Advertisement

ಲಭಿಸದ ಸೀಮೆಎಣ್ಣೆ: ನಾಡದೋಣಿ ಮೀನುಗಾರಿಕೆ ಸ್ಥಗಿತ

11:52 AM Oct 22, 2018 | |

ಕುಂದಾಪುರ: ನಾಡದೋಣಿ ಮೀನುಗಾರರಿಗೆ ಸರಕಾರದಿಂದ ಸಿಗಬೇಕಿದ್ದ ಸಬ್ಸಿಡಿ ದರದ ಸೀಮೆ ಎಣ್ಣೆ ಇನ್ನೂ ಕೂಡ ಸಿಕ್ಕಿಲ್ಲ. ಇದರಿಂದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡದ ಸುಮಾರು 8,322 ನಾಡದೋಣಿಗಳ 27,118 ಮಂದಿ ಮೀನುಗಾರರು ಸಂಕಷ್ಟದಲ್ಲಿದ್ದಾರೆ. 

Advertisement

ಮತ್ಸಕ್ಷಾಮ, ಹವಾಮಾನ ವೈಪರೀತ್ಯದಿಂದ ಮೀನುಗಾರಿಕೆಗೆ ದೊಡ್ಡ ಹೊಡೆತ ಬಿದ್ದಿದ್ದು, ಕರಾವಳಿಯ ನಾಡದೋಣಿ ಮೀನುಗಾರರು ಈಗ ಸಬ್ಸಿಡಿ ದರದಲ್ಲಿ ಸರಕಾರದಿಂದ ಸಿಗಬೇಕಾದ ಸೀಮೆಎಣ್ಣೆ ಕೂಡದ ಸಿಗದೆ ಸಮಸ್ಯೆ ಎದುರಿಸುತ್ತಿದ್ದಾರೆ. ಸೀಮೆಎಣ್ಣೆಯಿಲ್ಲದೆ ಸ್ಥಗಿತ ನಾಡದೋಣಿ ಮೀರುಗಾರರು ಇಷ್ಟು ದಿನ ಉಳಿದಿದ್ದ ಹಾಗೂ ಸಂಗ್ರಹಿಸಿದ್ದ ಸೀಮೆಎಣ್ಣೆಯನ್ನು ಬಳಸಿ ಮೀನುಗಾರಿಕೆಗೆ ನಡೆಸಿದ್ದು, ಈಗ ಅದೂ ಖಾಲಿಯಾಗುತ್ತಿದೆ. ಈ ಕಾರಣ ಕೆಲವು ನಾಡದೋಣಿಗಳು ಮೀನುಗಾರಿಕೆಗೆ ತೆರಳದೇ ಬಂದರಿನಲ್ಲೇ ಲಂಗರು ಹಾಕಿವೆ. 

ತಲಾ 300 ಲೀಟರ್‌ ಅಗತ್ಯ
ಸರಕಾರ ಒಂದು ನಾಡದೋಣಿ ಪರ್ಮಿಟ್‌ಗೆ ಪ್ರತಿ ತಿಂಗಳಿಗೆ 300 ಲೀಟರ್‌ ಸೀಮೆಎಣ್ಣೆ ನೀಡಬೇಕು. ಆದರೆ ಈಗ ಉಡುಪಿ ಜಿಲ್ಲೆಯಲ್ಲಿರುವ 4,332 ನಾಡ ದೋಣಿಗಳ ಪೈಕಿ ಕೇವಲ 2,600 ದೋಣಿಗಳಿಗೆ ಮಾತ್ರ 300 ಲೀಟರ್‌ ನೀಡುತ್ತಿದ್ದು, ಬಾಕಿ ಉಳಿದಿದ್ದಕ್ಕೆ 200 ಲೀಟರ್‌ ಅಷ್ಟೇ ಕೊಡಲಾಗುತ್ತಿದೆ. ಪ್ರತಿ ತಿಂಗಳಿಗೆ 1 ಪರ್ಮಿಟ್‌ಗೆ ಕನಿಷ್ಠ 300 ಲೀಟರ್‌ ಆದರೂ ನೀಡಲಿ ಎನ್ನುವುದು ಮೀನುಗಾರರ ಆಗ್ರಹವಾಗಿದೆ. 

