Advertisement
ಜು. 31ರ ಮಧ್ಯರಾತ್ರಿ ಟ್ರಾಲಿಂಗ್ ನಿಷೇಧ ಕಾಲಾವಧಿ ಕೊನೆಗೊಂಡಿದ್ದು, ಬೆಸ್ತರಲ್ಲಿ ಹಬ್ಬದ ವಾತಾವರಣ ಕಂಡು ಬಂದಿದೆ. ಕಳೆದ 52 ದಿನಗಳಿಂದ ಸಾಂಪ್ರದಾಯಿಕ ದೋಣಿಗಳಲ್ಲಿ ಬಲೆ ಬೀಸಿ ಸಮುದ್ರ ದಡದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಬೆಸ್ತರು ಇದೀಗ ಆಳ ಸಮುದ್ರಕ್ಕೆ ತೆರಳುತ್ತಿದ್ದಾರೆ. ಹೀಗಿರುವಂತೆ ಕೇರಳದ ದಕ್ಷಿಣದಲ್ಲಿ ಭಾರೀ ಮಳೆ ಹಾಗೂ ಸಮುದ್ರ ಪ್ರಕ್ಷುಬ್ಧಗೊಂಡಿರುವ ಹಿನ್ನೆಲೆಯಲ್ಲಿ ಮೀನು ಗಾರಿಕೆಗೆ ಆಳ ಸಮುದ್ರಕ್ಕೆ ತೆರಳದಂತೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿರು ವುದರಿಂದ ಸಹಜವಾಗಿಯೇ ಬೆಸ್ತರಲ್ಲಿ ಆತಂಕ ಮನೆ ಮಾಡಿದೆ.
ಮೀನು ಮಾರುಕಟ್ಟೆ ಸಕ್ರಿಯ
ಮುಂದಿನ ದಿನಗಳಲ್ಲಿ ಹೆಚ್ಚೆಚ್ಚು ಯಾಂತ್ರೀಕೃತ ದೋಣಿಗಳು ಸಮುದ್ರಕ್ಕಿಳಿ ಯುವ ಮೂಲಕ ಮೀನು ಮಾರುಕಟ್ಟೆಯೂ ಸಕ್ರಿಯವಾಗಲಿದೆ. ಇದೇ ವೇಳೆ ಅನ್ಯ ರಾಜ್ಯಗಳಿಂದ ಬರುವ ಮೀನುಗಳಿಗೆ ವಿಷಾಂಶವುಳ್ಳ ರಾಸಾಯನಿಕ ವಸ್ತುಗಳನ್ನು ಹಾಕುತ್ತಿರುವ ಬಗ್ಗೆ ವರದಿಯಾದ ಹಿನ್ನೆಲೆಯಲ್ಲಿ ಮೀನು ಮಾರುಕಟ್ಟೆ ಹಿನ್ನಡೆ ಅನುಭವಿಸಿತ್ತು. ಆದರೆ ಇದೀಗ ರಾಜ್ಯದಲ್ಲಿ ಮೀನುಗಾರಿಕೆ ಆರಂಭಗೊಂಡಿರುವುದರಿಂದ ಕೇರಳದ ಮೀನುಗಾರರು ಬಲೆ ಬೀಸಿ ಪಡೆದ ಮೀನುಗಳು ಮಾರುಕಟ್ಟೆಗೆ ಬರಲಿವೆ. ಇದರಿಂದಾಗಿ ಮತ್ತೆ ಮೀನು ಮಾರುಕಟ್ಟೆ ಹಿಂದಿನಂತೆ ಹಬ್ಬದ ವಾತಾವರಣಕ್ಕೆ ಮರಳಲಿದೆ.ಕೆಲವು ದಿನಗಳ ವರೆಗೆ ಮೀನಿನ ದರ ದುಬಾರಿಯಾಗಿದ್ದು, ಮುಂದಿನ ದಿನಗಳಲ್ಲಿ ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಮೀನು ಮಾರಾಟಗಾರರು ಹೇಳುತ್ತಿದ್ದಾರೆ.
Related Articles
ಆ. 1ರಂದು ಮೀನುಗಾರಿಕೆಗೆ ತೆರಳಿದ್ದ ಬೋಟುಗಳು ಭಾರೀ ಮೀನುಗಳ ಸಹಿತ ದಡ ಸೇರಿವೆ. ಬೋಟ್‌ಗಳಲ್ಲಿ ಬಂದ ಮೀನು ಖರೀದಿಸಲು ನೂರಾರು ಮಂದಿ ಮಹಿಳೆಯರು ಸಮುದ್ರ ಕಿನಾರೆಗೆ ತಲುಪಿದ್ದು, ಮೀನು ಖರೀದಿಯಲ್ಲಿ ಸಕ್ರಿಯವಾಗಿದ್ದಾರೆ. ಮೀನು ಖರೀದಿಸಿ ಮಾರುಕಟ್ಟೆಯಲ್ಲಿ ಮೀನು ಮಾರಾಟ ಮಾಡುವ ಹುಮ್ಮಸ್ಸಿನಲ್ಲಿದ್ದಾರೆ. ಸಣ್ಣ ಗಾತ್ರದ ಬೋಟ್‌ಗಳು ಮಾತ್ರವೇ ಮೀನುಗಾರಿಕೆಯಲ್ಲಿ ತೊಡಗಿವೆ. ದೊಡ್ಡ ಗಾತ್ರದ ಬೋಟ್‌ಗಳು ಹವಾಮಾನ ಇಲಾಖೆಯ ಮುನ್ನೆಚ್ಚರಿಕೆಯ ಹಿನ್ನೆಲೆಯಲ್ಲಿ ಮೀನುಗಾರಿಕೆಗೆ ತೆರಳಲಿಲ್ಲ. ಮುಂದಿನ ಕೆಲವೇ ದಿನಗಳಲ್ಲಿ ಈ ಬೋಟ್‌ಗಳೂ ಕೂಡ ಮೀನುಗಾರಿಕೆಗೆ ತೆರಳಲಿವೆ. ಟ್ರಾಲಿಂಗ್ ನಿಷೇಧದ ಬಳಿಕ ಮೀನುಗಾರಿಕೆಗೆ ತೆರಳಿದ ಯಾಂತ್ರೀಕೃತ ದೋಣಿಗಳಿಗೆ ಪ್ರಥಮ ದಿನ ಸಿಗಡಿ ಮತ್ತು ಬೆರಕೆ ಮೀನಿನ ಮರಿಗಳು ಲಭಿಸಿವೆ.
Advertisement
ಚಿತ್ರ : ಶ್ರೀಕಾಂತ್ ಕಾಸರಗೋಡು