ಸ್ಟಿಕ್ಕರ್ ಅಂಟಿಸಿಕೊಂಡಂತೆ, ಸದ್ಯದಲ್ಲೇ ಆಯಾ ವಾಹನಗಳ ಫಿಟ್ನೆಸ್ ಪ್ರಮಾಣಪತ್ರಗಳನ್ನೂ ಅಂಟಿಸುವುದು ಕಡ್ಡಾಯವಾಗುವ ಸಾಧ್ಯತೆಗಳಿವೆ. ಸದ್ಯಕ್ಕೆ ಈ ಕುರಿತಂತೆ ಕರಡು ನಿಯಮಗಳನ್ನು ರೂಪಿಸಿರುವ ಕೇಂದ್ರ ಸರಕಾರ, ಅದನ್ನು ಕೇಂದ್ರ ಸಾರಿಗೆ ಹಾಗೂ ಹೆದ್ದಾರಿ ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದು, ಸಾರ್ವಜನಿಕರ ಸಲಹೆಗಳನ್ನು ಆಹ್ವಾನಿಸಿದೆ.
ಫಿಟ್ನೆಸ್ ಪ್ರಮಾಣಪತ್ರದ ಸ್ಟಿಕರ್ ಎಷ್ಟು ಎತ್ತರ, ಅಗಲ ದಲ್ಲಿರಬೇಕು, ಹೊಸದಿಲ್ಲಿಯ ಅಕ್ಷರಗಳು ಎಷ್ಟು ದಪ್ಪವಿರಬೇಕು ಹಾಗೂ ಅಕ್ಷರಗಳ ನಡುವೆ ಎಷ್ಟು ಜಾಗ ಇರಬೇಕು ಎಂಬಿತ್ಯಾದಿ ಮಾಹಿತಿಗಳನ್ನು ಕರಡು ಪ್ರತಿಯಲ್ಲಿ ತಿಳಿಸಲಾಗಿದೆ.
ಯಾವ ವಾಹನಗಳಿಗೆ ಅನ್ವಯ?: ದೈತ್ಯ ಗೂಡ್ಸ್ ವಾಹನಗಳು, ಪ್ರಯಾ ಣಿಕರ ವಾಹನಗಳು, ಮಧ್ಯಮ ಗೂಡ್ಸ್ ಅಥವಾ ಪ್ರಯಾಣಿಕರ ವಾಹನಗಳು, ಲಘು ಮೋಟಾರು ವಾಹನಗಳಿಗೆ ಮಾತ್ರವಲ್ಲದೆ, ದ್ವಿಚಕ್ರ ವಾಹ ನಗಳಿಗೂ ಇದು ಅನ್ವಯವಾಗುತ್ತದೆ. ಗೂಡ್ಸ್ ಅಥವಾ ಪ್ಯಾಸೆಂಜರ್ ವಾಹನಗಳು ತಮ್ಮ ವಿಂಡ್‌ಶೀಲ್ಡ್‌ನ ಎಡ ಭಾಗದ ಮೇಲಿನ ಮೂಲೆಯಲ್ಲಿ ಅಂಟಿಸಬೇಕೆಂದು ಸೂಚಿಸ ಲಾಗಿದೆ. ದ್ವಿಚಕ್ರ ವಾಹನಗಳಲ್ಲಿ ಎದ್ದು ಕಾಣುವಂತೆ ಈ ಪ್ರಮಾಣ ಪತ್ರಗಳನ್ನು ಅಂಟಿಸಬೇಕಿರು ತ್ತದೆ ಎಂದು ಕರಡು ನಿಯಮಗಳಲ್ಲಿ ಸೂಚಿಸಲಾಗಿದೆ.
ಆಟೋ ರಿಕ್ಷಾಗಳು, ಇ-ರಿಕ್ಷಾಗಳು, ಇ- ಕಾರ್ಟ್‌ಗಳು ಹಾಗೂ ಕ್ವಾಡ್ರಿಸೈಕರ್ (1.5 ಮೀಟರ್ ಅಗಲ ಮತ್ತು 3.7 ಮೀ. ಒಳಗಿನ ನಾಲ್ಕು ಚಕ್ರದ ವಾಹನಗಳು) ಮಾದರಿಯ ವಾಹನಗಳಿಗೂ ಈ ನಿಯಮ ಅನ್ವಯವಾಗುತ್ತದೆ.
ಆಕ್ಷೇಪ ಸಲ್ಲಿಸಲು ಕಾಲಾವಕಾಶ: ಫೆ. 28ರಂದು ಪ್ರಕಟ ಗೊಂಡಿರುವ ಈ ಕರಡು ನಿಯಮಗಳಿಗೆ ಪ್ರತಿಯಾಗಿ ಸಾರ್ವಜನಿಕರು ತಮ್ಮ ಆಕ್ಷೇಪ ಹಾಗೂ ಸಲಹೆಗಳನ್ನು “ಜಂಟಿ ಕಾರ್ಯದರ್ಶಿ, ಎಂವಿಎಲ್ ಮತ್ತು ಟೋಲ್ ವಿಭಾಗ, ರಸ್ತೆ ಸಾರಿಗೆ ಮತ್ತು ಹೈವೇ ಸಚಿವಾಲಯ, ಸಾರಿಗೆ ಭವನ, ಸಂಸತ್ ಭವನ ರಸ್ತೆ, ಹೊಸದಿಲ್ಲಿ- 01′ ವಿಳಾಸಕ್ಕೆ ಅಥವಾ omments-morth@gov.in ಇ-ಮೇಲ್ ವಿಳಾಸಕ್ಕೆ ಕರಡು ಪ್ರಕಟವಾದ ದಿನದಿಂದ 30 ದಿನಗಳೊಳಗೆ (ಮಾ. 27) ಕಳುಹಿಸಬಹುದು.