Advertisement

ಆ. 1ರಿಂದ ಮೀನುಗಾರಿಕೆ; ಉತ್ತಮ ಋತುವಿನ ನಿರೀಕ್ಷೆ

02:00 AM Jul 26, 2022 | Team Udayavani |

ಮಂಗಳೂರು: ಎರಡು ತಿಂಗಳ ರಜೆಯ ಬಳಿಕ ಆ. 1ರಂದು ಮೀನುಗಾರಿಕೆ ಮರು ಆರಂಭಗೊಳ್ಳಲಿದ್ದು, ಉತ್ತಮ ಫಸಲಿನ ನಿರೀಕ್ಷೆಯೊಂದಿಗೆ ಕಡಲಿಗಿಳಿಯಲು ಮೀನುಗಾರರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

Advertisement

ಮೀನುಗಾರಿಕೆಗೆ ಬೋಟುಗಳನ್ನು, ಎಂಜಿನ್‌ಗಳನ್ನು ದುರಸ್ತಿಗೊಳಿಸಿ ಹಾಗೂ ಬಲೆಗಳನ್ನು ಸಿದ್ಧಗೊಳಿಸುವ ಕಾರ್ಯ ನಡೆದಿದೆ. ಜು. 31ಕ್ಕೆ ಐಸ್‌ಪ್ಲಾಂಟ್‌ಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭಿಸಲಿವೆ.

ಮೀನುಗಾರಿಕೆ ದೋಣಿಗಳಲ್ಲಿ ದುಡಿಯುವವರಲ್ಲಿ ಬಹುಪಾಲು ಆಂಧ್ರ, ಒಡಿಶಾ, ತಮಿಳುನಾಡು ಸೇರಿದಂತೆ ಹೊರ ರಾಜ್ಯಗಳಿಗೆ ಸೇರಿದವರಾಗಿದ್ದು ರಜೆಯಲ್ಲಿ ತೆರಳಿದವರು ಮರಳಿ ಬರುತ್ತಿದ್ದಾರೆ.

ಉತ್ತಮ ಫಸಲಿನ ನಿರೀಕ್ಷೆ
ಕಳೆದ ಸಾಲಿನ ಮೀನುಗಾರಿಕೆ ಋತುವಿನ ಕೊನೆಯ ಅವಧಿಯಲ್ಲಿ ಡೀಸೆಲ್‌ ದರ ವಿಪರೀತ ಏರಿಕೆಯಾಗಿರುವುದು ಮತ್ತು ಅದಕ್ಕೆ ಅನುಗುಣವಾಗಿ ಮೀನಿನ ಲಭ್ಯತೆ ಇಲ್ಲದ ಕಾರಣ ಬಹಳಷ್ಟು ದೋಣಿಗಳು ಅವಧಿಗೆ ಮುಂಚಿತವಾಗಿಯೇ ದಡ ಸೇರಿದ್ದವು. ಈ ಬಾರಿ ಹವಾಮಾನ ಅನುಕೂಲಕರವಿದ್ದರೆ ಆ. 1ರಂದೇ ದೋಣಿಗಳು ಕಡಲಿಗಿಳಿಯಲಿವೆ. ಕಳೆದ ಸಾಲಿನಲ್ಲಿ ಕೊನೆಯ ಅವಧಿ ಬಿಟ್ಟರೆ ಉಳಿದಂತೆ ಮೀನುಗಾರಿಕೆ ಉತ್ತಮ ವಾಗಿತ್ತು. ಈ ಬಾರಿಯೂ ಉತ್ತಮ ಫಸಲಿನ ನಿರೀಕ್ಷೆ ನಮ್ಮದಾಗಿದೆ ಎನ್ನುತ್ತಾರೆ ಮೀನು ಗಾರರ ಮುಖಂಡ ಮೋಹನ್‌ ಬೆಂಗ್ರೆ. ಬೋಟುಗಳಿಗೆ ತಿಂಗಳಿಗೆ ಸುಮಾರು 15,000 ಲೀಟರ್‌ ಡೀಸೆಲ್‌ ಅವಶ್ಯವಿರುತ್ತದೆ.

ಸರಕಾರದಿಂದ ತಿಂಗಳಿಗೆ 9,000 ಲೀ. ಡೀಸೆಲ್‌ ತೆರಿಗೆ ರಹಿತವಾಗಿ ದೊರೆಯುತ್ತದೆ. ಬಾಕಿ ಡೀಸೆಲನ್ನು ನಿಗದಿತ ದರದಲ್ಲಿ ಖರೀದಿಸಬೇಕಾಗುತ್ತದೆ. ಕಳೆದ ಸಾಲಿಗೆ ಹೋಲಿಸಿದರೆ ಈ ಬಾರಿ ಡೀಸೆಲ್‌ ದರದಲ್ಲಿ ಸ್ವಲ್ಪ ಇಳಿಕೆಯಾಗಿರುವುದು ತುಸು ಹೊರೆ ಕಡಿಮೆ ಮಾಡಿದೆ ಎಂದವರು ಹೇಳುತ್ತಾರೆ.