27,118 ಮೀನುಗಾರರು 
ಮಂಗಳೂರಿನಿಂದ ಕಾರವಾರದವರೆಗಿನ ರಾಜ್ಯ ಕರಾವಳಿಯ ಮೂರು ಜಿಲ್ಲೆಗಳಲ್ಲಿ ಒಟ್ಟು 27,118 ಮಂದಿ ನಾಡದೋಣಿ ಮೀನುಗಾರರಿದ್ದಾರೆ. ಈ ಪೈಕಿ ಉಡುಪಿಯಲ್ಲಿ ಅತೀ ಹೆಚ್ಚು ಅಂದರೆ 4,332 ನಾಡದೋಣಿಗಳ 15,148 ಮೀನುಗಾರರಿದ್ದಾರೆ. ದಕ್ಷಿಣ ಕನ್ನಡದ 1,416 ದೋಣಿಗಳಲ್ಲಿ ಸುಮಾರು 4,248 ಮೀನುಗಾರರು ಹಾಗೂ ಉತ್ತರ ಕನ್ನಡದ 2,574 ದೋಣಿಗಳಲ್ಲಿ ಸುಮಾರು 7,722 ಮೀನುಗಾರರು ನಾಡದೋಣಿ ಮೀನುಗಾರಿಕೆಯನ್ನು ಅವಲಂಬಿಸಿದ್ದಾರೆ.

ಈಗ ದುಡ್ಡು ಕೊಟ್ಟರೂ ಸೀಮೆಎಣ್ಣೆ ಎಲ್ಲಿಯೂ ಸಿಗುತ್ತಿಲ್ಲ. ಈಗ ಸಿಗುತ್ತಿರುವ ಮೀನಿನ ಪ್ರಮಾಣ ನೋಡಿದರೆ ಪೆಟ್ರೋಲ್‌ ದುಬಾರಿಯಾಗಿದೆ. ಸಾಮಾನ್ಯವಾಗಿ ಸೆಪ್ಟಂಬರ್‌ ತಿಂಗಳಲ್ಲಿ ಕೊಡಬೇಕಿತ್ತು. ಆದರೆ ಅದಕ್ಕೆ ಬಜೆಟ್‌ನಲ್ಲಿ ಅನುದಾನವೇ ಇಟ್ಟಿಲ್ಲ. ಅದಲ್ಲದೆ ಇದಕ್ಕಾಗಿಯೇ ಮೀನುಗಾರಿಕಾ ಇಲಾಖೆಯು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ 6 ಕೋ.ರೂ. ಅನುದಾನ ಬಿಡುಗಡೆ ಮಾಡಬೇಕು. ಅದನ್ನು ಇನ್ನೂ ನೀಡಿಲ್ಲ. ಇದಕ್ಕಾಗಿ ಸರಕಾರಕ್ಕೆ ಒತ್ತಡ ತರಲಾಗುವುದು. ಅಕ್ಟೋಬರ್‌ ತಿಂಗಳದ್ದು ಇನ್ನೊಂದು ವಾರದಲ್ಲಿ ಸಿಗುವ ನಿರೀಕ್ಷೆಯಿದೆ.
ಮಂಜು ಬಿಲ್ಲವ,  ಅಧ್ಯಕ್ಷರು ನಾಡದೋಣಿ ಮೀನುಗಾರರ ಸಂಘ

Advertisement

ನಾಡದೋಣಿಗಳಿಗೆ ಸೀಮೆಎಣ್ಣೆ ನೀಡಬೇಕು ಎಂದು ಸರಕಾರದಿಂದ ಆದೇಶ ಬಂದಿದೆ. ಈ ಸಂಬಂಧ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೂ ಸರಕಾರದಿಂದ ನಿರ್ದೇಶನ ಬಂದಿದೆ. ಅವರು ಸೀಮೆಎಣ್ಣೆ ನಮಗೆ ನೀಡಬೇಕಿದ್ದು, ಆ ಬಳಿಕ ಅಂದರೆ, ಇನ್ನೊಂದು ವಾರದಲ್ಲಿ ಮೀನುಗಾರರಿಗೆ ಸೀಮೆಎಣ್ಣೆ ಸಿಗುವ ವ್ಯವಸ್ಥೆ ಮಾಡಲಾಗುವುದು. 
ಪಾರ್ಶ್ವನಾಥ ಹಾಗೂ ಚಿಕ್ಕವೀರ ನಾಯ್ಕ‌, ಮೀನುಗಾರಿಕಾ ಇಲಾಖಾ ನಿರ್ದೇಶಕರು

ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next