ಕಾರವಾರ: ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿ ಗೀತಾ ಸಾವಿನ ಪ್ರಕರಣದ ತಪ್ಪಿತಸ್ಥರು ಯಾರು ಎಂದು ಈವರೆಗೂ ತಿಳಿಸದೇ ನಿರ್ಲಕ್ಷ್ಯ ವಹಿಸಲಾಗಿದೆ. ಈ ಬಗ್ಗೆ 10 ದಿನಗಳ ಒಳಗೆ ಜಿಲ್ಲಾಡಳಿತ ಸ್ಪಷ್ಟಪಡಿಸದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ಧಿಷ್ಟಾವಧಿ ಧರಣಿ ನಡೆಸಲಾಗುವುದೆಂದು ಸ್ಥಳೀಯ ಮೀನುಗಾರರು ಎಚ್ಚರಿಕೆ ನೀಡಿದ್ದಾರೆ.
ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಈ ಬಗ್ಗೆ ಎಡಿಸಿ ಎಚ್.ಕೆ. ಕೃಷ್ಣಮೂರ್ತಿಅವರಿಗೆ ಮನವಿ ಸಲ್ಲಿಸಿರುವ ಮೀನುಗಾರರು, ಸರ್ವೋದಯನಗರ ನಿವಾಸಿ ಗೀತಾಬಾನಾವಳಿ ಎಂಬ ಬಾಣಂತಿ ಸಂತಾನ ಶಕ್ತಿಹರಣ ಶಸ್ತ್ರ ಚಿಕಿತ್ಸೆಗೆ ದಾಖಲಾದ ವೇಳೆ 2020ರ ಸೆ.3ರಂದು ಮೃತಪಟ್ಟಿದ್ದಳು. ಜಿಲ್ಲಾ ಸರ್ಜನ್ ಆಗಿದ್ದ ಡಾ| ಶಿವಾನಂದ ಕುಡ್ತರಕರ್ ನಿರ್ಲಕ್ಷ್ಯದಿಂದ ಸಾವಾಗಿದೆ ಎಂದು ನಗರಠಾಣೆಯಲ್ಲಿ ಪ್ರಕರಣ ಸಹ ದಾಖಲಾಗಿತ್ತು. ಆದರೆ ಘಟನೆ ನಡೆದು ಆರು ತಿಂಗಳಾದರು ಈವರೆಗೆ ಸಾವಿನ ಪ್ರಕರಣದಲ್ಲಿ ಏನಾಗಿದೆ ಎನ್ನುವುದು ಯಾರಿಗೂ ತಿಳಿಯುತ್ತಿಲ್ಲ ಎಂದಿದ್ದಾರೆ.
ಮರಣೋತ್ತರ ಪರೀಕ್ಷೆ ವರದಿ ಸಹ ಬಂದಿಲ್ಲ. ಪ್ರಕರಣವನ್ನು ಕೆಲವರು ಮುಚ್ಚಿ ಹಾಕಲು ಮಾಡಿದ ಪ್ರಯತ್ನ ಸಹ ಬಹಿರಂಗವಾಗಿ ಎಲ್ಲರಿಗೂ ತಿಳಿದಿದೆ. ಈ ಬಗ್ಗೆತನಿಖಾ ತಂಡ ರಚಿಸಿ ವರದಿ ಸಹ ಸಲ್ಲಿಸಿದ್ದು, ಅದರಲ್ಲಿ ಈ ಸಾವಿಗೆ ಕಾರಣ ಯಾರು, ತಪ್ಪಿತಸ್ಥರು ಯಾರು ಎಂದು ತಿಳಿಸಿಲ್ಲ.ನಿರ್ಲಕ್ಷತನದ ಆರೋಪ ಎದುರಿಸುತ್ತಿರುವ ವೈದ್ಯ ಕುಡ್ತರಕರ್ ವರ್ಗಾಯಿಸಿ, ನಂತರ ಮತ್ತೆಕಾರವಾರಕ್ಕೆ ಮರು ನಿಯುಕ್ತಿಗೊಳಿಸಲಾಗಿದೆ.ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾದರೂ ನಿರ್ಲಕ್ಷ್ಯ ಆರೋಪ ಎದುರಿಸುತ್ತಿರುವವರ ವಿರುದ್ಧ ಇನ್ನೂ ಕ್ರಮ ಕೈಗೊಂಡಿಲ್ಲ. ಕೂಡಲೇ ಈ ಬಗ್ಗೆ ತನಿಖೆ ನಡೆಸಿ ಸಾವಿಗೆ ನಿಖರ ಕಾರಣ ತಿಳಿಸಬೇಕು. ಜೊತೆಗೆ ನಿರ್ಲಕ್ಷ್ಯ ಮಾಡಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಗಿತಾ ಬಾನವಾಳಿ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಉತ್ತರ ಕನ್ನಡ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ರಾಜು ತಾಂಡೇಲ, ಮುಖಂಡರಾದ ವಿನಾಯಕ ಹರಿಕಂತ್ರ,ಎಲಿಷಾ ಎಲಕಪಾಟಿ, ನಗರಸಭೆ ಸದಸ್ಯರಾದ ರೇಷ್ಮಾ ಮಾಳ್ಸೆಕರ್, ಶಿಲ್ಪಾ ನಾಯ್ಕ, ಗುರುದಾಸ ಬಾನವಾಳಿ, ಸುಲಕ್ಷಾ ಬಾನವಾಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು
ಡಾ| ಕುಡ್ತರಕರ್ ಅವರನ್ನು ಇಲ್ಲಿಂದ ವರ್ಗಾಯಿಸಿದರೆ ಇಲ್ಲಿನ ಆಸ್ಪತ್ರೆ ನಡೆಸಲು ಸಮಸ್ಯೆ ಆಗುತ್ತದೆ ಎಂದು ಅಧಿಕಾರಿಗಳು, ಜನಪ್ರತಿನಿಧಿಗಳು ಹೇಳುತ್ತಾರೆ. ಹಾಗಿದ್ದರೆ ಅವರು ನಿವೃತ್ತಿ ಹೊಂದಿದ ಮೇಲೆ ಜಿಲ್ಲಾ ಆಸ್ಪತ್ರೆ ಬಾಗಿಲು ಮುಚ್ಚುತ್ತೀರಾ?
–ರಾಜು ತಾಂಡೇಲ್, ಜಿಲ್ಲಾ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