Advertisement

ಮೀನುಗಾರಿಕೆಗೆ ಅವಶ್ಯ ಸಿದ್ಧತೆಗಳನ್ನು ಮಾಡಲಾಗಿದೆ. ಊರಿಗೆ ತೆರಳಿದ ಮೀನು ಕಾರ್ಮಿಕರಿಗೆ ಜು. 28ರೊಳಗೆ ಮರಳುವಂತೆ ತಿಳಿಸಲಾಗಿದೆ. ಮೀನುಗಾರಿಕೆಗೆ ಅವಶ್ಯ ಸಿದ್ಧತೆಗಳನ್ನು ಮಾಡಲಾಗಿದೆ. ಕಳೆದ ವರ್ಷದಂತೆ ಈ ವರ್ಷವೂ ಉತ್ತಮ ಮೀನು ಫಸಲು ಲಭ್ಯವಾಗುವ ನಿರೀಕ್ಷೆ ಯಲ್ಲಿದ್ದೇವೆ ಎನ್ನುತ್ತಾರೆ ಎನ್ನುತ್ತಾರೆ ಕರ್ನಾಟಕ ಪರ್ಸಿನ್‌ ಮೀನುಗಾರರ ಸಂಘದ ಅಧ್ಯಕ್ಷ ಶಶಿ ಕುಮಾರ್‌ ಬೆಂಗ್ರೆ ಮತ್ತು ಮಂಗಳೂರು ಟ್ರಾಲ್‌ಬೋಟು ಮೀನುಗಾರರ ಸಂಘದ ಅಧ್ಯಕ್ಷ ನಿತಿನ್‌ ಕುಮಾರ್‌.

ಕಳೆದೆರಡು ವರ್ಷಗಳಲ್ಲಿ ಸಿಕ್ಕಿದ್ದೆಷ್ಟು?
ಕಳೆದ ಋತುವಿನಲ್ಲಿ ಕೊನೆಯ 3 ತಿಂಗಳು ಬಿಟ್ಟರೆ ಉಳಿದಂತೆ ಮೀನು ಫಸಲು ಉತ್ತಮವಾಗಿತ್ತು. ಮಂಗಳೂರಿನಲ್ಲಿ 2020-21ನೇ ಸಾಲಿನಲ್ಲಿ 1,924.50 ಕೋ.ರೂ. ಮೌಲ್ಯದ 1.39 ಲಕ್ಷ ಮೆ.ಟನ್‌, ಮೀನು ಹಿಡಿಯ ಲಾಗಿತ್ತು. 2021-22ನೇ ಸಾಲಿನಲ್ಲಿ ಇದರ ದುಪ್ಪಟ್ಟು ದೊರಕಿದ್ದು 3,801.60 ಕೋ.ರೂ. ಮೌಲ್ಯದ 2.91 ಲಕ್ಷ ಮೆ.ಟನ್‌ ಮೀನು ಹಿಡಿಯಲಾಗಿತ್ತು.

ಉಡುಪಿ ಜಿಲ್ಲೆಯಲ್ಲಿ 2020-21ರಲ್ಲಿ 1,109.58 ಕೋ.ರೂ. ಮೌಲ್ಯದ 1.04 ಲಕ್ಷ ಟನ್‌ ಮೀನು ಹಿಡಿಯಲಾಗಿದೆ. 2021-22ರಲ್ಲಿ 1850.19 ಕೋ.ರೂ. ಮೌಲ್ಯದ 1.80 ಲಕ್ಷ ಮೆ. ಟನ್‌ ಮೀನು ಹಿಡಿಯಲಾಗಿದೆ.

ಮೀನುಗಾರಿಕೆ ದೋಣಿಗಳೆಷ್ಟು?
ಮಂಗಳೂರು ಮೀನುಗಾರಿಕೆ ದಕ್ಕೆಯಲ್ಲಿ ಪರ್ಸಿನ್‌ ಹಾಗೂ ಟ್ರಾಲ್‌ ಸೇರಿ ಒಟ್ಟು 1,400 ಬೋಟುಗಳು ಹಾಗೂ ಮಲ್ಪೆ ಹಾಗೂ ಗಂಗೊಳ್ಳಿ ಸೇರಿ ಟ್ರಾಲ್‌, ಪರ್ಸಿನ್‌ ಸೇರಿ ಸುಮಾರು 2,166 ಬೋಟುಗಳು ಸಮುದ್ರ ಮೀನುಗಾರಿಕೆಯಲ್ಲಿ ನಿರತವಾಗಿವೆ. ಆಳಸಮುದ್ರ ಬೋಟುಗಳು ಪ್ರಥಮವಾಗಿ ಕಡಲಿಗಿಳಿಯುತ್ತವೆ.

ಜೂ. 1ರಿಂದ ಮೀನುಗಾರಿಕೆಗೆ ವಿಧಿಸಿರುವ 61 ದಿನಗಳ ನಿರ್ಬಂಧ ಜು. 31ಕ್ಕೆ ಮುಕ್ತಾಯಗೊಳ್ಳಲಿದೆ. ಆ. 1ರಿಂದ ಬೋಟುಗಳು ಮೀನುಗಾರಿಕೆಗೆ ನಡೆಸಬಹುದಾಗಿದೆ.
– ಹರೀಶ್‌ ಕುಮಾರ್‌, ಮೀನುಗಾರಿಕೆ ಜಂಟಿ ನಿರ್ದೇಶಕರು, ದಕ್ಷಿಣ ಕನ್ನಡ ಜಿಲ್ಲೆ
– ಶಿವಕುಮಾರ್‌, 
ಮೀನುಗಾರಿಕೆ ಉಪನಿರ್ದೇಶಕರು, ಉಡುಪಿ ಜಿಲ್ಲೆ

Advertisement

Udayavani is now on Telegram. Click here to join our channel and stay updated with the latest news.

Next