Advertisement

ಮೀನುಗಾರಿಕೆ: ಕೊನೆಗೂ ತುಸು ಚೇತರಿಕೆ

10:45 AM Mar 25, 2018 | Team Udayavani |

ಮಹಾನಗರ: ಅರಬ್ಬಿ ಸಮುದ್ರದಲ್ಲಿ ಉಂಟಾದ ವಾಯು ಭಾರ ಕುಸಿತದಿಂದ ಬಹುತೇಕ ಸ್ಥಗಿತಗೊಂಡಿದ್ದ ಮೀನುಗಾರಿಕೆ ನಿಧಾನವಾಗಿ ಆರಂಭವಾಗಿದೆ. ಎರಡು ದಿನಗಳಿಂದ ಕೆಲವು ಬೋಟುಗಳು ಮೀನುಗಾರಿಕೆಗೆ ತೆರಳುತ್ತಿರುವುದರಿಂದ ಮಾರುಕಟ್ಟೆಯಲ್ಲೂ ಮೀನಿನ ಲಭ್ಯತೆ ಹೆಚ್ಚುವ ಸಂಭವವಿದೆ.

Advertisement

ಆದರೆ ಕೆಲವು ದಿನಗಳಿಂದ ಮೀನುಗಾರಿಕೆ ಸ್ಥಗಿತಗೊಂಡು ಮಾರುಕಟ್ಟೆಯಲ್ಲಿ ಮೀನುಗಳ ಕೊರತೆ ಉದ್ಭವಿಸಿತ್ತು. ದರದಲ್ಲೂ ಏರಿಕೆಯಾಗಿತ್ತು. ವಾಯುಭಾರ ಕುಸಿತದಿಂದ ಸಮುದ್ರ ಪ್ರಕ್ಷುಬ್ಧಗೊಂಡ ಹಿನ್ನೆಲೆಯಲ್ಲಿ ಮೀನುಗಾರಿಕೆಗೆ ತೆರಳುವಂತಿರಲಿಲ್ಲ. ಹೆಚ್ಚಿನ ಬೋಟುಗಳು ನಗರದ ಮೀನುಗಾರಿಕಾ ಬಂದರಿನಲ್ಲಿ ಲಂಗರು ಹಾಕಿಕೊಂಡಿದ್ದವು. ಮತ್ಸ್ಯೋದ್ಯಮಕ್ಕೆ ಕೋಟಿ ರೂ.ಗಿಂತಲೂ ಹೆಚ್ಚು ನಷ್ಟವಾಗಿತ್ತು. ಸಾಮಾನ್ಯವಾಗಿ ಒಂದು ಬೋಟ್‌ ಆಳದ ಸಮುದ್ರ ಮೀನುಗಾರಿಕೆಗೆ ತೆರಳಿದರೆ 11 ದಿನಗಳ ಬಳಿಕವಷ್ಟೇ ವಾಪಾಸ್‌ ಆಗಮಿಸುತ್ತದೆ. ಹೀಗಾಗಿ, ಕಾರ್ಮಿಕರು ಕೆಲಸವಿಲ್ಲದೆ ಒಂದು ವಾರದಿಂದ ಬೋಟಿನಲ್ಲಿಯೇ ಜೀವನ ನಡೆಸುವಂತಾಗಿತ್ತು.

ಮಂಗಳೂರಿನ ಬಂದರಿನಿಂದ ಸಾಮಾನ್ಯವಾಗಿ ಮಹಾರಾಷ್ಟ್ರ ಕಡೆಗೆ ಮೀನುಗಾರಿಕೆಗೆ ಅನೇಕ ಬೋಟುಗಳು ತೆರಳುತ್ತವೆ. ಒಂದು ಬೋಟು ಸುಮಾರು 7 ಲಕ್ಷ ರೂ. ಬೆಲೆಯ ಮೀನುಗಳನ್ನು ಹೊತ್ತು ತರುತ್ತದೆ. ಆದರೆ, ಇದೀಗ ಮೀನುಗಾರರು ಸಮುದ್ರಕ್ಕೆ ಇಳಿಯುವುದನ್ನು ಎದುರು ನೋಡುತ್ತಾ ದಿನ ದೂಡುವಂತಾಗಿತ್ತು ಎಂದು ಮೀನುಗಾರಿಕಾ ಸಂಘಟನೆಯವರು ‘ಉದಯವಾಣಿ’ಗೆ ತಿಳಿಸಿದ್ದಾರೆ.

ಮೀನುಗಳ ದರ ಹೆಚ್ಚಳ
ಸಾಮಾನ್ಯವಾಗಿ ಜನವರಿ, ಫೆಬ್ರವರಿ ತಿಂಗಳಿನಲ್ಲಿ ಸಮುದ್ರದಲ್ಲಿ ಮೀನುಗಳು ಕಡಿಮೆ ಪ್ರಮಾಣದಲ್ಲಿ ಸಿಗುತ್ತವೆ. ಆದರೆ ಈ ವರ್ಷ ಮೀನುಗಳ ತುಸು ಸಂಖ್ಯೆ ಹೆಚ್ಚಿದ್ದು, ಇದರಿಂದಾಗಿ ಮೀನುಗಾರರು ಕೂಡ ಖುಷಿಯಲ್ಲಿದ್ದರು. ಅನಿರೀಕ್ಷಿತವೆಂಬಂತೆ ಕೇರಳದ ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಳದಿಂದಾಗಿ ಬೋಟುಗಳು ಸಮುದ್ರಕ್ಕೆ ಇಳಿಯದಂತಾಗಿದ್ದು, ಇದರ ಪರಿಣಾಮ ಗ್ರಾಹಕರೂ ಎದುರಿಸುವಂತಾಗಿತ್ತು.

ಸಾಲು ಸಾಲು ರಜೆಯ ಸಮಯದಲ್ಲಿ, ವೀಕೆಂಡ್‌ ಸಮಯದಲ್ಲಿ ಹಲವರು ಮೀನು ಖಾದ್ಯಗಳನ್ನು ಬಳಸುತ್ತಾರೆ. ಆದರೆ ಎರಡು ವಾರಗಳ ಹಿಂದೆ ಕಡಿಮೆ ಇದ್ದ ಮೀನಿನ ದರ ಹೆಚ್ಚಾಗಿತ್ತು. ಅಂಜಲ್‌ ಮೀನು ಕೆ.ಜಿ.ಗೆ 450 ರೂ. ಇದ್ದದ್ದು 650 ರೂ. ಆಗಿತ್ತು. 80 ರೂ. ಇದ್ದ ಬಂಗುಡೆ ಮೀನು ದೊಡ್ಡದು ಸುಮಾರು 180 ರೂ.ಗೆ ಏರಿಕೆಯಾಗಿತ್ತು ಬೂತಾಯಿ ಮೀನು ಸಮರ್ಪಕವಾಗಿ ಪೂರೈಕೆಯಾಗುತ್ತಿರಲಿಲ್ಲ.

Advertisement

ದಿನಗೂಲಿ ಕೆಲಸಗಾರರಿಗೆ ಸಂಕಷ್ಟ
ಮೀನುಗಾರಿಕಾ ಬಂದರಿನಲ್ಲಿ ಸುಮಾರು 30 ಸಾವಿರ ಮಂದಿ ನೇರವಾಗಿ ಕೆಲಸ ಮಾಡುತ್ತಿದ್ದಾರೆ. ಪರೋಕ್ಷವಾಗಿ ಇಷ್ಟೇ ಮಂದಿ ಅವಲಂಬಿಸಿದ್ದು, ಇವರೆಲ್ಲರೂ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಸಾಮಾನ್ಯವಾಗಿ ಒಂದು ಬೋಟು ಸಮುದ್ರದಲ್ಲಿ ಮೀನು ಹಿಡಿದು ತಂದರೆ, ಅದರಿಂದ ಐಸ್‌ ಮಾರಾಟಗಾರರು, ಬೋಟುಗಳಿಂದ ಮೀನು ತೆಗೆಯುವ ಕಾರ್ಮಿಕರಿಗೂ ಕೆಲಸ ಸಿಗುವ ಜತೆಗೆ ವ್ಯಾಪಾರವೂ ಆಗುತ್ತದೆ. ಬೋಟುಗಳು ಲಂಗರು ಹಾಕಿರುವುದರಿಂದ ಮೀನುಗಾರರು ಮಾತ್ರವಲ್ಲ ಅವರನ್ನು ಅವಲಂಬಿಸಿಕೊಂಡು ಜೀವನ ಸಾಗಿಸುತ್ತಿರುವ ಇತರೆ ಕಾರ್ಮಿಕರು ಹಾಗೂ ವ್ಯಾಪಾರಸ್ಥರೂ ಸಂಕಷ್ಟ ಎದುರಿಸುವಂತಾಗಿತ್ತು.

ಮಾಲಕರಿಗೆ ಸಂಕಷ್ಟ
ವಾಯುಭಾರ ಕುಸಿತದ ಕಾರಣದಿಂದಾಗಿ ಸಮರ್ಪಕವಾಗಿ ಮೀನುಗಾರಿಕೆ ನಡೆಯುತ್ತಿಲ್ಲ. ಅನೇಕ ಬೋಟ್‌ಗಳು ಬಂದರಿನಲ್ಲಿಯೇ ಲಂಗರು ಹಾಕಿದ್ದವು. ಇದರಿಂದಾಗಿ ಮಾಲಕರು ಕಾರ್ಮಿಕರಿಗೆ ನೀಡುವ ಸಂಬಳವನ್ನು ನೀಡುತ್ತಿದ್ದು, ಸಂಕಷ್ಟ ಅನುಭವಿಸುವಂತಾಗಿತ್ತು.
– ರತ್ನಾಕರ ಸುವರ್ಣ,
ಜಿಲ್ಲಾಧ್ಯಕ್ಷ,ಆಲ್‌ ಇಂಡಿಯ
ಮೊಗವೀರ ಅಸೋಸಿಯೇಷನ್ 

ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next